ಕನ್ನಡಪ್ರಭ ವಾರ್ತೆ ಮಳವಳ್ಳಿ

ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಅರ್ಹ ಮತದಾರರ ಹೆಸರು ಬಿಟ್ಟು ಹೋಗದಂತೆ ಕಾಂಗ್ರೆಸ್ ಕಾರ್ಯಕರ್ತರು ಎಚ್ಚರಿಕೆ ವಹಿಸಬೇಕು ಎಂದು ಮಾಜಿ ಶಾಸಕ ನಂಜುಂಡಸ್ವಾಮಿ ತಿಳಿಸಿದರು.

ಪಟ್ಟಣದ ರೈತ ಸಮುದಾಯ ಭವನದಲ್ಲಿ ಚುನಾವಣಾ ಆಯೋಗ ಕೈಗೊಂಡಿರುವ ಎಸ್‌ಐಆರ್ ಸಂಬಂಧಿಸಿದಂತೆ ಮಾಹಿತಿ ನೀಡಲು ಹಮ್ಮಿಕೊಂಡಿದ್ದ ತರಬೇತಿ ವಿಶೇಷ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿ, ಅರಂಭವಾಗಿರುವ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ತೊಡಗುವ ಬೂತ್‌ ಮಟ್ಟದ ಅಧಿಕಾರಿಗಳು (ಬಿಎಲ್‌ಓ) ಪರಿಷ್ಕರಣೆ ವೇಳೆ ನಿಗಾ ಇಡಬೇಕೆಂದು ಸಲಹೆ ನೀಡಿದರು.

ಹೊರ ರಾಜ್ಯಗಳಲ್ಲಿ ನಡೆದ ಪರಿಷ್ಕರಣೆ ಮಾದರಿಯಲ್ಲಿಯೇ ಕರ್ನಾಟಕದಲ್ಲೂ ಕಾಂಗ್ರೆಸ್‌ನ ಸಂಪ್ರದಾಯಿಕ ಮತದಾರರ ಹೆಸರುಗಳನ್ನು ವ್ಯವಸ್ಥಿತವಾಗಿ ಡಿಲಿಟ್ ಮಾಡುವ ಷಡ್ಯಂತ್ರ ನಡೆಯಬಹುದು. ಮತದಾರರ ಪಟ್ಟಿಯ ಕೆಲಸಗಳನ್ನು ಸೂಕ್ಷ್ಮವಾಗಿ ಗಮನಿಸಲು ವಿಶೇಷ ವಾರ್‌ ರೂಮ್ ಸ್ಥಾಪಿಸಲಾಗಿದೆ. ಜೊತೆಗೆ ಜಿಲ್ಲಾವಾರು ಮತ್ತು ವಿಧಾನಸಭಾ ಕ್ಷೇತ್ರವಾರು ವೀಕ್ಷರನ್ನು ನೇಮಕ ಮಾಡಲಾಗಿದೆ. ವ್ಯಾತ್ಯಾಸ ಕಂಡು ಬಂದಲ್ಲಿ ತಕ್ಷಣದಲ್ಲಿಯೇ ಮಾಹಿತಿ ನೀಡಬೇಕೆಂದು ಕರೆ ನೀಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ಕಾಂಗ್ರೆಸ್ ಮತಗಳು ಪರಿಷ್ಕರಣೆ ವೇಳೆ ಕೈಬಿಟ್ಟು ಹೋಗದಂತೆ ಪಕ್ಷದಿಂದ ಬಿಎಲ್‌ಒಗಳಿಗೆ ತರಬೇತಿ ನೀಡಲಾಗುತ್ತಿದೆ. ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಜವಾಬ್ದಾರಿಯಿಂದ ಎಚ್ಚರಿಕೆ ವಹಿಸಿ ಸಂವಿಧಾನ ಕೊಟ್ಟಿರುವ ಮತದಾನದ ಹಕ್ಕು ಕಳೆದುಕೊಳ್ಳದ ರೀತಿಯಲ್ಲಿ ಗಮನ ಹರಿಸಬೇಕೆಂದರು.


ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿರಾಜು, ಗ್ಯಾರಂಟಿ ಯೋಜನೆ ಅನುಷ್ಠಾನ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ, ಟಿಎಪಿಸಿಎಂಎಸ್ ಅಧ್ಯಕ್ಷ ಲಿಂಗರಾಜು, ನಿರ್ದೇಶಕರಾದ ಕೆ.ಜೆ.ದೇವರಾಜು, ಮುಖಂಡರಾದ ಜಯರಾಜು, ಪ್ರಕಾಶ್, ಕುಳ್ಳಚನ್ನಂಕಯ್ಯ, ಸವಿತ, ಶ್ರೀಕಾಂತ್ ಸೇರಿದಂತೆ ಇತರರು ಇದ್ದರು.