ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಎದುರಿಸಲು ಸಜ್ಜಾಗುವಂತೆ ಪ್ರಾಕೃತಿಕ ವಿಕೋಪ ನಿರ್ವಹಣೆಯ ಜಿಲ್ಲಾ ಮೇಲುಸ್ತುವಾರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ನಿರ್ದೇಶನ ನೀಡಿದರು.
ಮಡಿಕೇರಿ: ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಎದುರಿಸಲು ಸಜ್ಜಾಗುವಂತೆ ಪ್ರಾಕೃತಿಕ ವಿಕೋಪ ನಿರ್ವಹಣೆಯ ಜಿಲ್ಲಾ ಮೇಲುಸ್ತುವಾರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ನಿರ್ದೇಶನ ನೀಡಿದರು.
ನಗರದ ಜಿ.ಪಂ. ಸಭಾಂಗಣದಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಬಂಧ ಭಾನುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮಳೆ ಪ್ರಮಾಣ ಕಡಿಮೆಯಾಗಿದೆ. ಸದ್ಯ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ವಾಡಿಕೆ ಮಳೆಯಾಗುವ ನಿರೀಕ್ಷೆ ಇದೆ. ಆದ್ದರಿಂದ ಪ್ರಾಕೃತಿಕ ವಿಕೋಪ ಎದುರಿಸಲು ಸಜ್ಜಾಗಬೇಕು. ಜೊತೆಗೆ ‘ಎಲ್ ನಿನೊ’ ಪರಿಣಾಮದಿಂದ ಕಡಿಮೆ ಮಳೆಯಾದರೆ ಅನಾವೃಷ್ಠಿಯನ್ನೂ ಸಹ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಚಿವರು ಸೂಚಿಸಿದರು.ಪ್ರಕೃತಿ ವಿಕೋಪ ಎದುರಿಸಲು ಜಿಲ್ಲಾಧಿಕಾರಿಯವರ ಪಿ.ಡಿ. ಖಾತೆಯಲ್ಲಿ 3.05 ಕೋಟಿ ರು. ಲಭ್ಯವಿದೆ. ಜೊತೆಗೆ 5 ತಾಲೂಕುಗಳ ತಹಸೀಲ್ದಾರ್‌ಗಳ ಪಿ.ಡಿ. ಖಾತೆಯಲ್ಲಿ ಒಟ್ಟು 141.39 ಲಕ್ಷ ರು. ಲಭ್ಯವಿದೆ. ಹಾಗಾಗಿ ಹಣದ ಕೊರತೆ ಇಲ್ಲ ಎಂದರು.
ಶಾಸಕ ಡಾ. ಮಂತರ್ ಗೌಡ, ಸೋಮವಾರಪೇಟೆ ತಾಲೂಕಿನ ಗ್ರಾಮದಲ್ಲಿ ಪೈಪ್‌ಲೈನ್ ಒಡೆದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಇದನ್ನು ಸರಿಪಡಿಸಬೇಕು ಎಂದು ಹೇಳಿದರು.ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯ ರಸ್ತೆಗಳ ಗುಂಡಿಗಳನ್ನು ಮುಚ್ಚಬೇಕು. ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಬೇಕು. ಸೆಸ್ಕ್ ಮತ್ತು ಕುಡಿಯುವ ನೀರು ವಿಭಾಗದ ಎಂಜಿನಿಯರ್‌ಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಚಿವರು ತಾಕೀತು ಮಾಡಿದರು. ಕುಡಿಯುವ ನೀರು ಪೂರೈಕೆ ಕಾಮಗಾರಿ ಸಂಬಂಧ ಜಿಪಂ ಸಿಇಒ ಅವರು ಗಂಭೀರವಾಗಿ ಪರಿಗಣಿಸಿ ಪ್ರಗತಿ ಪರಿಶೀಲನೆ ನಡೆಸುವಂತೆ ಸಲಹೆ ಮಾಡಿದರು. ಎಷ್ಟು ಬೋರ್‌ವೆಲ್ ಕೊರೆಯಲು ಬಾಕಿ ಇದೆ. ಎಷ್ಟು ಬೋರ್‌ವೆಲ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಾಗಿದೆ. ಮತ್ತಿತರ ಮಾಹಿತಿಯನ್ನು ಕೂಡಲೇ ಒದಗಿಸುವಂತೆ ಎಂಜಿನಿಯರ್‌ಗೆ ನಿರ್ದೇಶನ ನೀಡಿದರು. ವಿಶೇಷ ಕಾರ್ಯಪಡೆಯಲ್ಲಿ ಹಣ ನೀಡುವುದು ಏಕೆ ಎಂದು ಪ್ರಶ್ನಿಸಿದ ಸಚಿವರು, ಅಧಿಕಾರಿಗಳು ಬುದ್ಧಿವಂತಿಕೆ ಜೊತೆಗೆ ಪ್ರಜ್ಞಾವಂತಿಕೆಯಿಂದ ಸಾರ್ವಜನಿಕ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ತುರ್ತು ಸಂದರ್ಭಗಳಲ್ಲಿ ಸರ್ಕಾರೇತರ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸಲಿದ್ದು, ಮಾನವೀಯತೆಯಿಂದ ಕೆಲಸ ಮಾಡುವ ಸಂಸ್ಥೆಗಳಿಗೆ ಪ್ರಶಂಸಾ ಪತ್ರ ನೀಡಬೇಕು ಎಂದರು.
ಮುಂದಿನ ದಿನಗಳಲ್ಲಿ ವಿಭಾಗವಾರು ಪರಿಶೀಲನಾ ಸಭೆ ನಡೆಸಲಾಗುವುದು. ಪ್ರಾಕೃತಿಕ ವಿಕೋಪ ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸೆಸ್ಕ್ ಸೇರಿದಂತೆ ಸಹಾಯವಾಣಿ ಕೇಂದ್ರ ತೆರೆಯಲಾಗಿದ್ದು, ಸಾರ್ವಜನಿಕರು ಮಾಹಿತಿ ನೀಡಬಹುದು ಎಂದರು.ಜಿಲ್ಲಾಡಳಿತದ ವಾಟ್ಸ್ಯಾಪ್ ಸಂಖ್ಯೆ 8550001077, ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ 08272 221077, ಪೊಲೀಸ್ ಸಹಾಯವಾಣಿ 112, ಸೆಸ್ಕ್ 191 ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಸಚಿವರು ವಿವರಿಸಿದರು. ನಗರಸಭಾ ಅಧ್ಯಕ್ಷ ಪಿ. ಕಲಾವತಿ ಅವರು ಮಾತನಾಡಿ, ಮಡಿಕೇರಿ ನಗರದಲ್ಲಿ ಪದೇ ಪದೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಇದನ್ನು ಸರಿಪಡಿಸಬೇಕು ಎಂದು ಹೇಳಿದರು.
ಶಾಸಕ ಎ.ಎಸ್. ಪೊನ್ನಣ್ಣ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗಕ್ಕೆ ಸರಕಾರದಿಂದ ಬಿಡುಗಡೆ ಮಾಡಿರುವ ಹಣವನ್ನು ಸಮರ್ಪಕವಾಗಿ ಖರ್ಚು ಮಾಡಬೇಕು. ಜೊತೆಗೆ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು. ಮಡಿಕೇರಿ ಶಾಸಕ ಮಂತರ್ ಗೌಡ ಮಾತನಾಡಿ, ಮಡಿಕೇರಿ ನಗರದಲ್ಲಿ ಯುಜಿ ಕೇಬಲ್ ಅಳವಡಿಸಲು ಅನುಮೋದನೆ ದೊರೆತಿದೆ. ಮಳೆಗಾಲ ನಂತರ ಕಾಮಗಾರಿ ಆರಂಭವಾಗಲಿದೆ ಎಂದರು. ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಮಾತನಾಡಿ, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಪ್ರಾಕೃತಿಕ ವಿಕೋಪ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ ಎಂದು ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಮಾತನಾಡಿ, ಪ್ರಾಕೃತಿಕ ವಿಕೋಪ ಎದುರಿಸುವ ನಿಟ್ಟಿನಲ್ಲಿ 4 ತಂಡಗಳಿದ್ದು, ಜೊತೆಗೆ ಎನ್‌ಡಿಆರ್‌ಎಫ್ ನ 1 ತಂಡವಿದೆ. ಹೋಂ ಗಾರ್ಡ್ಸ್ ತಂಡವೂ ಕಾರ್ಯನಿರ್ವಹಿಸಲಿದೆ ಎಂದು ಮಾಹಿತಿ ನೀಡಿದರು.ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಮುಂಗಾರು ಸಂದರ್ಭ ಭತ್ತ ಮತ್ತು ಮುಸುಕಿನ ಜೋಳ ಬೆಳೆಯಲಾಗುತ್ತದೆ. ರಸಗೊಬ್ಬರ ದಾಸ್ತಾನು ಇದೆ ಎಂದು ಹೇಳಿದರು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ ಪೂರಕ ಮಾಹಿತಿ ನೀಡಿದರು.ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸಹನಾ ಹಾದಿಮನಿ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ವಿವಿಧ ಇಲಾಖೆ ಅಧಿಕಾರಿಗಳು, ಎಂಜಿನಿಯರ್‌ಗಳು, ತಹಸೀಲ್ದಾರ್‌ಗಳಿದ್ದರು.