ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರೋಗಬಾಧಿತ ಇಲಿ, ಹಂದಿ, ನಾಯಿ, ಕುದುರೆ ಮತ್ತಿತರ ಜಾನುವಾರು ಮೂತ್ರದಲ್ಲಿನ ಬ್ಯಾಕ್ಟೀರಿಯವು ರೋಗಪೀಡಿತ ಪ್ರಾಣಿಗಳ ಮಲ-ಮೂತ್ರದಿಂದ ಕಲುಷಿತವಾದ ನೀರು, ಮಣ್ಣು ಸಸ್ಯಗಳ ಮೂಲಕ ಮನುಷ್ಯರಿಗೆ ಮಾರಣಾಂತಿಕ ಲೆಪ್ಪೋಸ್ಪೈರೋಸಿಸ್ ಸೋಂಕು ಹರಡಬಹುದಾಗಿದ್ದು, ಅದರ ನಿಯಂತ್ರಣಕ್ಕೆ ಎಲ್ಲಾ ಅರೋಗ್ಯಾಧಿಕಾರಿಗಳು ತಕ್ಷಣದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಮಳೆಗಾಲ ಮುಗಿದು ಬೇಸಿಗೆ ಆರಂಭವಾಗುವ ಸಂದಿಕಾಲದಲ್ಲಿ ಮಲೇರಿಯಾ, ಚಿಕೂನ್ಗುನ್ಯಾ, ಡೇಂಗ್ಯೂ ಮುಂತಾದ ಸಾಂಕ್ರಾಮಿಕ ರೋಗಗಳು ಜಿಲ್ಲೆಯ ಅಲ್ಲಲ್ಲಿ ಕಂಡುಬಂದು ಉಲ್ಬಣಗೊಳ್ಳುವ ಸಾಧ್ಯತೆಗಳಿರುವುದರಿಂದ ಅದರ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಹಾವು ಕಡಿತಕ್ಕೆ ಸಕಾಲದಲ್ಲಿ ಅಗತ್ಯ ಚಿಕಿತ್ಸೆ ನೀಡಲು ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳುವಂತೆ ಸೂಚಿಸಿದ ಅವರು, ಹಾವು ಕಡಿತದ ವ್ಯಕ್ತಿಗೆ ತ್ವರಿತಗತಿಯ ಚಿಕಿತ್ಸೆ ನಡೆಸಲು ವೈದ್ಯರು ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಅವರು, ಹಾವು ಕಚ್ಚಿದ ಸಂದರ್ಭಗಳಲ್ಲಿ ಸಾರ್ವಜನಿಕರು ಆತಂಕಕ್ಕೊಳಗಾಗದೇ ತಕ್ಷಣದಲ್ಲಿ ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.ನಾಯಿ ಕಡಿತಕ್ಕೆ ಸಂಬಂದಿಸಿದಂತೆ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 12,136ಪ್ರಕರಣಗಳನ್ನು ಗುರುತಿಸಲಾಗಿದೆ. ನಾಯಿ ಕಡಿತ ಚಿಕಿತ್ಸೆಗೆ ಅಗತ್ಯವಾದ ಲಸಿಕೆಗಳನ್ನು ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಾಸ್ತಾನಿಕರೀಸಲಾಗಿದೆ ಎಂದರು.
ಜಿಪಂ ಸಿಇಒ ಎನ್.ಹೇಮಂತ್ ಮಾತನಾಡಿ, ಪ್ರತಿ ವರ್ಷ ಮಲೆನಾಡು ವ್ಯಾಪ್ತಿಯ ಸಾಗರ, ಹೊಸನಗರ, ತೀರ್ಥಹಳ್ಳಿ ಮತ್ತಿತರ ಪ್ರದೇಶದ ವ್ಯಾಪ್ತಿಯಲ್ಲಿ ಹರಡುವ ಮಾರಣಾಂತಿಕ ಮಂಗನ ಕಾಯಿಲೆಯ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ ಅವರು, ಮುಂದಿನ ದಿನಗಳಲ್ಲಿ ಸಂಭಾವ್ಯ ಸೋಂಕಿತ ವ್ಯಕ್ತಿ ಅಥವಾ ಅವರ ಕುಟುಂಬದ ಎಲ್ಲಾ ಸದಸ್ಯರ ಆರೋಗ್ಯ ತಪಾಸಣೆಗೆ ಕ್ರಮವಹಿಸುವಂತೆ ಸೂಚಿಸಿದರು.ಜನಜಾಗೃತಿಗಾಗಿ ಕೆ.ಎಫ್.ಡಿ ಕಾಯಿಲೆ ಕಂಡುಬರುವ ಪ್ರದೇಶದಲ್ಲಿನ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯಸ್ಥರಿಗೆ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕೂಡಲೇ ಪತ್ರ ಬರೆದು ನಿಯಂತ್ರಣ ಕೈಗೊಳ್ಳುವಂತೆಯೂ ಸಲಹೆ ನೀಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಸೇವನೆ ಮತ್ತು ಮಾರಾಟಕ್ಕೆ ಈ ಹಿಂದೆ ಇದ್ದ ದಂಡದ ಮೊತ್ತವನ್ನು 200 ರು. ನಿಂದ 1000 ರು.ಗೆ ವಿಸ್ತರಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ನಿಷೇಧ ಮತ್ತು ದಂಡಕ್ಕೆ ಸಂಬಂಧಿಸಿದಂತೆ ಭಿತ್ತಿ ಫಲಕಗಳನ್ನು ಅಳವಡಿಸುವಂತೆ ಹೇಳಿದರು.ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜನಾಯ್ಕ್ ಜಿಲ್ಲೆಯ ಎಲ್ಲಾ ವೈದ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಇದ್ದರು.
ಚಳಿ, ಜ್ವರ, ತಲೆನೋವು, ಮಾಂಸಖಂಡಗಳಲ್ಲಿ ನೋವು, ಜಾಂಡೀಸ್, ರಕ್ತಸ್ರಾವ, ಮೂತ್ರಪಿಂಡ ಹಾಗೂ ಯಕೃತ್ವೈಫಲ್ಯ ಅಲ್ಲದೇ ಕಡಿಮೆ ಮೂತ್ರ ವಿಸರ್ಜನೆ ಲೆಪ್ಪೋಸ್ಪೈರೋಸಿಸ್ ಸೋಂಕಿನ ಚಹರೆಯಾಗಿರಬಹುದು. ಇಂತಹ ಸೂಕ್ಷ್ಮಗಳಿರುವ ವ್ಯಕ್ತಿಗಳು ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು.ಡಾ.ನಾಗರಾಜನಾಯ್ಕ್, ಜಿಲ್ಲಾ ಸಾಂಕ್ರಾಮಿಕ ರೋಗಗಳ ಕಣ್ಗಾವಲು ಘಟಕದ ಜಿಲ್ಲಾ ಸರ್ವೇಕ್ಷಣಾಧಿಕಾರಿ.