ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಸರ್ಕಾರ ನೀಡುವ ಸವಲತ್ತುಗಳನ್ನು ಸಾರ್ವಜನಿಕರಿಗೆ ಒದಗಿಸುವ ಜೊತೆಗೆ ಮಾನವ ಹಕ್ಕು ಉಲ್ಲಂಘನೆಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ ಭಟ್ ತಿಳಿಸಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸರ್ಕಾರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮಾನವ ಹಕ್ಕುಗಳ ರಕ್ಷಕರು ಎಂಬುದನ್ನು ಮರೆಯಬಾರದು. ಸಾರ್ವಜನಿಕರು ತಮ್ಮ ಕಚೇರಿಗೆ ಭೇಟಿ ನೀಡಿದಾಗ ಅವರ ಕಷ್ಟಗಳನ್ನು ಆಲಿಸಿ ಸೌಜನ್ಯದಿಂದ ವರ್ತಿಸಿದರೆ ಮಾನವ ಹಕ್ಕು ಉಲ್ಲಂಘನೆಯ ಪ್ರಕರಣಗಳು ಸಾಕಷ್ಟು ಕಡಿಮೆಯಾಗುತ್ತವೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಹಾಸ್ಟೆಲ್ ಗಳಿಗೆ ಭೇಟಿ ನೀಡಿದಾಗ ಅಲ್ಲಿನ ವ್ಯವಸ್ಥೆಗಳು ತೃಪ್ತಿಕರವಾಗಿದೆ. ಮಿಮ್ಸ್ ಗೆ ಭೇಟಿ ನೀಡಿದ್ದು, ಅಲ್ಲಿ ವೈದ್ಯರ ಕೊರತೆ ಕಂಡುಬಂದಿದೆ. ವೈದ್ಯರ ನೇಮಕಾತಿ ರಾಜ್ಯ ಮಟ್ಟದಲ್ಲಿ ನಡೆಯಬೇಕಿದೆ. ಈ ಬಗ್ಗೆ ಆಯೋಗ ಶಿಫಾರಸ್ಸು ಮಾಡಲಿದೆ ಎಂದರು.ಮಾನವ ಹಕ್ಕುಗಳ ಆಯೋಗದ ಹೆಸರಿನಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿಕೊಂಡು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಹಣದ ಬೇಡಿಕೆ ಇಡುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ದೂರು ಸಲ್ಲಿಸಿ ಎಂದು ಹೇಳಿದರು.
ಆಯೋಗದಿಂದ 8777 ಪ್ರಕರಣ ಇತ್ಯರ್ಥ:ರಾಜ್ಯ ಮಾನವ ಹಕ್ಕುಗಳ ಆಯೋಗದ ಹಿಂದಿನ ಅಧ್ಯಕ್ಷರು ಹಾಗೂ ಸದಸ್ಯರು 2023ರ ಫೆಬ್ರವರಿಯಲ್ಲಿ ನಿವೃತ್ತರಾದರು. ನಂತರ ಚುನಾವಣೆ ಹಿನ್ನೆಲೆಯಲ್ಲಿ ಅಧ್ಯಕ್ಷರು ನೇಮಕವಾಗಲು 8 ತಿಂಗಳು ಬೇಕಾಯಿತು. ಈ ಅವಧಿಯಲ್ಲಿ ಸಲ್ಲಿಕೆಯಾದ 5400 ಅರ್ಜಿಗಳು ಹಾಗೂ ನೇಮಕಾತಿಯಾದ ನಂತರ ಸಲ್ಲಿಕೆಯಾದ 6417 ಪ್ರಕರಣಗಳು ಸೇರಿಕೊಂಡವು. ಆಯೋಗವು ಒಂದು ವರ್ಷದ ಅವಧಿಯಲ್ಲಿ ಸುಮಾರು 8777 ಪ್ರಕರಣಗಳನ್ನು ಇತ್ಯರ್ಥ ಪಡಿಸಿ ಈಗ 3000 ಪ್ರಕರಣಗಳು ಬಾಕಿ ಇವೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ಮಾನವ ಹಕ್ಕುಗಳ ಆಯೋಗವು ಪ್ರತಿ ಜಿಲ್ಲೆಗೆ ಭೇಟಿ ನೀಡಿ ಸಾರ್ವಜನಿಕರಿಂದ ದೂರು ಸ್ವೀಕರಿಸುತ್ತದೆ. ಇದಲ್ಲದೇ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಿದ್ದಲ್ಲಿ ಸಾರ್ವಜನಿಕರು ನೇರವಾಗಿ ಬೆಂಗಳೂರಿನ ಕಚೇರಿಗೆ ಬಂದು ಸಲ್ಲಿಸಬಹುದು. ಇದಲ್ಲದೇ ಆಯೋಗವು ಸ್ವಯಂ ಪ್ರೇರಿತವಾಗಿ ಪತ್ರಿಕೆಗಳ ವರದಿ ಮೇಲೆ ದೂರು ದಾಖಲಿಸಲಿದೆ ಎಂದರು.ಹಾಸ್ಟೆಲ್ ಗಳಲ್ಲಿ ಡ್ರೆಸಿಂಗ್ ರೂಂ ವ್ಯವಸ್ಥೆ ಮಾಡಿ:
ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ ವಂಟಿಗೋಡಿ ಮಾತನಾಡಿ, ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ನಿರ್ಮಾಣವಾಗುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಹೆಣ್ಣು ಮಕ್ಕಳಿಗೆ ಅನುಕೂಲವಾಗುವಂತೆ ಪ್ರತ್ಯೇಕವಾಗಿ ಡ್ರೆಸಿಂಗ್ ರೂಂ ವ್ಯವಸ್ಥೆ ಮಾಡಬೇಕು. ಒಂದೇ ಕೊಠಡಿಯಲ್ಲಿ 4 ರಿಂದ 5 ಹೆಣ್ಣು ಮಕ್ಕಳು ವಾಸಿಸುತ್ತಾರೆ ಎಂದು ತಿಳಿಸಿದರು.ಆಯೋಗಕ್ಕೆ ಸಲ್ಲಿಕೆಯಾಗುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಪತ್ರ ಬರೆದು ಕೇಳುವ ದಾಖಲೆಗಳನ್ನು ಶೀಘ್ರ ಕಳುಹಿಸಿಕೊಡಿ. ಇದರಿಂದ ಪ್ರಕರಣಗಳನ್ನು ಬೇಗ ಇತ್ಯರ್ಥಪಡಿಸಬಹುದು ಎಂದರು.
ಮಂಡ್ಯ ಜಿಲ್ಲೆಗೆ ಸಂಬಂಧಿಸಿದಂತೆ ದಾಖಲಾಗಿದ್ದ 20 ಪ್ರಕರಣಗಳ ವಿಚಾರಣೆ ನಡೆಸಲಾಯಿತು. ಸಭೆ ಮುಗಿದ ನಂತರ ಸಾರ್ವಜನಿಕರಿಂದ ದೂರು ಅರ್ಜಿಗಳನ್ನು ಆಯೋಗವು ಸ್ವೀಕರಿಸಿತು.ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಆಯೋಗದ ಜೊತೆ ಸರ್ಕಾರಿ ಅಧಿಕಾರಿಗಳೆಲ್ಲರೂ ಕೈ ಜೋಡಿಸಿ ಮಾನವ ಹಕ್ಕುಗಳ ಸಂರಕ್ಷಣೆ ಮಾಡಬೇಕು. ಮಾನವೀಯತೆ ಹಾಗೂ ಹೃದಯವಂತಿಕೆ ಮನೋಭಾವದಿಂದ ಕೆಲಸ ನಿರ್ವಹಿಸಿದರೆ ಮಾನವ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲ ಎಂದರು.
ಅಧಿಕಾರಿಗಳೆಲ್ಲರೂ ಮಾನವ ಆಯೋಗದ ಮಾರ್ಗದರ್ಶನ ಪಾಲಿಸಬೇಕು. ಆಯೋಗದಿಂದ ಬಂದ ಪ್ರಕರಣಕ್ಕೆ ಸರಿಯಾದ ರೀತಿ ದೂರು ವಿಶ್ಲೇಷಣೆ ಮಾಡಿ ಕಾಲಮಿತಿಯೊಳಗೆ ಆಯೋಗಕ್ಕೆ ವರದಿ ಸಲ್ಲಿಸಿ ಎಂದು ತಿಳಿಸಿದರು.ಸಭೆಯಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಅರುಣ್ ಪೂಜಾರ್, ಜಿಪಂ ಸಿಇಒ ಕೆ.ಆರ್. ನಂದಿನಿ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.