ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನಲ್ಲಿ ಕಲುಷಿತ ನೀರು ಮಿಶ್ರಣವಾಗದಂತೆ ಎಚ್ಚರ ವಹಿಸಬೇಕೆಂದು ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರು ತುಮಕೂರು ಮಹಾನಗರಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ, ತುಮಕೂರುಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನಲ್ಲಿ ಕಲುಷಿತ ನೀರು ಮಿಶ್ರಣವಾಗದಂತೆ ಎಚ್ಚರ ವಹಿಸಬೇಕೆಂದು ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರು ತುಮಕೂರು ಮಹಾನಗರಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಆಯುಕ್ತರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು ದೇಶದ ಸುಸಜ್ಜಿತವಾದ ಮಹಾನಗರಪಾಲಿಕೆಗಳಲ್ಲಿ ಕುಡಿಯುವ ನೀರಿನಲ್ಲಿ ಕಲುಷಿತ ನೀರು ಮಿಶ್ರಣವಾಗಿ ಸಾವು-ನೋವು ಉಂಟಾಗುತ್ತಿರುವುದು ನಮಗೆಲ್ಲಾ ಎಚ್ಚರಿಕೆಯ ಗಂಟೆಯಾಗಿದೆ. ಈ ಕಾರಣದಿಂದ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಕುಡಿಯುವ ನೀರನ್ನು ಮನೆ ಮನೆಗೂ ಒದಗಿಸುವುದು ನಮ್ಮ ಆಧ್ಯ ಕರ್ತವ್ಯವಾಗಿದ್ದು, ಈ ಕರ್ತವ್ಯದಲ್ಲಿ ಯಾವುದೇ ಲೋಪದೋಶಗಳನ್ನು ನಾವು ಸಹಿಸುವುದಿಲ್ಲ. ಈ ಕಾರಣದಿಂದ ಅಧಿಕಾರಿಗಳು ಎಚ್ಚೆತ್ತುಕೊಂಡು ಪ್ರತಿನಿತ್ಯ ಕಾಲೋನಿಗಳಲ್ಲಿ, ಹಾಸ್ಟೆಲ್‌ಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ಆಸ್ಪತ್ರೆಗಳಲ್ಲಿ, ಹೋಟೆಲ್‌ಗಳಲ್ಲಿ, ಬಸ್ ನಿಲ್ದಾಣದಲ್ಲಿ ಹಾಗೂ ನಗರದ ಬಡಾವಣೆಗಳಲ್ಲಿ ಮಹಾನಗರಪಾಲಿಕೆಯಿಂದ ಪೂರೈಕೆಯಾಗುವ ನೀರನ್ನು ಪ್ರತಿನಿತ್ಯ ತುಮಕೂರು ಮಹಾನಗರಪಾಲಿಕೆಯ ಪಿ.ಎನ್.ಆರ್.ಪಾಳ್ಯದಲ್ಲಿರುವ ಪ್ರಯೋಗಾಲಯದಲ್ಲಿ ಪರೀಕ್ಷಿಸಿ, ಸಾರ್ವಜನಿಕರಿಗೆ ಗುಣಮಟ್ಟದ ಕುಡಿಯುವ ನೀರನ್ನು ಒದಗಿಸಬೇಕೆಂದು ಮಾನ್ಯ ಶಾಸಕರು ಸೂಚಿಸಿದರು. ಯು.ಜಿ.ಡಿ ನೀರು ಯಾವುದೇ ಕಾರಣಕ್ಕೂ ಕುಡಿಯುವ ನೀರು ಸರಬರಾಜು ಪೈಪ್‌ಲೈನ್‌ಗಳಿಗೆ ಮಿಶ್ರಣವಾಗದಂತೆ ಎಚ್ಚರಿಕೆ ವಹಿಸಬೇಕು. ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ 694 ಬೋರ್‌ವೆಲ್ ಗಳ ನೀರನ್ನು ಪರೀಕ್ಷಿಸಬೇಕು. ಈ ಬೋರ್‌ವೆಲ್‌ನ ನೀರುಗಳು ಕುಡಿಯಲು ಯೋಗ್ಯವೇ ಎಂಬದನ್ನು ಖಚಿತಪಡಿಸಿಕೊಂಡು ಸಾರ್ವಜನಿಕರಿಗೆ ಸರಬರಾಜು ಮಾಡಲು ನಗರ ಶಾಸಕರು ತಿಳಿಸಿದರು. ಈ ಸಂದರ್ಭದಲ್ಲಿ ತುಮಕೂರು ಮಹಾನಗರಪಾಲಿಕೆ ಆಯುಕ್ತರಾದ ಶ್ರೀ ಯೋಗಾನಂದ, ಉಪ-ಆಯುಕ್ತರಾದ ಶ್ರೀ ಮನು, ಅಧೀಕ್ಷಕ ಅಭಿಯಂತರರಾದ ಶ್ರೀ ಸಂದೀಪ್, ಆರೋಗ್ಯಾಧಿಕಾರಿಗಳಾದ ಡಾ. ಯೋಗೀಶ್, ಕಾರ್ಯಪಾಲಕ ಅಭಿಯಂತರರಾದ ವಿನಯ್, ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಕಾರ್ಯಪಾಲಕ ಅಭಿಯಂತರ ಅನಿಲ್, ಹೆಚ್ಚುವರಿ ಕಾರ್ಯಪಾಲಕ ಅಭಿಯಂತರ ಪ್ರವೀಣ್, ಮುಂತಾದ ಅಧಿಕಾರಿಗಳು ಹಾಜರಿದ್ದರು.