ಈ ಪ್ರದೇಶದ ಅಭ್ಯರ್ಥಿಗಳು ಸತತ ಅಧ್ಯಯನ ಮಾಡುವುದರ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳು ಎದುರಿಸಲು ಸಿದ್ಧರಾಗಿರಿ ಎಂದು ಬೀದರಿನ ಅಪರ ಜಿಲ್ಲಾಧಿಕಾರಿ ಸುರೇಖಾ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಬೀದರ್

ಈ ಪ್ರದೇಶದ ಅಭ್ಯರ್ಥಿಗಳು ಸತತ ಅಧ್ಯಯನ ಮಾಡುವುದರ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳು ಎದುರಿಸಲು ಸಿದ್ಧರಾಗಿರಿ ಎಂದು ಬೀದರಿನ ಅಪರ ಜಿಲ್ಲಾಧಿಕಾರಿ ಸುರೇಖಾ ಕರೆ ನೀಡಿದರು.

ಅವರು ಜಿಲ್ಲಾಡಳಿತ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ ಹಾಗೂ ಕರ್ನಾಟಕ ಸಾಹಿತ್ಯ ಸಂಘದ ಸಹಯೋಗದಲ್ಲಿ ಎಎಸ್‌ಆರ್ ಸಭಾಂಗಣದಲ್ಲಿ ಆಯೋಜಿಸಿದ ಕಲ್ಯಾಣ ಕರ್ನಾಟಕದ ಉತ್ಸವ ಪ್ರಯುಕ್ತ ನಡೆದ ರಾಷ್ಟ್ರೀಯ ಭಾವೈಕ್ಯತೆ ಬಹುಭಾಷಾ ಕವಿಗೋಷ್ಠಿ ಹಾಗೂ ವಿಶೇಷ್ಯೋಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲ್ಯಾಣ ಕರ್ನಾಟಕ ಹಿಂದುಳಿದ ಪ್ರದೇಶ ಹಣೆಪಟ್ಟಿ ಅಳಿಸಲು ನಾವೆಲ್ಲರೂ ಶ್ರಮ ಪಡಬೇಕು ಎಂದರು.

ಆಧುನಿಕ ಜಗತ್ತಿನ ಜ್ಞಾನ ಸಂಪಾದನೆ ಮಾಡುವುದರ ಮೂಲಕ ಹೆಚ್ಚೆಚ್ಚು ಅಧ್ಯಯನ ಮಾಡಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಉತ್ತಮ ಅಂಕಗಳು ಪಡೆದು ಉನ್ನತ ಹುದ್ದೆಗಳು ಪಡೆದು ಜನಸೇವೆ ಮಾಡುವುದರ ಮುಖಾಂತರ ತಮ್ಮ ತಮ್ಮ ಬದುಕು ಕಟ್ಟಿಕೊಳ್ಳಬಹುದೆಂದು ಅಭಿಪ್ರಾಯಪಟ್ಟರು.

ಹೈದ್ರಾಬಾದ್‌ ಕರ್ನಾಟಕ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಅನಿಲ್ ಬೆಲ್ದಾರ್‌ ವಿಶೇಷ ಉಪನ್ಯಾಸ ನೀಡಿ, ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಇನ್ನು ಕಲ್ಯಾಣವೇ ಆಗಿಲ್ಲ. ಬರೀ ಹೆಸರು ಇಟ್ಟುಕೊಂಡರೆ ಸಾಲದು. ಇಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಆರಂಭಿಸಬೇಕು ಎಂದರು.

ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಅಧ್ಯಕ್ಷರಾದ ಡಾ.ಜಗನ್ನಾಥ ಹೆಬ್ಬಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭಾರತಿ ವಸ್ತ್ರದ, ಪುಣ್ಯವತಿ ವಿಸಾಜಿ, ವಜ್ರಾ ಪಾಟೀಲ, ಪಾರ್ವತಿ ಸೋನಾರೆ, ಡಾ. ಸಾವಿತ್ರಿ ಹೆಬ್ಬಾಳೆ, ಜಯಶ್ರೀ ಸುಕಾಲೆ, ಪುಷ್ಪ ಕನಕ, ಸುನಿತಾ ದಾಡಗೆ, ಚನ್ನಮ್ಮ ವಲ್ಲೇಪೂರೆ, ಸಾರಿಕಾ ಗಂಗಾ, ಶಾಂತಮ್ಮ ಬಲ್ಲೂರ, ಎಸ್.ಬಿ. ಕುಚಬಾಳ, ದೇವೇಂದ್ರ ಬರಗಾಲೆ, ಅಮೀನ್ ನವಾಜ, ಯುಸೂಫ ರಹೀಂ, ಡಾ. ಪಾಟೀಲ್ ಶಶಿಕಾಂತ, ಡಾ. ಅರ್ಷಾ ಜಬೀನ್, ಡಾ.ಕೃಷ್ಣಾವೇಣಿ ಬಿ, ಡಾ. ಅಂಜಲಿ ಲುಲ್ಲೇ ಮುಂತಾದ ಕವಿಗಳು ಕವನ ವಾಚನ ಮಾಡಿದರು.

ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ಪರಿಷತ್ತಿನ ಕಾರ್ಯದರ್ಶಿ ಡಾ. ಸುನಿತಾ ಕೂಡ್ಲಿಕರ್ ನಿರೂಪಿಸಿದರೆ ಕರ್ನಾಟಕ ಸಾಹಿತ್ಯ ಸಂಘ ಪ್ರಧಾನ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ ವಂದಿಸಿದರು. ಸಾಹಿತ್ಯ ಸಂಘ ಟ್ರಸ್ಟ ಅಧ್ಯಕ್ಷ ಶಂಕರರಾವ ಹೊನ್ನಾ ಉಪಸ್ಥಿತರಿದ್ದರು.