ಸಾರಾಂಶ
ಧಾರವಾಡ: ತಂಬಾಕು ಉತ್ಪನ್ನ ಸೇರಿದಂತೆ ಎಲ್ಲ ಆರೋಗ್ಯ ಹಾನಿಕರ ಧೂಮಪಾನ, ಮದ್ಯಪಾನಗಳನ್ನು ಜಿಲ್ಲೆಯಲ್ಲಿ ನಿಯಂತ್ರಿಸಬೇಕು. ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಯಾವುದೇ ಲೋಪಗಳಾಗದಂತೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾತನಾಡಿದ ಅವರು, ಶಾಲೆ, ಕಾಲೇಜುಗಳ ಸುತ್ತಮುತ್ತಲೂ ಯಾವುದೇ ಅಂಗಡಿಗಳಲ್ಲಿ ತಂಬಾಕು, ಸೀಗರೆಟ್ ಮಾರಾಟ ಮಾಡದಂತೆ ನಿಯಂತ್ರಿಸಬೇಕು. ತಪ್ಪಿತಸ್ಥರಿಗೆ ಹೆಚ್ಚುವರಿ ದಂಡ ವಿಧಿಸಿ, ಎಚ್ಚರಿಕೆ ನೀಡಬೇಕು ಎಂದರು.ಜಿಲ್ಲೆಯ 26 ಗ್ರಾಮಗಳನ್ನು ತಂಬಾಕು ಮುಕ್ತ ಗ್ರಾಮಗಳನ್ನಾಗಿ ಮಾಡಲಾಗಿದೆ. ಸುಮಾರು 89 ಸ್ಥಳಗಳಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಜಿಲ್ಲೆಯ 189 ಶಾಲೆಗಳನ್ನು ತಂಬಾಕು ಮುಕ್ತ ಮಾಡಲಾಗಿದೆ. ಹತ್ತಕ್ಕೂ ಹೆಚ್ಚು ಸ್ಥಳಗಳಿಗೆ ದಿಢೀರ್ ಭೇಟಿ ನೀಡಿ, ಅನುಮತಿ ಇಲ್ಲದ ಔಷಧಿ, ತಂಬಾಕು ಉತ್ಪನ್ನಗಳ ಬಳಕೆಗೆ ಕಡಿವಾಣ ಹಾಕಲಾಗಿದೆ ಮತ್ತು ದಂಡ ವಿಧಿಸಿ, ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.
ಬೀದಿ ನಾಯಿ ನಿಯಂತ್ರಿಸಿಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಹೆಚ್ಚುತ್ತಿದ್ದು, ಅವುಗಳನ್ನು ನಿಯಂತ್ರಿಸಬೇಕು ಎಂದ ಅವರು, ರಾಷ್ಟ್ರೀಯ ರೇಬಿಸ್ ನಿಯಂತ್ರಣ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ಸಭೆ ಜರುಗಿಸಿದರು. ಬೀದಿ ನಾಯಿಗಳ ಸಂತಾನಹರಣ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಮುಖ್ಯವಾಗಿ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕವಾಗಿ ಅನುಸರಿಸಬೇಕು. ಧಾರವಾಡ ಸಪ್ತಾಪುರ, ನೆಹರು ಮಾರುಕಟ್ಟೆ, ಶಿವಾಜಿ ಸರ್ಕಲ್ ಸುತ್ತಮುತ್ತ ತ್ಯಾಜ್ಯದಿಂದ ಹೆಚ್ಚು ಬೀದಿ ನಾಯಿಗಳು ಸೇರುತ್ತವೆ. ಮಹಾನಗರ ಪಾಲಿಕೆ ಸೂಕ್ತ ಕ್ರಮ ವಹಿಸಿ, ಇದನ್ನು ನಿಯಂತ್ರಿಸಬೇಕು ಮತ್ತು ಖಾನಾವಳಿ, ಹೋಟೆಲ್, ಮಾಂಸದ ಅಂಗಡಿಗಳ ಮಾಲೀಕರಿಗೆ ನೈರ್ಮಲ್ಯ, ಸ್ವಚ್ಛತೆ ಬಗ್ಗೆ ತಿಳಿವಳಿಕೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಗ್ರಾಮೀಣ ಭಾಗದಲ್ಲಿ ಹಾಗೂ ಹುಬ್ಬಳ್ಳಿ ನಗರದಲ್ಲಿ ಹಾವು ಕಡಿತ, ನಾಯಿ ಕಡಿತಗಳಿಗೆ ನಾಟಿ ವೈದ್ಯರು ಗಿಡಮೂಲಿಕೆಗಳ ಔಷಧಿ ನೀಡುತ್ತಾರೆ. ಇದು ವೈಜ್ಞಾನಿಕ ಪದ್ಧತಿ ಅಲ್ಲ. ನಾಟಿ ವೈದ್ಯರಿಗೆ ವೈದ್ಯಕೀಯ ಹಿನ್ನೆಲೆ, ಓದು, ಅನುಭವ ಇರುವುದಿಲ್ಲ. ಅವರಿಗೆ ಚಿಕಿತ್ಸೆ ಬಗ್ಗೆ ಸರಿಯಾದ ತಿಳಿವಳಿಕೆ ನೀಡಬೇಕು. ಅವರ ಬಳಿ ಚಿಕಿತ್ಸೆಗೆ ಬರುವ ಸಾರ್ವಜನಿಕರನ್ನು ಕಿಮ್ಸ್ ಅಥವಾ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲು ಸೂಚಿಸಬೇಕು ಎಂದರು.ಡಿಎಚ್‌ಓ ಡಾ. ಶಶಿ ಪಾಟೀಲ, ಡಾ. ಪರಶುರಾಮ, ಡಿಡಿಪಿಐ ಎಸ್.ಎಸ್. ಕೆಳದಿಮಠ, ಡಾ. ರವಿ ಸಾಲಿಗೌಡರ, ಡಾ. ಸುಜಾತಾ ಹಸವೀಮಠ, ಡಾ.ಕೆ.ಎನ್. ತನುಜಾ ಇದ್ದರು.