ಮತ ಎಣಿಕೆ ವೇಳೆ ಜಾಗ್ರತೆ: ಸಂಸದ ಸಿದ್ದೇಶ್ವರ

| Published : May 19 2024, 01:52 AM IST

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲ್ಲಿದ್ದು, ಜೂ.4ರಂದು ನಡೆಯುವ ಮತ ಎಣಿಕೆ ವೇಳೆ ಕಾರ್ಯಕರ್ತರು ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಕಾಂಗ್ರೆಸ್‌ನವರ ಬಳಿ ಬೆಟ್ಟಿಂಗ್‌ಗೆ ಹಣ ಕಟ್ಟಿದರೆ, ಹಣವಂತೂ ವಾಪಸ್‌ ಬರಲ್ಲ ಎಂದು ಲೇವಡಿ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲ್ಲಿದ್ದು, ಜೂ.4ರಂದು ನಡೆಯುವ ಮತ ಎಣಿಕೆ ವೇಳೆ ಕಾರ್ಯಕರ್ತರು ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಹೇಳಿದರು.

ನಗರದ ವಾಣಿ ಹೊಂಡಾ ಶೋ ರೂಂ ಆವರಣದಲ್ಲಿ ಶನಿವಾರ ಬಿಜೆಪಿ ಲೋಕಸಭಾ ಕ್ಷೇತ್ರದ ಪ್ರಚಾರ ಕಾರ್ಯಾಲಯದಲ್ಲಿ ಪಕ್ಷದ ಮತ ಎಣಿಕೆ ಏಜೆಂಟರು, ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮೆಲ್ಲಾ ಕಾರ್ಯಕರ್ತರು, ಮುಖಂಡರು ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದು, ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯ, ದೇಶದ ಸುಭದ್ರತೆ, ಎಲ್ಲ ವರ್ಗದ ಜನರ ಹಿತಕಾಯುವ ಬಿಜೆಪಿ ಆಡಳಿತವನ್ನು ಮೆಚ್ಚಿ, ದಾವಣಗೆರೆ ಸೇರಿದಂತೆ ದೇಶದ ಮತದಾರರು ಬಿಜೆಪಿ ಮೈತ್ರಿಕೂಟಕ್ಕೆ ಬೆಂಬಲಿಸಿ, ಆಶೀರ್ವದಿಸಿದ್ದಾರೆ. ಮುಂದಿನ ಹಂತದ ಚುನಾವಣೆಯಲ್ಲೂ ಬಿಜೆಪಿಗೆ ಮೈತ್ರಿಕೂಟಕ್ಕೆ ಆಶೀರ್ವದಿಸಲಿದ್ದಾರೆ ಎಂದರು.

ಹರಿಹರ ಶಾಸಕ ಬಿ.ಪಿ.ಹರೀಶ ಗೌಡ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ತಮ್ಮ ತಾಲೂಕಿನಿಂದ ಕನಿಷ್ಠ 20 ಸಾವಿರ ಲೀಡ್ ಕೊಡಿಸುತ್ತೇವೆ. ತಮ್ಮ ಕ್ಷೇತ್ರದಲ್ಲಿ ಜೆಡಿಎಸ್ ಮಾಜಿ ಶಾಸಕ ಎಚ್.ಎಸ್. ಶಿವಶಂಕರ ಸೇರಿದಂತೆ ಬಿಜೆಪಿ, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಬಿಜೆಪಿಗೆ 20 ಸಾವಿರಕ್ಕಿಂತ ಹೆಚ್ಚು ಮುನ್ನಡೆಯನ್ನು ಕೊಡಿಸುವ ಮೂಲಕ ಫಲಿತಾಂಶದಲ್ಲೂ ತಮ್ಮ ಕ್ಷೇತ್ರ ಪ್ರಮುಖ ಪಾತ್ರ ವಹಿಸಲಿದೆ ಎಂದರು.

ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ ಹನಗವಾಡಿ ಮಾತನಾಡಿ, ಈ ಹಿಂದೆ ಕಾಂಗ್ರೆಸ್ಸಿನವರು ಫಲಿತಾಂಶ ಘೋಷಣೆಗೂ ಮುನ್ನವೇ ತಾವೇ ಗೆದ್ದೆವೆಂದು ಪಟಾಕಿ ಸಿಡಿಸಿದ್ದ ಇತಿಹಾಸವಿದೆ. ಅಂತಿಮವಾಗಿ ಇಲ್ಲಿ ಗೆಲುವು ಮತ್ತೆ ಬಿಜೆಪಿಯದ್ದೇ ಆಗಲಿದೆ. ಪ್ರಧಾನಿ ನರೇಂದ್ರ ಮೋದಿ ಸಮರ್ಥ ನಾಯಕತ್ವ, ಬಿಜೆಪಿ ದೇಶದ ಭದ್ರತೆ, ರಕ್ಷಣೆ, ಅಭಿವೃದ್ಧಿ, ಶ್ರೀರಾಮ ಮಂದಿರ ನಿರ್ಮಾಣ ಸೇರಿದಂತೆ ದೇಶದ ಸರ್ವಾಂಗೀಣವಾಗಿ ಮುನ್ನಡೆಸುತ್ತಿರುವುದನ್ನು ಗಮನಿಸಿ, ಮತ್ತೆ ಮತದಾರರು ಮೋದಿ ಅವರ ಸುರಕ್ಷಿತ ಕೈಗೆ ಆಡಳಿತ ಚುಕ್ಕಾಣಿ ನೀಡಲಿದ್ದಾರೆ. ನಮ್ಮ ಪಕ್ಷದ ಕೆಲವರನ್ನು ಕಾಂಗ್ರೆಸ್ ಸೆಳೆದಿರಬಹುದು. ಹಣವನ್ನು ಮತದಾರರಿಗೆ ಹಂಚಿರಬಹುದು. ಆದರೆ, ಮತದಾರರ ಆಶೀರ್ವಾದ ಬಿಜೆಪಿ ಮೇಲಿದೆ ಎಂದು ತಿಳಿಸಿದರು.

ಜಗಳೂರು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ತಮ್ಮ ತಾಲೂಕಿನಲ್ಲಿ ಮಾಜಿ ಶಾಸಕ ಎಚ್.ಪಿ.ರಾಜೇಶ, ತಾವು ಸೇರಿದಂತೆ ಎಲ್ಲಾ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಬಿಜೆಪಿ ಗೆಲುವಿಗೆ ಶ್ರಮಿಸಿದ್ದು, ಇಡೀ ಕ್ಷೇತ್ರದ ಮತದಾರರ ಆಶೀರ್ವಾದ ಬಿಜೆಪಿ ಮೇಲಿದೆ. ಸಂಸದ ಜಿ.ಎಂ.ಸಿದ್ದೇಶ್ವರ ಸ್ಥಾನವನ್ನು ಲೋಕಸಭೆಯಲ್ಲಿ ಗಾಯತ್ರಿ ಸಿದ್ದೇಶ್ವರ ಪ್ರತಿನಿಧಿಸುವುದು ಶತಃಸಿದ್ಧ. ಇದು ದಾವಣಗೆರೆ ಮತದಾರರ ತೀರ್ಪು ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಬಸವರಾಜ ನಾಯ್ಕ, ಯಶವಂತ ರಾವ್ ಜಾಧವ್, ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಕಡ್ಲೇಬಾಳ್, ಅನಿಲ ನಾಯ್ಕ, ಅಣ್ಣೇಶ ಐರಣಿ, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ, ಬಿ.ಎಂ.ಸತೀಶ ಕೊಳೇನಹಳ್ಳಿ, ಜಗಳೂರು ಅಧ್ಯಕ್ಷ ಮಹೇಶ ಪಲ್ಲಾಗಟ್ಟೆ, ಕೊಟ್ರೇಶ ಗೌಡ, ಫಣಿಯಾಪುರ ಲಿಂಗರಾಜ, ಮುರುಗೇಶ ಆರಾಧ್ಯ, ಬಿ.ಎಸ್.ಜಗದೀಶ, ಶಿವನಗೌಡ ಪಾಟೀಲ, ಮುಖಂಡರು, ಕಾರ್ಯಕರ್ತರು, ಯುವಕರು ಇದ್ದರು.

- - -

ಬಾಕ್ಸ್‌ * 25-30 ಸಾವಿರ ಲೀಡ್‌ನಲ್ಲಿ ಬಿಜೆಪಿ ಗೆಲುವು ಬಿಜೆಪಿ ಜಿಲ್ಲಾಧ್ಯಕ್ಷ ಎನ್‌.ರಾಜಶೇಖರ ನಾಗಪ್ಪ ಮಾತನಾಡಿ, ದಾವಣಗೆರೆಯಲ್ಲಿ ಕನಿಷ್ಠ 25-30 ಸಾವಿರ ಮತಗಳ ಅಂತರದಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ. ಇದೇ ವಿಚಾರವನ್ನು ಪಕ್ಷದ ರಾಜ್ಯ ಸಮಿತಿಗೂ ನೀಡಿದ್ದೇವೆ. ಕಾಂಗ್ರೆಸ್ಸಿನವರು ಶೇ.50-50 ಚಾನ್ಸ್ ಅಂತೆಲ್ಲಾ ಹೇಳಿಕೊಂಡು ಸುತ್ತಾಡುತ್ತಿದ್ದಾರೆ. ಅದ್ಯಾವುದಕ್ಕೂ ನಮ್ಮ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಕಿವಿಗೊಡಬಾರದು. ದಾವಣಗೆರೆ ಕ್ಷೇತ್ರದ ಮತದಾರರು ಬಿಜೆಪಿಗೆ ಸ್ಪಷ್ಟವಾಗಿ ಆಶೀರ್ವಾದ ಮಾಡಿದ್ದಾರೆ. ಇಲ್ಲಿಂದ ಗಾಯತ್ರಿ ಸಿದ್ದೇಶ್ವರ ಅವರು ಸಂಸದರಾಗಿ ಲೋಕಸಭೆ ಪ್ರವೇಶಿಸುವುದು ಸ್ಪಷ್ಟ ಎಂದರು.

- - -

ಟಾಪ್‌ ಕೋಟ್‌ ಕಾಂಗ್ರೆಸ್ಸಿನವರು ತಾವೇ ಗೆಲ್ಲುವುದಾಗಿ ಬೆಟ್ಟಿಂಗ್ ಕಟ್ಟುವುದಾಗಿ ಹೇಳುತ್ತಿದ್ದಾರೆ. ನೀವ್ಯಾರೂ ಕಾಂಗ್ರೆಸ್ಸಿನವರ ಬಳಿ ಹಣ ಪಣವಾಗಿ ಕಟ್ಟಲು ಹೋಗಬೇಡಿ. ಅಂತಹರ ಕೈಗೆ ಹಣ ಕೊಟ್ಟರೆ, ವಾಪಸ್‌ ಬರುವುದಿಲ್ಲ. ಕಾಂಗ್ರೆಸ್ಸಿನವರು ಗೆಲ್ಲುತ್ತೇವೆಂದು ಹೇಳಿಕೊಳ್ಳುತ್ತಿರುವುದೆಲ್ಲಾ ಜೂ.4ರಂದು ಸುಳ್ಳಾಗಲಿದೆ. ಬಿಜೆಪಿಯೇ ಗೆಲ್ಲಲಿದೆ

- ಜಿ.ಎಂ.ಸಿದ್ದೇಶ್ವರ, ಸಂಸದ

- - - -18ಕೆಡಿವಿಜಿ13, 14:

ದಾವಣಗೆರೆ ಲೋಕಸಭಾ ಬಿಜೆಪಿ ಪ್ರಚಾರ ಕಾರ್ಯಾಲಯದಲ್ಲಿ ಮತ ಎಣಿಕೆಗೆ ತೆರಳುವ ಪಕ್ಷದ ಏಜೆಂಟರು, ಮುಖಂಡರ ಸಭೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿದರು.