ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಪಂಚ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಗಳು ಅರ್ಹರೆಲ್ಲರಿಗೂ ತಲುಪುವ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಆರ್.ಶಿವಣ್ಣ ಹೇಳಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಪಂಚ ಗ್ಯಾರಂಟಿ ಯೋಜನೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗ್ಯಾರಂಟಿ ಯೋಜನೆಗಳು ಅರ್ಹರಿಗೆ ತಲುಪದೇ ಇರಲು ಕಾರಣ ಕಂಡು ಹಿಡಿದು ಪರಿಶೀಲಿಸಿ ಅದಕ್ಕೆ ಪರಿಹಾರ ಕಲ್ಪಿಸಬೇಕೆಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ 3,85,484 ಫಲಾನುಭವಿಗಳಿಗೆ 2023ರ ಆಗಸ್ಟ್ ಮಾಹೆಯಿಂದ 2024ರ ಡಿಸೆಂಬರ್ ಮಾಹೆಯವರೆಗೂ ರು.76,77,98,000 ಖಾತೆಗೆ ಜಮೆ ಮಾಡಲಾಗಿದೆ. 2025ರ ಜನವರಿ ಮಾಹೆಯಿಂದ ಹಣ ಪಾವತಿ ಪ್ರಾರಂಭವಾಗಿದೆ ಎಂದು ತಿಳಿಸಿದರು.ಗೃಹಲಕ್ಷ್ಮೀ ಯೋಜನೆ ಕುರಿತು ಪ್ರಚಾರದ ಕೊರತೆ ಇದ್ದು, ನೋಂದಣಿಯಾಗದೇ ಇರುವ ಫಲಾನುಭವಿಗಳನ್ನು ನೋಂದಣಿ ಮಾಡಿಸಲು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಪ್ರತಿ ಗ್ರಾಮಗಳಲ್ಲಿಯೂ ಪ್ರಚಾರ ಮಾಡಿಸಬೇಕು. ಅರ್ಹರು ಯಾರೂ ಸಹ ಯೋಜನೆಯಿಂದ ವಂಚಿತರಾಗದಂತೆ ಕ್ರಮವಹಿಸಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಆರ್.ಶಿವಣ್ಣ ಹೇಳಿದರು.ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಆರ್.ಪ್ರಕಾಶ್ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ.100ರಷ್ಟು ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಅದರಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ಕೂಡ ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯ ಹಣದಿಂದ ಸಾಕಷ್ಟು ಬದಲಾವಣೆಗಳಾಗಿದ್ದು, ಈ ಹಣದಿಂದ ಸ್ವಯಂ ಉದ್ಯೋಗ ನಡೆಸುತ್ತಿರುವ ಫಲಾನುಭವಿಗಳ ಯಶೋಗಾಥೆಗಳ ವಿವರವನ್ನು ಪ್ರಚುರ ಪಡಿಸಲು ಕ್ರಮವಹಿಸಬೇಕು ಎಂದು ಹೇಳಿದರು.ಕೆಎಸ್‍ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ್ ಮಾತನಾಡಿ, ರಾಜ್ಯ ರಸ್ತೆ ಸಾರಿಗೆ ನಿಗಮದ ವಾಹನಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯ ನೀಡುವ ಶಕ್ತಿ ಯೋಜನೆಯು 2023ರ ಜೂನ್ 11ರಿಂದ ಜಾರಿಗೊಳಿಸಿದ್ದು, ಚಿತ್ರದುರ್ಗ ವಿಭಾಗದ ವತಿಯಿಂದ 2023ರ ಜೂನ್ ಮಾಹೆಯಿಂದ 2025ರ ಮೇ 4 ರವರೆಗೆ ನಗರ, ಸಾಮಾನ್ಯ ಹಾಗೂ ವೇಗದೂತ ಸಾರಿಗೆಗಳಲ್ಲಿ ಒಟ್ಟು 4,36,09138 ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ. ಪ್ರಯಾಣ ದರದ ಮೊತ್ತ ಒಟ್ಟು ರಪ. 177,33,69463 ಆಗಿರುತ್ತದೆ. ಪ್ರತಿ ನಿತ್ಯ ಸರಾಸರಿ 62837 ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಪ್ರತಿ ನಿತ್ಯ ಸರಾಸರಿ ಶಕ್ತಿ ಯೋಜನೆಯಿಂದ ಚಿತ್ರದುರ್ಗ ವಿಭಾಗಕ್ಕೆ ರು.25,55,287/-ಆದಾಯವಾಗಿರುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ ಮಾತನಾಡಿ, ಶಕ್ತಿ ಯೋಜನೆ ಕುರಿತು ವ್ಯಾಪಕ ಪ್ರಚಾರ ನೀಡಬೇಕು. ಶಕ್ತಿ ಯೋಜನೆಯಿಂದ ಕೆಎಸ್‍ಆರ್‌ಟಿಸಿ ಸಂಸ್ಥೆಯು ಆರ್ಥಿಕವಾಗಿ ಸಬಲವಾಗಿದೆ. ಉಚಿತ ಪ್ರಯಾಣ ಬೆಳೆಸುವ ಮಹಿಳಾ ಫಲಾನುಭವಿಗಳೊಂದಿಗೆ ಕೆಎಸ್‍ಆರ್‌ಟಿಸಿ ಸಿಬ್ಬಂದಿ ಸೌಜನ್ಯಯೊಂದಿಗೆ ವರ್ತಿಸಲು ತಿಳುವಳಿಕೆ ನೀಡಬೇಕು ಎಂದು ಮನವಿ ಮಾಡಿದರು.ಚಿತ್ರದುರ್ಗ-ದಾವಣಗೆರೆ ಹಾಗೂ ಮುಂದಕ್ಕೆ ಕಾರ್ಯಾಚರಣೆ ಮಾಡುವ ಎಲ್ಲ ವೇಗದೂತ ಸಾರಿಗೆಗಳನ್ನು ಕಡ್ಡಾಯವಾಗಿ ಭರಮಸಾಗರ ಗ್ರಾಮದ ಸರ್ವೀಸ್ ರಸ್ತೆಯ ಮೂಲಕ ಕಾರ್ಯಾಚರಣೆ ಮಾಡಿ, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಸದಸ್ಯ ಟಿ.ನಿರಂಜನ್ ಸಲಹೆ ನೀಡಿದರು.
ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 5312 ಪದವಿ ಫಲಾನುಭವಿಗಳು ಹಾಗೂ 103 ಡಿಪ್ಲೊಮಾ ಫಲಾನುಭವಿಗಳು ಸೇರಿದಂತೆ ಒಟ್ಟು 5415 ನಿರುದ್ಯೋಗಿಗಳು ಸೌಲಭ್ಯ ಪಡೆದಿರುತ್ತಾರೆ. 2024ರ ಜನವರಿ ಮಾಹೆಯಿಂದ 2025ರ ಫೆಬ್ರವರಿ ಅಂತ್ಯದವರೆಗೆ ರು.10,0495500 ನಿರುದ್ಯೋಗಿಗಳ ಖಾತೆಗೆ ಡಿಬಿಟಿ ಮಾಡಲಾಗಿದೆ ಎಂದು ಉದ್ಯೋಗಾಧಿಕಾರಿ ರವೀಂದ್ರ ತಿಳಿಸಿದರು.ಅನ್ನಭಾಗ್ಯ ಯೋಜನೆಯಡಿ ನೇರ ನಗದು ವರ್ಗಾವಣೆ ಬದಲಾಗಿ ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತಿರುತ್ತದೆ ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂದನ್ ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಬ್ದುಲ್ಲಾ ಶಾ ವಲಿ, ಟಿ.ಕೃಷ್ಣಮೂರ್ತಿ, ಹೇಮಂತ್ ಯಾದವ್, ಮಹಮ್ಮದ್ ಇಸ್ಮಾಯಿಲ್, ಶಿವಕುಮಾರ್, ಎಲ್.ಇಂದಿರಾ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಗಾಯತ್ರಿ ಸೇರಿದಂತೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.