ಜಲ ಜೀವನ್ ಮಿಷನ್‌ನಲ್ಲಿ ಲೋಪವಾಗದಂತೆ ಎಚ್ಚರ ವಹಿಸಿ

| Published : Jul 15 2025, 11:45 PM IST

ಸಾರಾಂಶ

ಗ್ರಾಮದ ಮನೆ ಮನೆಗೆ ಭೇಟಿ ನೀಡುವ ಮೂಲಕ ಬಹುಗ್ರಾಮ ಕುಡಿಯುವ ನೀರು ಪೂರೈಕೆಯಾಗುತ್ತಿರುವುದನ್ನು ಪರಿಶೀಲಿಸಿದರು. ನಂತರ ಗ್ರಾಪಂಗೆ ಭೇಟಿ ನೀಡಿ ಅಲ್ಲಿಯ ಸಿಬ್ಬಂದಿ ಇ-ಹಾಜರಾತಿಯನ್ನು ವೆಬ್ ತಂತ್ರಾಂಶದಲ್ಲಿ ಪರಿಶೀಲಿಸಿದರು.

ಹುಬ್ಬಳ್ಳಿ: ಜಲ ಜೀವನ್ ಮಿಷನ್ ಕಾಮಗಾರಿಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸಬೇಕು ಎಂದು ಜಿಪಂ ಸಿಇಒ ಭುವನೇಶ್ ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಕಟ್ನೂರು ಗ್ರಾಪಂ ವ್ಯಾಪ್ತಿಯ ಮಾವನೂರು ಹಾಗೂ ಹಳ್ಯಾಳ ಗ್ರಾಪಂ ವ್ಯಾಪ್ತಿಯ ಹಳ್ಯಾಳ ಗ್ರಾಮಗಳಿಗೆ ಭೇಟಿ ನೀಡಿ ವಿವಿಧ ಕಾಮಗಾರಿ ಹಾಗೂ ಬಹುಗ್ರಾಮ ಕುಡಿಯುವ ನೀರು ಸ್ಥಾವರಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಮಾತನಾಡಿದರು.

ಸ್ಥಾವರದ ಜಾಕ್ವೆಲ್ ಸುತ್ತ ಸ್ವಚ್ಛಗೊಳಿಸಿ, ರಿಟೈನಿಂಗ್ ವಾಲ್ ನಿರ್ಮಿಸುವಂತೆ ತಿಳಿಸಿದರು. ಪ್ಯಾನಲ್ ಬೋರ್ಡ್ ದುರಸ್ತಿಗೆ ಬಂದಿದ್ದು, ಕೂಡಲೇ ಸರಿಪಡಿಸಲು ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು.

ಗ್ರಾಮಸ್ಥರಿಗೆ ಕೊಳವೆಬಾವಿ ಬದಲಾಗಿ ಬಹುಗ್ರಾಮ ಯೋಜನೆಯಡಿ ಕುಡಿಯುವ ನೀರು ನೀಡಬೇಕು. ಶುದ್ಧವಾದ ಸಿಹಿ ನೀರನ್ನು ಕುಡಿಯುವಂತೆ ಅರಿವು ಮೂಡಿಸಲು ಕ್ರಮ ವಹಿಸುವಂತೆ ಪಿಡಿಒಗೆ ನಿರ್ದೇಶಿಸಿದರು.

ಗ್ರಾಮದ ಮನೆ ಮನೆಗೆ ಭೇಟಿ ನೀಡುವ ಮೂಲಕ ಬಹುಗ್ರಾಮ ಕುಡಿಯುವ ನೀರು ಪೂರೈಕೆಯಾಗುತ್ತಿರುವುದನ್ನು ಪರಿಶೀಲಿಸಿದರು. ನಂತರ ಗ್ರಾಪಂಗೆ ಭೇಟಿ ನೀಡಿ ಅಲ್ಲಿಯ ಸಿಬ್ಬಂದಿ ಇ-ಹಾಜರಾತಿಯನ್ನು ವೆಬ್ ತಂತ್ರಾಂಶದಲ್ಲಿ ಪರಿಶೀಲಿಸಿದರು. ತಡವಾಗಿ ಹಾಜರಾತಿ ನಮೂದಿಸುತ್ತಿರುವ ಸಿಬ್ಬಂದಿಗೆ ನೋಟಿಸ್ ನೀಡಲು ತಾಪಂ ಕಾರ್ಯನಿರ್ವಾಹಕರಿಗೆ ತಿಳಿಸಿದರು.

ತೆರಿಗೆ ವಸೂಲಾತಿ ಪರಿಶೀಲಿಸಿ ವಸೂಲಾತಿ ಕುಂಠಿತವಾಗಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ನೋಟಿಸ್ ನೀಡುವಂತೆ ಸೂಚಿಸಿದರು.

ಗ್ರಾಪಂ ಸುತ್ತ ಹಾಗೂ ಗ್ರಾಪಂನ ಎಲ್ಲ ರಸ್ತೆಗಳು ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡುವಂತೆ ಪಿಡಿಒಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಎಸ್‌ಡಬ್ಲೂಎಂ ಯೋಜನೆಯ ಸ್ವಚ್ಚ ವಾಹಿನಿಯ ಮಹಿಳಾ ಡೈವರ್ ಜತೆ ವಾಹನ ಓಡಿಸಿದರು. ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳಿಗೆ ನೀಡುತ್ತಿರುವ ಆಹಾರವನ್ನು ಸ್ವತಃ ತಾವೇ ಸೇವಿಸಿ ಆಹಾರ ಗುಣಮಟ್ಟವನ್ನು ಪರಿಶೀಲಿಸಿದರು. ಕಾಲಕಾಲಕ್ಕೆ ಮಕ್ಕಳಿಗೆ ತೂಕ, ಎತ್ತರ, ಆರೋಗ್ಯ ತಪಾಸಣೆ ನಡೆಸುವಂತೆ ತಿಳಿಸಿದರು. ಕಟ್ನೂರು ಗ್ರಾಮದ ಆರೋಗ್ಯ ಮೇಳದಲ್ಲಿ ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚುಯಾಗಿ ಕಾಳಜಿ ವಹಿಸಬೇಕು ಎಂದರು.

ಕಟ್ನೂರು, ಹಳ್ಯಾಳ, ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಭೇಟಿ ನೀಡಿ ಗ್ರಾಪಂ ಗ್ರಂಥಾಯ, ಶೌಚಗೃಹ, ಆಟದ ಮೈದಾನ, ಶಾಲಾ ಕಾಂಪೌಂಡ್, ಶಾಲಾ ಕೊಠಡಿಗಳನ್ನು ಪರಿಶೀಲಿಸಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಮಕ್ಕಳಿಗೆ ಪರಿಸರ, ನೈರ್ಮಲ್ಯ ಕುರಿತು ಮಾಹಿತಿ ನೀಡಿ ಎಲ್ಲ ಮಕ್ಕಳು ಒಂದೊಂದು ಗಿಡವನ್ನು ತಮ್ಮ ತಮ್ಮ ಮನೆಯ ಜಾಗದಲ್ಲಿ ನೆಡುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಂತರ ಸಂಜೀವಿನಿ ಘಟಕಕ್ಕೆ ಭೇಟಿ ನೀಡಿ ಸ್ವಸಹಾಯ ಸಂಘಗಳ ಕಾರ್ಯವೈಖರಿ ಕುರಿತು ಮಾಹಿತಿ ಪಡೆದುಕೊಂಡ ಅವರು, ಸ್ವಸಹಾಯ ಸಂಘದ ಮಹಿಳೆಯರು ಸ್ವಉದ್ಯೋಗಗಳನ್ನು ಮಾಡುವುದರ ಮೂಲಕ ಆರ್ಥಿಕವಾಗಿ ಮುನ್ನಡೆಯಬೇಕು ಎಂದು ತಿಳಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಜಗದೀಶ್, ಹುಬ್ಬಳ್ಳಿ ತಾಪಂ ಇಒ ರಾಮಚಂದ್ರ ಹೊಸಮನಿ, ಸಹಾಯಕ ನಿರ್ದೇಶಕರು, ಅಭಿಯಾಂತರು, ಶಿಕ್ಷಕರು, ಗ್ರಾಪಂ ಸದಸ್ಯರು, ಪಿಡಿಒ, ಗ್ರಾಮಸ್ಥರು ಇದ್ದರು.