ಸಾರಾಂಶ
ಹಿರೇಕೆರೂರು: ತಾಲೂಕಿನ ಹಂಸಭಾವಿ ಗ್ರಾಮದ ಶಿವಯೋಗೇಶ್ವರ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ತೆಂಗಿನ ಮರ ಬಿದ್ದಿದ್ದರಿಂದ ವಿದ್ಯುತ್ ತಂತಿ ತಗುಲಿ ಓರ್ವ ವಿದ್ಯಾರ್ಥಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಸೋಮವಾರ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಶಾಲಾ ಆಡಳಿತ ಮಂಡಳಿಯವರಿಂದ ಮಾಹಿತಿ ಪಡೆದ ಶೇಖರಗೌಡ ರಾಮತ್ನಾಳ, ಮುಂದೆ ಹೀಗೆ ಆಗದಂತೆ ಶಾಲೆ ಆಡಳಿತ ಮಂಡಳಿಗೆ ಹಾಗೂ ತಾಲೂಕ ಕ್ಷೇತ್ರ ಶಿಕ್ಷಣಾಕಾರಿಗಳಿಗೆ ಎಚ್ಚರಿಕೆ ನೀಡಿದರು. ಶಾಲಾ- ಕಾಲೇಜು ಆವರಣದಲ್ಲಿ ಯಾವುದೆ ಹೈವೋಲ್ಟೇಜ್ ವಿದ್ಯುತ್ ತಂತಿ ಅಥವಾ ಟ್ರಾನ್ಸಫಾರ್ಮರ್ ಇರಬಾರದು. ಕೆಲವು ಶಾಲಾ, ಕಾಲೇಜು ಆವರಣದಲ್ಲಿ ಕಂಡುಬಂದರೆ ಕೂಡಲೇ ಅವುಗಳನ್ನು ತೆರವುಗೊಳಿಸಬೇಕೆಂದು ಹೆಸ್ಕಾಂ ಸಿಬ್ಬಂದಿಗೆ ತಿಳಿಸಿದರು.ನಂತರ ಮೃತಪಟ್ಟ ವಿದ್ಯಾರ್ಥಿ ಮನೆಗೆ ಹಾಗೂ ವಿದ್ಯುತ್ ಸ್ಪರ್ಶದಿಂದ ಗಾಯಗೊಂಡ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಪಾಲಕರಿಗೆ ಸಾಂತ್ವನ ಹೇಳಿದರು. ಮೃತಪಟ್ಟ ವಿದ್ಯಾರ್ಥಿಗೆ ಶಿಕ್ಷಣ ಇಲಾಖೆಯಿಂದ 1.25 ಲಕ್ಷ ರು. ಹಾಗೂ ರಾಜ್ಯ ಮಕ್ಕಳ ರಕ್ಷಣಾ ಆಯೋಗ ಪ್ರತಿ ತಿಂಗಳು 4 ಸಾವಿರದಂತೆ 48 ಸಾವಿರ ರು. ಇಲಾಖೆಯಿಂದ ಕೊಡಿಸುವುದಾಗಿ ಹೇಳಿದರು.ನಂತರ ಗ್ರಾಮದ ಉರ್ದು ಶಾಲೆಗೆ ಭೇಟಿ ನೀಡಿದ ಅವರು ಶಾಲೆಯ ಶೌಚಾಲಯ ಹಾಗೂ ಸೋರುತ್ತಿದ್ದ ಕೊಠಡಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಸಮಸ್ಯೆಯನ್ನು ಸರಿಪಡಿಸುವಂತೆ ಬಿಇಒ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರಿಗೆ ಸಲಹೆ ನೀಡಿದರು.ಸ್ಥಳದಲ್ಲಿ ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಅಧಿಕಾರಿ ಶೈಲಾ ಕುರಹಟ್ಟಿ, ಸಿಬ್ಬಂದಿ ವಿನಯ ಗುಡಗೂರ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರ ಎನ್., ಮೃತ್ಯುಂಜಯ ವಿದ್ಯಾಪೀಠದ ಆಡಳಿತ ಅಧಿಕಾರಿ ಸತೀಶ ಕಬ್ಬಿಣದ, ಸ್ಥಳೀಯ ಪೊಲೀಸ್ ಅಧಿಕಾರಿ ಮಾಳಪ್ಪ ಚಿಪಲಕಟ್ಟಿ, ಹೆಸ್ಕಾಂ ಸಿಬ್ಬಂದಿ ಇದ್ದರು.ಚಿರತೆ ದಾಳಿ: ವ್ಯಕ್ತಿ ಪಾರು
ರಾಣಿಬೆನ್ನೂರು: ಚಿರತೆ ದಾಳಿಯಿಂದ ವ್ಯಕ್ತಿಯೊಬ್ಬ ಪ್ರಾಣಾಪಾಯದಿಂದ ಪಾರಾದ ಘಟನೆ ಸೋಮವಾರ ತಾಲೂಕಿನ ಐರಣಿ ತಾಂಡಾ ಬಳಿ ಜರುಗಿದೆ. ರುದ್ರಪ್ಪ ಲಮಾಣಿ(47) ದಾಳಿಗೆ ಒಳಗಾದ ವ್ಯಕ್ತಿ.ರುದ್ರಪ್ಪ ಬೆಳಗಿನ ಜಾವ ಬಹಿರ್ದೆಸೆಗೆ ಹೊಲದ ಬಳಿ ತೆರಳಿದಾಗ ಏಕಾಏಕಿ ಚಿರತೆ ಆತನ ಮೇಲೆ ಹಿಂದಿನಿಂದ ದಾಳಿ ನಡೆಸಿದೆ. ಇದರಿಂದ ವಿಚಲಿತನಾಗದ ರುದ್ರಪ್ಪ ಕೈಗೆ ಸಿಕ್ಕ ಬಡಿಗೆ ತೆಗೆದುಕೊಂಡು ಚಿರತೆಯನ್ನು ಓಡಿಸಿದ್ದಾನೆ. ಆದರೆ ದಾಳಿ ಮಾಡಿದಾಗ ಆತನ ಮೈಮೇಲೆ ಗಾಯಗಳಾಗಿವೆ. ಗಾಯಾಳುವನ್ನು ತಕ್ಷಣ ರಾಣಿಬೆನ್ನೂರು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ಪರಿಸ್ಥಿತಿ ಅವಲೋಕಿಸಿ ಚಿರತೆ ಸೆರೆಗಾಗಿ ಆ ಪ್ರದೇಶದಲ್ಲಿ ಬೋನು ಇರಿಸಿದ್ದಾರೆ.