ಸಾರಾಂಶ
ಪ್ರೌಢಶಾಲಾ ಹಂತದಿಂದ ಕಾಲೇಜು ಶಿಕ್ಷಣ ಪಡೆಯಲು ಸನ್ನದ್ದಕೊಳ್ಳುತ್ತಿರುವ ವಿದ್ಯಾರ್ಥಿಗಳು ಇಂದಿನಿಂದಲೇ ಸ್ಪರ್ಧಾತ್ಮಕ ಜಗತ್ತಿಗೆ ದಾಪುಗಾಲು ಇರಿಸಲು ಹಣಿಯಾಗಬೇಕು. ಈ ಹಂತದಲ್ಲಿ ಸ್ಪರ್ಧಾಮನೋಭಾವವನ್ನು ಹೆಚ್ಚಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಮರ್ಥರಾದರೆ ಭವಿಷ್ಯ ಉಜ್ವಲವಾಗಿರುತ್ತದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರಸ್ತುತ ಪೌಢಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಸಂಕಲ್ಪ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.ನಗರದಲ್ಲಿರುವ ಅಭಿನವಭಾರತಿ ಪ್ರೌಢಶಾಲಾ ಆವರಣದಲ್ಲಿ ಅಭಿನವ ಭಾರತಿ ಪ್ರೌಢಶಾಲೆ ಆಯೋಜಿಸಿದ್ದ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರೌಢಶಾಲಾ ಹಂತದಿಂದ ಕಾಲೇಜು ಶಿಕ್ಷಣ ಪಡೆಯಲು ಸನ್ನದ್ದಕೊಳ್ಳುತ್ತಿರುವ ವಿದ್ಯಾರ್ಥಿಗಳು ಇಂದಿನಿಂದಲೇ ಸ್ಪರ್ಧಾತ್ಮಕ ಜಗತ್ತಿಗೆ ದಾಪುಗಾಲು ಇರಿಸಲು ಹಣಿಯಾಗಬೇಕು. ಈ ಹಂತದಲ್ಲಿ ಸ್ಪರ್ಧಾಮನೋಭಾವವನ್ನು ಹೆಚ್ಚಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಮರ್ಥರಾದರೆ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ನುಡಿದರು.ಎಸ್ಸೆಸ್ಸೆಲ್ಸಿ ಪ್ರತಿ ವಿದ್ಯಾರ್ಥಿಗಳಿಗೂ ಹೊಸ ತಿರುವು ನೀಡುತ್ತದೆ, ಭಯಬಿಟ್ಟು ಪರೀಕ್ಷೆಗಳನ್ನು ಧೈರ್ಯದಿಂದ ಬರೆಯಿರಿ, ಶ್ರದ್ಧೆ ಮತ್ತು ಸಮಯ ಪ್ರಜ್ಞೆಯಿಂದ ಓದಿದವರು ಉತ್ತಮ ಅಂಕ ಪಡೆಯುಲು ಸಾಧ್ಯವಾಗುತ್ತದೆ, ಕೆಲವರು ಕಡಿಮೆ ಅಂಕ ಪಡೆದರೂ ಮುಂದಿನ ಪರೀಕ್ಷೆಯಲ್ಲಿ ಮತ್ತಷ್ಟು ಹೆಚ್ಚು ಅಂಕ ಪಡೆಯಲು ಸಾಧ್ಯವಾಗುತ್ತದೆ, ಅನಾಹುತಗಳಿಗೆ ಮನಸ್ಸು ಮಾಡಬೇಡಿ ಎಂದರು.
ಮನುಷ್ಯನಿಗೆ ಶಿಕ್ಷಣ ಮತ್ತು ಜೀವನದ ಪರೀಕ್ಷೆಗಳು ಎದುರಾಗುತ್ತವೆ, ಎರಡನ್ನೂ ಸಮಚಿತ್ತದೊಂದಿಗೆ ದೃತಿಗೆಡದೆ ಎದುರಿಸಬೇಕು, ಸಾಕಷ್ಟು ಪರೀಕ್ಷೆಗಳು ನಿಮ್ಮನ್ನು ಧೈರ್ಯವಂತರನ್ನಾಗಿ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವಂತವಾಗಿರುತ್ತವೆ ಎಂದರು.ಪ್ರತಿಯೊಬ್ಬರಲ್ಲೂ ಒಂದಲಾ ಒಂದು ಪ್ರತಿಭೆ ಇರುತ್ತದೆ. ಪ್ರತಿಭೆ ಮತ್ತು ಅಂಕ ಪಡೆಯಲಿಕ್ಕೆ ಯಾವುದೇ ಜಾತಿ, ಧರ್ಮ, ವರ್ಗ, ಪ್ರದೇಶ ಇರುವುದಿಲ್ಲ, ಪ್ರತಿಭಾವಂತರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ. ಎಲ್ಲವೂ ನಿಮ್ಮ ಶ್ರಮದಿಂದ ಪಡೆದುಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಹದೇವು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಗಂಗಾಧರಸ್ವಾಮಿ, ಅಭಿನವ ಭಾರತಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ ಕೀಲಾರ, ಪ್ರಾಂಶುಪಾಲೆ ಅಂಜಲಿಜೋಶಿ ಮತ್ತು ಶಿಕ್ಷಕ ವೃಂದ ಹಾಜರಿದ್ದರು.