ಸಗಟು ತ್ಯಾಜ್ಯ ಉತ್ಪಾದಕರೆಅಫಿಡವಿಟ್‌ ಸಲ್ಲಿಸಿ: ಪಾಲಿಕೆ

| Published : Jan 26 2024, 01:49 AM IST

ಸಾರಾಂಶ

ಸಗಟು ಘನತ್ಯಾಜ್ಯ ಉತ್ಪಾದಕರು ಅಫಿಡೆವಿಟ್‌ಅನ್ನು 30 ದಿನಗಳಲ್ಲಿ ಸಲ್ಲಿಸುವಂತೆ ಬಿಬಿಎಂಪಿಯು ಅದೇಶಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್‌ ತ್ಯಾಜ್ಯ ಉತ್ಪಾದಕರಿಂದ ಆಸ್ತಿ ತೆರಿಗೆಯಲ್ಲಿ ಬಳಕೆದಾರರ ಶುಲ್ಕ ವಸೂಲಿ ಮಾಡಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ಬೃಹತ್ ತ್ಯಾಜ್ಯ ಉತ್ಪಾದಕರು 30 ದಿನದ ಒಳಗಾಗಿ ಅಫಿಡವಿಟ್‌ ಸಲ್ಲಿಸುವಂತೆ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಸೂಚಿಸಿದೆ.

ಘನತ್ಯಾಜ್ಯ ನಿರ್ವಹಣಾ ನಿಯಮಗಳು 2016ರ ಪ್ರಕಾರ ಬೃಹತ್‌ ಘನತ್ಯಾಜ್ಯ ಉತ್ಪಾದಕರು ಬಳಕೆದಾರರ ಶುಲ್ಕ (ಸೇವಾ ಶುಲ್ಕ) ಪಾವತಿಸಬೇಕಿದೆ. ಅಲ್ಲದೆ, ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಕೂಡ ಅದಕ್ಕೆ ಸಹಮತಿಸಿದೆ. ಹೀಗಾಗಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯು ಸಗಟು ತ್ಯಾಜ್ಯ ಉತ್ಪಾದಕರಿಂದ ಬಳಕೆದಾರರ ಶುಲ್ಕವನ್ನು ಆಸ್ತಿ ತೆರಿಗೆಯೊಂದಿಗೆ ಸಂಗ್ರಹಿಸಲು ನಿರ್ಧರಿಸಿದೆ.

ಸಗಟು ಉತ್ಪಾದಕರನ್ನು ಪತ್ತೆ ಮಾಡಿ ಅವರಿಂದ ಬಳಕೆದಾರರ ಶುಲ್ಕ ವಸೂಲಿ ಮಾಡಲು ಅವರಿಂದ ಅಫಿಡವಿಟ್‌ ಪಡೆಯಲು ನಿರ್ಧರಿಸಲಾಗಿದೆ. ಅದಕ್ಕಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿನ ಸಗಟು ತ್ಯಾಜ್ಯ ಉತ್ಪಾದಕರು ಬಿಬಿಎಂಪಿ ವೆಬ್‌ಸೈಟ್‌ www.bbmp.gov.inನಲ್ಲಿ ಸಿಗುವ ನಿರ್ಧಿಷ್ಟ ನಮೂನೆಯ ಅರ್ಜಿ ಪಡೆದು, ಅದನ್ನು ಭರ್ತಿ ಮಾಡಿ ನಂತರ ನೋಟರಿ ಮಾಡಿಸಿ ಮುಖ್ಯ ಪ್ರಧಾನ ವ್ಯವಸ್ಥಾಪಕರು (ತಾಂತ್ರಿಕ), ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ, ನಂ. 30/1, 1ನೇ ಮಹಡಿ, ಯುಎನ್‌ಐ ಕಟ್ಟಡ, ತಿಮ್ಮಯ್ಯ ರಸ್ತೆ, ಮಿಲ್ಲರ್‌ ಟ್ಯಾಂಕ್‌ ಬಂಡ್‌ ರಸ್ತೆ, ವಸಂತನಗರ, ಬೆಂಗಳೂರು 560052ಗೆ ಸಲ್ಲಿಸಬೇಕಿದೆ.

ಅಫಿಡವಿಟನ್ನು ಮುಂದಿನ ಒಂದು ತಿಂಗಳೊಳಗಾಗಿ (30 ದಿನ) ಸಲ್ಲಿಸಬೇಕಿದೆ. ಒಂದು ವೇಳೆ ನಿಗದಿತ ಅವಧಿಯಲ್ಲಿ ಅಫಿಡವಿಟ್‌ ಸಲ್ಲಿಸದಿದ್ದರೆ ಅಂತಹ ಸಗಟು ಘನತ್ಯಾಜ್ಯ ಉತ್ಪಾದಕರಿಗೆ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣಾ ಬೈಲಾ 2020ರನ್ವಯ ದಂಡ ವಿಧಿಸಲಾಗುವುದು ಎಂದು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.