ನಾಡು, ನುಡಿ, ಸಂಸ್ಕೃತಿ, ಪರಂಪರೆ ಉಳಿಸಲು ಪ್ರತಿಯೊಬ್ಬರು ಕಟಿಬದ್ಧರಾಗುವ ದೃಢ ಸಂಕಲ್ಪ ಮಾಡುವ ಜೊತೆಗೆ ಕನ್ನಡ ನಿತ್ಯೋತ್ಸವವಾಗಬೇಕು ಎಂದು ಜಡೆ ಹಿರೇಮಠ ಮತ್ತು ಸೊರಬ ಕಾನುಕೇರಿ ಮಠದ ಘನ ಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ಸೊರಬ
ನಾಡು, ನುಡಿ, ಸಂಸ್ಕೃತಿ, ಪರಂಪರೆ ಉಳಿಸಲು ಪ್ರತಿಯೊಬ್ಬರು ಕಟಿಬದ್ಧರಾಗುವ ದೃಢ ಸಂಕಲ್ಪ ಮಾಡುವ ಜೊತೆಗೆ ಕನ್ನಡ ನಿತ್ಯೋತ್ಸವವಾಗಬೇಕು ಎಂದು ಜಡೆ ಹಿರೇಮಠ ಮತ್ತು ಸೊರಬ ಕಾನುಕೇರಿ ಮಠದ ಘನ ಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಕರೆ ನೀಡಿದರು.ತಾಲೂಕಿನ ಜಡೆ ಗ್ರಾಮದ ಶ್ರೀ ಸಿದ್ಧವೃಷಬೇಂದ್ರ ಸಂಸ್ಥಾನ ಮಠದ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ (ರಿ.) ವತಿಯಿಂದ ಹಮ್ಮಿಕೊಂಡಿದ್ದ ಜಡೆ ಹೋಬಳಿ ಮಟ್ಟದ ೭೦ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅನ್ಯಭಾಷಿಕರಿಗೂ ಸಹ ಕನ್ನಡವನ್ನು ಕಲಿಸಬೇಕು. ವ್ಯವಹಾರಿಕ ಭಾಷೆಯಾಗಿ ಕನ್ನಡವನ್ನು ಬಳಕೆ ಮಾಡುವ ಜೊತೆಗೆ ಭಾಷಾ ಶ್ರೀಮಂತಿಕೆಯನ್ನು ಎತ್ತಿ ಹಿಡಿಯಬೇಕು. ನಾಡು-ನುಡಿ, ಗಡಿಯ ವಿಷಯದಲ್ಲಿ ಯಾವುದೇ ಸಮಸ್ಯೆ ಎದುರಾದಾಗ ಪ್ರತಿಯೊಬ್ಬ ಕನ್ನಡ ಮನಗಳು ಒಗ್ಗೂಡಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಮಾತನಾಡಿ, ಕನ್ನಡ ಕೇವಲ ಭಾಷೆ ಅಲ್ಲ. ಅದು ಬದುಕಿನ ಧರ್ಮವಾಗಿ, ಜನಾಂಗ ಹಾಗೂ ಅಂತಸ್ತು, ಪ್ರಾದೇಶಿಕ ಭಿನ್ನತೆಗೂ ಮೀರಿದ ಶ್ರೀಮಂತ ಭಾಷೆಗೆ ಸಾಕ್ಷಿಯಾಗಿದೆ. ಜಗತ್ತಿನ ಭಾಷೆಯಲ್ಲಿಯೇ ಸುಲಲಿತ ಮತ್ತು ಸುಂದರ ಭಾಷೆ ಕನ್ನಡ. ಈ ಕಾರಣದಿಂದಲೇ ಕನ್ನಡವನ್ನು ರಾಣಿ ಎನ್ನುವ ಹೆಗ್ಗಳಿಕೆಯನ್ನು ಹೊಂದಿ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಕನ್ನಡ ನಾಡನ್ನಾಳಿದ ಪ್ರಾಚೀನ ರಾಜಮನೆತನಗಳಾದ ಕದಂಬ, ಗಂಗ, ರಾಷ್ಟ್ರಕೂಟ, ಚಾಲುಕ್ಯ, ಕೆಳದಿ ಅರಸರ ಹಾಗೂ ಮೈಸೂರು ಒಡೆಯರ ಕೊಡುಗೆ ಅಪಾರವಾಗಿದೆ ಎಂದರು.
ಮುಖ್ಯಅತಿಥಿ ಡಾ. ವಿಶ್ವನಾಥ ನಾಡಿಗೇರ್ ಮಾತನಾಡಿ, ಕನ್ನಡದ ಹೆಮ್ಮೆಯ ಕವಿಗಳಾದ ಪಂಪ, ರನ್ನ, ಪೊನ್ನ ಮತ್ತು ಆಧುನಿಕ ಕಾಲಘಟ್ಟದ ಕವಿಗಳು ನಾಡಿನ ಹಿರಿಮೆ ಗರಿಮೆಯನ್ನು ಎತ್ತಿ ಹಿಡಿದಿದ್ದಾರೆ. ವೈಚಾರಿಕತೆಯ ನೆಲೆಯಲ್ಲಿ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಪೋಷಿಸುವ ಕಾರ್ಯವಾಗಬೇಕು ಎಂದರು.ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರ ಮಂಜುನಾಥ ಪಾಟೀಲ್ ಕಲ್ಕೊಪ್ಪ ಮತ್ತು ಕನ್ನಡಪ್ರಭ ಪತ್ರಿಕೆ ವಿತರಕ ಪೇಪರ್ ಬಾಬಣ್ಣ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಇದಕ್ಕೂ ಮೊದಲು ಜಡೆಯ ಪ್ರಮುಖ ಬೀದಿಗಳಲ್ಲಿ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.ಜಗದ್ಗುರು ಕುಮಾರ ಕೆಂಪಿನ ಸಿದ್ಧವೃಷಬೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಕರವೇ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಡಿ. ಪರಮೇಶ್ವರ, ಡಾ. ವಿಶ್ವನಾಥ ನಾಡಿಗೇರ್, ಸೊರಬ ಘಟಕದ ನೆಮ್ಮದಿ ಶ್ರೀಧರ ಸೇರಿದಂತೆ ಜಡೆ ಹೋಬಳಿ ಘಟಕದ ಕರವೇ ಪದಾಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು. ನಂತರ ರಸಮಂಜರಿ ಕಾರ್ಯಕ್ರಮ ನೆರವೇರಿತು.