ಜ್ಞಾನವಂತರಾಗಿ ಸಾರ್ಥಕ ಜೀವನ ನಡೆಸಿ: ನಿಶ್ಚಲಾನಂದನಾಥ ಶ್ರೀ

| Published : Feb 19 2025, 12:46 AM IST

ಜ್ಞಾನವಂತರಾಗಿ ಸಾರ್ಥಕ ಜೀವನ ನಡೆಸಿ: ನಿಶ್ಚಲಾನಂದನಾಥ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಗುರು- ಹಿರಿಯರ ಬಗ್ಗೆ ಭಕ್ತಿ, ಗೌರವ ಬೆಳೆಸಿಕೊಳ್ಳುವುದೇ ನೈಜ ಶಿಕ್ಷಣದ ತಳಹದಿ. ಡಿ.ಕೆ.ಗೌಡ ಪ್ರೌಢಶಾಲೆಯಲ್ಲಿ ವಿಶೇಷವಾಗಿ ನೈತಿಕ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಮಕ್ಕಳು ಶೈಕ್ಷಣಿಕ ಸಾಧನೆ ಮಾಡುತ್ತಾ ಕ್ರೀಡಾ ಚಟುವಟಿಕೆಗಳಲ್ಲಿ ಕೀರ್ತಿ ತರುತ್ತಿದ್ದಾರೆ .

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ವಿದ್ಯಾರ್ಥಿಗಳು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಜ್ಞಾನವಂತರಾಗಿ ಸಾರ್ಥಕ ಜೀವನ ನಡೆಸಬೇಕು ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕಿವಿಮಾತು ಹೇಳಿದರು.

ಸಮೀಪದ ಚಂದೂಪುರ ಗ್ರಾಮದ ಡಿ.ಕೆ.ಗೌಡ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಕಿಡ್ಸ್ ಆರ್ಕ್ ಇಂಟರ್ ನ್ಯಾಷನಲ್ ಶಾಲಾ ವಾರ್ಷಿಕೋತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮದ ಮೂಲಕ ಸಾಧನೆಗೆ ಮುಂದಾಗಬೇಕು. ಶಿಕ್ಷಣದ ಜತೆಗೆ ಆಧ್ಯಾತ್ಮಿಕ ಚಿಂತನೆಗಳನ್ನು ರೂಢಿಸಿಕೊಳ್ಳಬೇಕು. ಇದಕ್ಕಾಗಿ ಮಹಾನ್ ವ್ಯಕ್ತಿಗಳು ಮತ್ತು ಸಿದ್ಧಿ ಪುರುಷರ ಬಗ್ಗೆ ಅಧ್ಯಯನ ಮಾಡಬೇಕು ಎಂದರು.

ಗ್ರಾಮೀಣ ಪ್ರದೇಶದಲ್ಲಿ ಶಾಲೆಕಟ್ಟುವ ಕಾಯಕದ ಮೂಲಕ ಗ್ರಾಮೀಣ ಪ್ರದೇಶದ ಪ್ರತಿಭೆಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಪೈಪೋಟಿ ನೀಡಲು ಅವಕಾಶ ನೀಡಿರುವ ಡಿ.ಕೆ. ಗೌಡ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.

ಡಿ.ಕೆ.ಗೌಡ ಸಂಸ್ಥೆಯ ಕಾರ್ಯದರ್ಶಿ ಚಂದೂಪುರ ಶಿವಲಿಂಗೇಗೌಡ ಮಾತನಾಡಿ, ಗುರು- ಹಿರಿಯರ ಬಗ್ಗೆ ಭಕ್ತಿ, ಗೌರವ ಬೆಳೆಸಿಕೊಳ್ಳುವುದೇ ನೈಜ ಶಿಕ್ಷಣದ ತಳಹದಿ. ಡಿ.ಕೆ.ಗೌಡ ಪ್ರೌಢಶಾಲೆಯಲ್ಲಿ ವಿಶೇಷವಾಗಿ ನೈತಿಕ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಮಕ್ಕಳು ಶೈಕ್ಷಣಿಕ ಸಾಧನೆ ಮಾಡುತ್ತಾ ಕ್ರೀಡಾ ಚಟುವಟಿಕೆಗಳಲ್ಲಿ ಕೀರ್ತಿ ತರುತ್ತಿದ್ದಾರೆ ಎಂದರು.

ನಿವೃತ್ತ ಪ್ರಾಂಶುಪಾಲ ಡಾ.ಬಿ.ಕೃಷ್ಣಪ್ಪ ಮಾತನಾಡಿ, ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಯವರೆಗೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತ ಕನ್ನಡ ಪ್ರೇಮ ಮೆರೆಯುತ್ತಿರುವ ಡಿ.ಕೆ.ಗೌಡ ಸಂಸ್ಥೆಯ ಕಾರ್ಯ ಚಟುವಟಿಕೆಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಚಂದೂಪುರ ರೇಣುಕಾಚಾರ್ಯಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಬೆಂಗಳೂರಿನ ಕಿಡ್ಸ್ ಆರ್ಕ್ ಇಂಟರ್ ನ್ಯಾಷನಲ್ ಶಾಲೆಯ ಪ್ರಾಂಶುಪಾಲರಾದ ಎನ್. ಶಶಿರೇಖಾ, ಮುಖ್ಯ ಶಿಕ್ಷಕ ಶಿವಮಾದೇಗೌಡ ಸೇರಿ ಹಲವರಿದ್ದರು.