ಯೋಗದಿಂದ ರೋಗ ದೂರವಾಗುತ್ತದೆ. ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಪ್ರಕೃತಿ ನಮಗೆ ನೀಡಿದ ಅನೇಕ ಅಂಶಗಳನ್ನು ನಾವಿಂದು ಮರೆತಿದ್ದೇವೆ.

ಹರಪನಹಳ್ಳಿ: ದುಶ್ಚಟಗಳಿಂದ ದೂರವಿದ್ದು, ಶಿಸ್ತಿನ ಜೀವನಶೈಲಿ ರೂಢಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಅರಸೀಕೆರೆ ಕೋಲಶಾಂತೇಶ್ವರ ವಿರಕ್ತಮಠದ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಕೋಲಶಾಂತೇಶ್ವರ ಜನಕಲ್ಯಾಣ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಮಠದ ಆವರಣಲ್ಲಿ ಆಯೋಜಿಸಿದ್ದ ಉಚಿತ ಪ್ರಕೃತಿ ಚಿಕಿತ್ಸಾ ಶಿಬಿರದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಯೋಗದಿಂದ ರೋಗ ದೂರವಾಗುತ್ತದೆ. ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಪ್ರಕೃತಿ ನಮಗೆ ನೀಡಿದ ಅನೇಕ ಅಂಶಗಳನ್ನು ನಾವಿಂದು ಮರೆತಿದ್ದೇವೆ. ಔಷಧ ರಹಿತವಾಗಿ ನಮ್ಮ ಜೀವನಶೈಲಿ ಮಾರ್ಪಡಿಸಿಕೊಳ್ಳುವ ಮೂಲಕ ಮರೆತ ಅಂಶಗಳನ್ನು ನಮಗೆ ಪ್ರಕೃತಿ ಚಿಕಿತ್ಸಾ ಪದ್ಧತಿ ನೆನಪಿಸುತ್ತಿದೆ. ಈ ಬಗ್ಗೆ ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮೂಡಿದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಜನನಿ ಆಸ್ಪತ್ರೆ ಕಲ್ಯಾಣ ಕರ್ನಾಟಕಕ್ಕೆ ದೊಡ್ಡ ಕೊಡುಗೆಯಾಗಿದೆ. ಮನೆ ಬಾಗಿಲಲ್ಲೇ ಇಂಥ ಸೌಲಭ್ಯವನ್ನು ಅಭಿವೃದ್ಧಿಪಡಿಸುವುದು ಸಮಾಜಕ್ಕೆ ವರದಾನ. ಜನಸಾಮಾನ್ಯರು ಇದರ ಸೌಲಭ್ಯ ಪಡೆದು ಆರೋಗ್ಯವಂತ ಜೀವನ ಸಾಗಿಸಬೇಕು ಎಂದು ಕರೆ ನೀಡಿದರು.

ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ವೈ.ಡಿ. ಅಣ್ಣಪ್ಪ ಮಾತನಾಡಿ, ಒಮ್ಮೆ ಆರೋಗ್ಯ ಹದಗೆಟ್ಟರೆ ಸರಿಪಡಿಸಿಕೊಳ್ಳುವುದು ಕಷ್ಟಸಾಧ್ಯ. ಆರೋಗ್ಯ ಸೇವೆ ದುಬಾರಿಯಾಗುತ್ತಿರುವ ಇಂದಿನ ದಿನಗಳಲ್ಲಿ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದೇ ಜಾಣತನ. ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಪ್ರಯೋಜನ ಪಡೆದುಕೊಳ್ಳುವ ಜತೆಗೆ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳೋಣ ಎಂದು ಹೇಳಿದರು.

ಪಾಶ್ಚಾತ್ಯರ ಅಂಧಾನುಕರಣೆ ತೊರೆದ ನಮ್ಮ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ರೋಗಗಳಿಂದ ದೂರ ಇರೋಣ ಎಂದು ಬಿಜೆಪಿ ಅಧ್ಯಕ್ಷ ಪ್ರಶಾಂತ್ ಪಾಟೀಲ ಸಲಹೆ ಮಾಡಿದರು.

ಜನನಿ ಆಸ್ಪತ್ರೆಯ ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ ಮುಖ್ಯಸ್ಥ ಉದಯಶಂಕರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜನಕಲ್ಯಾಣ ಕೇಂದ್ರದ ವ್ಯವಸ್ಥಾಪಕ ಪ್ರದೀಪ್ ನಿರೂಪಿಸಿದರು. ವಿವಿಧೆಡೆಯಿಂದ ಆಗಮಿಸಿದ್ದ ನೂರಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನ ಪಡೆದರು.

ಹರಪನಹಳ್ಳಿ ತಾಲೂಕಿನ ಅರಸೀಕೆರೆಯಲ್ಲಿ ಕೋಲಶಾಂತೇಶ್ವರ ಮಠದ ಆವರಣದಲ್ಲಿ ಆಯೋಜಿಸಿದ್ದ ಉಚಿತ ಪ್ರಕೃತಿ ಚಿಕಿತ್ಸಾ ಶಿಬಿರದ ಸಾನ್ನಿಧ್ಯ ವಹಿಸಿ ಶಾಂತಲಿಂಗೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.