ಸಾರಾಂಶ
ತಾಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಮಾಡಿದ ಬೆಳಗಾವಿ ಸಿಇಒ ರಾಹುಲ್ ಶಿಂಧೆ ಅವರು ಕುಡಿಯುವ ನೀರು ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು.
ಕನ್ನಡಪ್ರಭ ವಾರ್ತೆ ಖಾನಾಪೂರ
ಬೇಸಿಗೆ ಅವಧಿಯಲ್ಲಿ ತಾಲೂಕಿನ ಯಾವ ಗ್ರಾಮಗಳಲ್ಲೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಸೂಚನೆ ನೀಡಿದರು.ತಾಲೂಕು ಪಂಚಾಯತ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದಕ್ಕಾಗಿ ಈಗಲೇ ಎಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಒಂದು ಅಥವಾ ಎರಡು ಖಾಸಗಿ ಬೋರವೆಲ್‌ಗಳನ್ನು ಗುರುತಿಸಿ ಇಟ್ಟುಕೊಳ್ಳಬೇಕು. ಇದರಿಂದ ತುರ್ತು ಸಂದರ್ಭಗಳಲ್ಲಿ ನೀರು ಪೂರೈಕೆ ಮಾಡಲು ಅನುಕೂಲವಾಗುತ್ತದೆ ಎಂದು ನಿರ್ದೇಶನ ನೀಡಿದರು.
ನರೇಗಾ ಯೋಜನೆಯಡಿ ತಾಲೂಕಿನ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ತಮ್ಮ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಅಡುಗೆ ಕೋಣೆಗಳನ್ನು ಪರಿಶೀಲಿಸಬೇಕು. ದುಸ್ಥಿತಿಯಲ್ಲಿರುವ ಅಡುಗೆ ಕೋಣೆಗಳನ್ನು ದುರಸ್ತಿ ಮಾಡಿಸಬೇಕು ಎಂದು ಸೂಚಿಸಿದರು. ಅಂಗನವಾಡಿ ಕೇಂದ್ರಗಳಿಗೆ ನಿಯಮಿತವಾಗಿ ಆಹಾರ ಪೂರೈಕೆ ಮಾಡಬೇಕು. ಆಹಾರ ಧಾನ್ಯಗಳ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನರೇಗಾ ಯೋಜನೆಯಡಿ ಬೋರವೆಲ್ ರೀಚಾರ್ಜ್ ಫಿಟ್‌ಗಳನ್ನು ಮಾಡಿಕೊಡುವಂತೆ ಹೇಳಿದರು.ನರೇಗಾ ಯೋಜನೆಯಡಿ ಕೂಲಿಕಾರರಿಗೆ ನೂರು ದಿನಗಳವರೆಗೆ ಕೆಲಸ ನೀಡಬೇಕು. ಮಾನವ ದಿನಗಳ ಸೃಜನೆಗೆ ನಿಗದಿಪಡಿಸಿರುವ ಗುರಿಯನ್ನು ಸಾಧಿಸಬೇಕು. ಎನ್.ಎಮ್.ಎಮ್.ಎಸ್. ಹಾಜರಾತಿಯನ್ನು ಶೇ.100 ರಷ್ಟು ಮಾಡಬೇಕು. ಎನ್.ಆರ್.ಎಲ್.ಎಮ್. ಯೋಜನೆಯಡಿ ಸ್ವಸಹಾಯ ಸಂಘಗಳಿಗೆ ಸ್ವ ಉದ್ಯೋಗವನ್ನು ಒದಗಿಸಲು ತಾಪಂ ಹಾಗೂ ಗ್ರಾಪಂ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ವೀರನಗೌಡ ಏಗನಗೌಡರ, ಸಹಾಯಕ ನಿರ್ದೇಶಕ ರೂಪಾಲಿ ಬಡಕುಂದ್ರಿ, ವಿಜಯ ಕೋತಿನ್ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ತಾಪಂ ಅಧಿಕಾರಿಗಳು, ಸಿಬ್ಬಂದಿ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇನ್ನಿತರರು ಹಾಜರಿದ್ದರು.ಶಾಲೆ-ಅಂಗನವಾಡಿಗೆ ಭೇಟಿ:
ಇದಕ್ಕೂ ಮೊದಲು ಸಿಇಓ ರಾಹುಲ್ ಶಿಂಧೆ ಅವರು ಇದ್ದಲಹೊಂಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮನರೇಗಾ ಯೋಜನೆಯಡಿ ಕೈಗೊಂಡಿರುವ ಪೇವರ್ಸ್ ಹಾಗೂ ಅಡುಗೆ ಕೋಣೆ ಕಾಮಗಾರಿಯನ್ನು ಪರಿಶೀಲಿಸಿದರು. ಕಾಮಗಾರಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಮೂಲಸೌಕರ್ಯಗಳನ್ನು ಪರಿಶೀಲಿಸಿದರು. ಅಂಗನವಾಡಿಯಲ್ಲಿ ಸಿದ್ಧಪಡಿಸುತ್ತಿರುವ ಆಹಾರ ಪದಾರ್ಥಗಳು ಹಾಗೂ ಅಪೌಷ್ಠಿಕ ಮಕ್ಕಳ ಬಗ್ಗೆ ಮಾಹಿತಿ ಪಡೆದರು.ಬಿಸಿಎಂ ವಸತಿ ನಿಲಯಕ್ಕೆ ದಿಢೀರ್ ಭೇಟಿ:
ಸಿಇಓ ರಾಹುಲ ಅವರು ಖಾನಾಪೂರ ಪಟ್ಟಣದ ಬಿಸಿಎಂ ಬಾಲಕರ ವಸತಿ ನಿಲಯಕ್ಕೆ ದಿಢೀರ್ ಭೇಟಿ ನೀಡಿ, ಮೂಲಸೌಕರ್ಯಗಳನ್ನು ಪರಿಶೀಲಿಸಿದರು. ಸೌಕರ್ಯಗಳ ಕುರಿತು ಮಕ್ಕಳಿಂದ ಮಾಹಿತಿ ಪಡೆದರು. ಮಂತುರ್ಗಾ ಗ್ರಾಪಂ ವ್ಯಾಪ್ತಿಯ ಶೆಡೆಗಾಳಿ ಗ್ರಾಮದಲ್ಲಿ ಮನರೇಗಾ ಯೋಜನೆಯಡಿ ನಿರ್ಮಿಸುತ್ತಿರುವ ಅಮೃತ ಸರೋವರ ಕಾಮಗಾರಿಯನ್ನು ಪರಿಶೀಲಿಸಿದರು ಹಾಗೂ ಶೆಡೆಗಾಳಿಯಲ್ಲಿರುವ ತೋಟಗಾರಿಕಾ ಇಲಾಖೆಯ ಕಚೇರಿಗೆ ಭೇಟಿ ನೀಡಿದರು.