ಜಾಗೃತ ಜನ ನಾಯಕರ ಆಯ್ಕೆಯಿಂದ ಬಲಿಷ್ಠ ರಾಷ್ಟ್ರ ನಿರ್ಮಾಣ: ನ್ಯಾಯಾಧೀಶ ಎಚ್.ದೇವದಾಸ್

| Published : Jan 26 2024, 01:49 AM IST

ಜಾಗೃತ ಜನ ನಾಯಕರ ಆಯ್ಕೆಯಿಂದ ಬಲಿಷ್ಠ ರಾಷ್ಟ್ರ ನಿರ್ಮಾಣ: ನ್ಯಾಯಾಧೀಶ ಎಚ್.ದೇವದಾಸ್
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿ ಜೀವನದಲ್ಲಿ ಎಲ್ಲಾ ಗಮನ ಓದಿನ ಕಡೆಗೆ ಕೇಂದ್ರೀಕರಿಸಿದಾಗ ಮಾತ್ರ ಜೀವನದಲ್ಲಿ ಸಾಧಿಸಲು ಸಾಧ್ಯ. ಮತದಾನದ ಹಕ್ಕು ಪಡೆದ ಪ್ರತಿಯೊಬ್ಬರು ತಪ್ಪದೇ ವಿವೇಚನೆಯಿಂದ ಮತದಾನ ಮಾಡಿದಾಗ ಮಾತ್ರ ನಾವು ಉತ್ತಮ ಆಡಳಿತ, ಸಾಮಾಜಿಕ ವ್ಯವಸ್ಥೆಗಳ ಹೊಂದಲು ಸಾಧ್ಯ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಜಾಗೃತ ಮತದಾರರಿಂದ ಮಾತ್ರ ಜಾಗೃತ ಜನ ನಾಯಕರ ಆಯ್ಕೆಮಾಡಬಹುದು ಇಂತಹ ನಾಯಕರಿಂದ ಜಾಗೃತ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಿಸಲು ಸಾಧ್ಯ. ಇದಕ್ಕಾಗಿ ದೇಶದ ಪ್ರತಿಯೊಬ್ಬ ಅರ್ಹ ಪ್ರಜೆಗಳು ಮತದಾನದ ಹಕ್ಕು ಚಲಾಯಿಸಬೇಕು ಎಂದು ಹೊನ್ನಾಳಿ ಜೆಎಂಎಫ್ ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಎಚ್.ದೇವದಾಸ್ ಹೇಳಿದರು.

ತಾಲೂಕು ಅಡಳಿತ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಚುನಾವಣಾ ಸಾಕ್ಷರತಾ ಸಮಿತಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜಗತ್ತಿನಲ್ಲಿ ಪ್ರಾಣಿಗಳಿಗೂ, ಮನುಷ್ಯನಿಗೂ ಇರುವ ವ್ಯತ್ಯಾಸವೆಂದರೆ ಪ್ರಾಣಿಗಳು ತಮಗಾಗಿ ಮಾತ್ರ ಬದುಕುತ್ತವೆ ಆದರೆ ಮನುಷ್ಯ ತನಗಾಗಿ ಜೊತೆಗೆ ತನ್ನೊಂದಿಗಿರುವ ಕುಟುಂಬ, ಸಮಾಜಕ್ಕಾಗಿ ಬದುಕುತ್ತಾನೆ. ಪ್ರತಿಯೊಬ್ಬರು ಮತ್ತೊಬ್ಬರು ಏನು ಹೇಳುತ್ತಾರೆ ಎಂದು ನಾವು ಆಲಿಸಿ ನಂತರ ಅದಕ್ಕೆ ತಕ್ಕ ವಿವೇಚನೆಯಿಂದ ಮಾತನಾಡಬೇಕು ಆಗ ನಾವು ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ಉಳಿಸಿಕೊಂಡು ಹೋಗಲು ಸಾಧ್ಯ ಎಂದರು.

ವಿದ್ಯಾರ್ಥಿ ಜೀವನದಲ್ಲಿ ಎಲ್ಲಾ ಗಮನ ಓದಿನ ಕಡೆಗೆ ಕೇಂದ್ರೀಕರಿಸಿದಾಗ ಮಾತ್ರ ಜೀವನದಲ್ಲಿ ಸಾಧಿಸಲು ಸಾಧ್ಯ. ಮತದಾನದ ಹಕ್ಕು ಪಡೆದ ಪ್ರತಿಯೊಬ್ಬರು ತಪ್ಪದೇ ವಿವೇಚನೆಯಿಂದ ಮತದಾನ ಮಾಡಿದಾಗ ಮಾತ್ರ ನಾವು ಉತ್ತಮ ಆಡಳಿತ, ಸಾಮಾಜಿಕ ವ್ಯವಸ್ಥೆಗಳ ಹೊಂದಲು ಸಾಧ್ಯ ಎಂದರು

ಪ್ರತಿಜ್ಞಾ ವಿಧಿ ಬೋಧಿಸಿದ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ನಗರ ಪ್ರದೇಶಗಳಲ್ಲಿ ಸರಾಸರಿ ಶೇ. 40 ರಿಂದ 60ರಷ್ಟು ಮಾತ್ರ ಮತದಾನವಾಗುವುದು ಕಂಡಿದ್ದೇವೆ. ಇದು ಉತ್ತಮ ನಾಯಕರ ಆಯ್ಕೆಗೆ ಸಾಕಾಗಲ್ಲ ಬದಲಿಗೆ ಎಲ್ಲರೂ ಮತದಾನ ಸಂವಿಧಾನ ನೀಡಿರುವ ಪವಿತ್ರ ಹಕ್ಕು ಎಂದು ಭಾವಿಸಿ ತಪ್ಪದೇ ಮತದಾನ ಮಾಡಬೇಕು ಎಂದು ಕರೆ ನೀಡಿದರು.

ತಾಯಿ ಭಾಷೆ, ದೇಶದ ಮೇಲೆ ಅಭಿಮಾನವಿರಬೇಕು, ಮತದಾರರು ಯಾವುದೇ ಆಮಿಷಗಳಿಗೆ ಬಲಿಯಾಗದೇ ದೇಶಕ್ಕಾಗಿ ಜವಾಬ್ದಾರಿಯಿಂದ ಮತದಾನ ಮಾಡಿದಾಗ ಮಾತ್ರ ಬಲಿಷ್ಠ ರಾಷ್ಟ್ರಕಟ್ಟಲು ಸಾಧ್ಯ ಎಂದು ಹೇಳಿದರು.

ತಹಸೀಲ್ದಾರ್ ಪಟ್ಟರಾಜಗೌಡ ಮಾತನಾಡಿ, ಕನ್ನಡದ ಸಾಂಸ್ಕೃತಿಕ ನಾಯಕರಾಗಿ ಬಸವಣ್ಣನವರ ಆಯ್ಕೆಮಾಡಿದ್ದು, ಪ್ರತಿ ಕಾರ್ಯಕ್ರಮಗಳಲ್ಲಿ ಕನ್ನಡ ವಚನಗಳ ಹೇಳುವುದರೊಂದಿಗೆ ಆರಂಭಿಸಬೇಕು ಎಂದರು.

ವಕೀಲ ಕರುಣಾಕರ್ ಅವರು ಮತದಾನ, ಹಕ್ಕು ಬಾಧ್ಯತೆಗಳು ಕರ್ತವ್ಯಗಳ ಬಗ್ಗೆ ಸವಿಸ್ತಾರವಾಗಿ ಉಪನ್ಯಾಸಮಾಡಿದರು. ಇದೇ ಸಂದರ್ಭದಲ್ಲಿ ಪ್ರಬಂಧ,ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

ಕಾಲೇಜಿನ ಪ್ರಾಚಾರ್ಯ ಡಾ. ಬಿ.ಜಿ.ಧನಂಜಯ ಅವರು ಅಧ್ಯಕ್ಷತೆವಹಿಸಿ ಮಾತನಾಡಿದರು. ತಾಪಂ ಇಒ ರಾಘವೇಂದ್ರ, ಬಿಇಒ ನಂಜರಾಜ, ಸಹಾಯಕ ಸರ್ಕಾರಿ ಆಭಿಯೋಜಕರಾದ ಜಿ.ಎನ್.ವಾಣಿ, ಮತ್ತು ಭರತ್ ಭೀಮಯ್ಯ ಕೆ.ಸಿ.ವಕೀಲರ ಸಂಘದ ಅಧ್ಯಕ್ಷ ಕೆ.ಪಿ. ಜಯಪ್ಪ, ವಕೀಲರಾದ ಮಡಿವಾಳ ಚಂದ್ರಪ್ಪ, ಪುರುಷೋತ್ತಮ, ಪಿಎಸ್ಐ ಏಕಾಂತಪ್ಪ ಇತರರಿದ್ದರು. ಡಾ. ಹರೀಶ್‌ ನಿರೂಪಿಸಿದರು. ಡಿ.ಸಿ.ಪಾಟೀಲ್, ಸ್ವಾಗತಿಸಿದರು, ಕುಮಾರ ವೈಷ್ಣವಿ ಪ್ರಾರ್ಥನೆ ಸಲ್ಲಿಸಿದರು. ಪ್ರಾಧ್ಯಾಪಕಿ ಕೆ.ಪುಪ್ಪಲತಾ ವಂದಿಸಿದರು.