ಕೋವಿಡ್ ಎದುರಿಸಲು ಸನ್ನದ್ಧರಾಗಿ

| Published : Dec 22 2023, 01:30 AM IST

ಸಾರಾಂಶ

ಹರಪನಹಳ್ಳಿ ತಾಲೂಕಿನಲ್ಲಿ ಕೋವಿಡ್ ಎದುರಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಸೂಚಿಸಿದರು. ವಿವಿಧ ಇಲಾಖೆ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ ಅವರು, ಇರುವ ಸೌಲಭ್ಯಗಳ ಮಾಹಿತಿ ಪಡೆದರು.

ಹರಪನಹಳ್ಳಿ: ತಾಲೂಕಿನಲ್ಲಿ ಕೋವಿಡ್ ಎದುರಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಸೂಚಿಸಿದರು.ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಕೋವಿಡ್ ಎದರಿಸಲು ಆಯೋಜಿಸಿದ್ದ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಗುರುವಾರ ಅವರು ಮಾತನಾಡಿದರು. ಪಟ್ಟಣಕ್ಕೆ ಪ್ರತಿನಿತ್ಯ ಗ್ರಾಮೀಣ ಭಾಗದಿಂದ ಹಾಗೂ ಇತರ ಕಡೆಯಿಂದ ಹತ್ತು ಸಾವಿರ ಜನರು ಬಂದು ಹೋಗುತ್ತಿದ್ದು, ಆರೋಗ್ಯ ಇಲಾಖೆ ತಾಪಂ ಹಾಗೂ ಪೊಲೀಸ್ ಇಲಾಖೆಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಹೇಳಿದರು.

6೦ ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು, ಗರ್ಭಿಣಿಯರು, ತಾಯಂದಿರು ಜನದಟ್ಟಣೆ ಸ್ಥಳಗಳಿಗೆ ಹೋಗಬಾರದು ಎಂದ ಅವರು, ಜನದಟ್ಟಣೆ ಸೇರುವ ಕಾರ್ಯಕ್ರಮಗಳಿಗೆ ಅನುಮತಿ ನೀಡುವಾಗ ಷರತ್ತುಗಳನ್ನು ವಿಧಿಸಬೇಕು ಎಂದು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.ಕ್ರಿಸ್‌ಮಸ್ ಹಾಗೂ ಹೊಸವರ್ಷ ಆಚರಣೆಯಲ್ಲಿ ಟ್ರಾಫಿಕ್ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ಪೊಲೀಸ್ ಇಲಾಖೆಯವರಿಗೆ ಸೂಚಿಸಿದರು.

ಕೋವಿಡ್ ನಿಯಂತ್ರಣಕ್ಕೆ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದ ಅವರು ಗ್ರಾಮೀಣ ಭಾಗದಲ್ಲಿ ಸೊಳ್ಳೆ ನಿಯಂತ್ರಣಗೊಳಿಸಲು ಫಾಗಿಂಗ್ ಮಾಡಿಸಲು ಹಾಗೂ ಚರಂಡಿಗಳನ್ನು ಸ್ವಚ್ಛತೆಗೊಳಿಸಲು ಪಿಡಿಒಗಳಿಗೆ ನಿರ್ದೇಶನ ನೀಡಲು ತಾಪಂ ಇಒಗೆ ಸೂಚಿಸಿದರು.

ಅಂಗನವಾಡಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಸಿಡಿಪಿಒ ಹರೀಶ ಅವರಿಗೆ ಸೂಚಿಸಿದ ಅವರು, ಕೋವಿಡ್ ಬರದಂತೆ ತಡೆಗಟ್ಟಲು ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆ, ತಾಪಂ ಮತ್ತು ಪುರಸಭೆಯವರು ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.

ಹಾಸ್ಟೆಲ್‌ಗಳಲ್ಲಿ ಶುಚಿತ್ವ ಹಾಗೂ ಗುಣಮಟ್ಟದ ಆಹಾರ ನೀಡಬೇಕು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಶಂಕರ್ ನಾಯ್ಕ್ ಮಾಹಿತಿ ನೀಡಿ, ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಇಲ್ಲ. 90 ಜಂಬೋ ಸಿಲಿಂಡರ್‌ಗಳಿವೆ, 10 ವೆಂಟಿಲೇಟರ್‌ಗಳಿವೆ, ಕಾನ್ಸ್ಂಟ್ರೇಟರ್‌ಗಳಿವೆ. ಎನ್-90 ಮಾಸ್ಕ್‌ಗಳಿವೆ. ಐಸಿಯು ಬೆಡ್‌ಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ಹಾಲಸ್ವಾಮಿ ಮಾತನಾಡಿ, ಕೋವಿಡ್ ಪರೀಕ್ಷೆ ಕಿಟ್‌ಗಳು ಇನ್ನು ಸರಬರಾಜು ಆಗಿಲ್ಲ. ಶೀಘ್ರದಲ್ಲೇ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.ಉಪವಿಭಾಗಾಧಿಕಾರಿ ಟಿ.ವಿ. ಪ್ರಕಾಶ, ತಹಸೀಲ್ದಾರ್ ಬಿ.ವಿ. ಗಿರೀಶಬಾಬು, ಟಿಎಚ್‌ಒ ಹಾಲಸ್ವಾಮಿ, ಡಾ. ಶಂಕರನಾಯ್ಕ್, ಪೊಲೀಸ್ ವೃತ್ತ ನಿರೀಕ್ಷಕ ನಾಗರಾಜ ಎಂ. ಕಮ್ಮಾರ್, ಪುರಸಭೆ ಮುಖ್ಯಾಧಿಕಾರಿ ಎರಗಡಿ ಶಿವಕುಮಾರ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕಿ ರೇಣುಕಾ ದೇವಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಜಯಲಕ್ಷ್ಮೀ, ತಾಪಂ ಇಒ ಕೆ.ಆರ್. ಪ್ರಕಾಶ, ಸಿಡಿಪಿಒ ಹರೀಶ, ಇಸಿಒ ಗಿರಜ್ಜಿ ಮಂಜುನಾಥ್ ಇತರರು ಇದ್ದರು.