ಬಿತ್ತನೆ ಬೀಜ ವಿತರಿಸಲು ಕಾರ್ಯಪ್ರವೃತ್ತರಾಗಿ

| Published : May 24 2024, 01:00 AM IST

ಸಾರಾಂಶ

ಬಿತ್ತನೆಗೆ ಭೂಮಿ ಸಿದ್ಧ ಮಾಡಿಕೊಂಡರೂ ಕೃಷಿ ಇಲಾಖೆ ಬಿತ್ತನೆ ಬೀಜ ವಿತರಿಸಿಲ್ಲ ಎಂದು ರೈತರು ಆರೋಪಿಸಿದ್ದರಿಂದ ಗುರುವಾರ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದ ತಹಸೀಲ್ದಾರ್‌.

ಅಳ್ನಾವರ:

ಬಿತ್ತನೆ ಬೀಜ ವಿತರಿಸಲು ಕೃಷಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕೆಂದು ತಹಸೀಲ್ದಾರ್‌ ಬಸವರಾಜ ಬೆಣ್ಣೆಶಿರೂರ ಸೂಚಿಸಿದರು.ತಾಲೂಕಿನಲ್ಲಿ ಕಳೆದೊಂದು ವಾರದಿಂದ ಹದಬರಿತ ಮಳೆಯಾಗಿದೆ. ಬಿತ್ತನೆಗೆ ಭೂಮಿ ಸಿದ್ಧ ಮಾಡಿಕೊಂಡರೂ ಕೃಷಿ ಇಲಾಖೆ ಬಿತ್ತನೆ ಬೀಜ ವಿತರಿಸಿಲ್ಲ ಎಂದು ರೈತರು ಆರೋಪಿಸಿದ್ದರಿಂದ ಗುರುವಾರ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಬೀಜ ದಾಸ್ತಾನು ಪರಿಶೀಲಿಸಿ, ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಪ್ರಮುಖವಾಗಿ ಬತ್ತ, ಮೆಕ್ಕೆಜೋಳದ ಬೇಡಿಕೆ ಇದ್ದು ರೈತರ ಬೇಡಿಕೆಗೆ ತಕ್ಕಷ್ಟು ಬೀಜದ ದಾಸ್ತಾನು ಇದೆ. ಆದರಿಂದ ಯಾವ ರೈತರು ಆತಂಕಪಡುವ ಅಗತ್ಯವಿಲ್ಲ ಎಂದ ಅವರುಮ ತಕ್ಷಣ ಬಿತ್ತನೆ ಬೀಜ ವಿತರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ವಿತರಿಸುವ ಅಧಿಕಾರಿಗಳು ವಿಳಂಬ ಮಾಡಿದ್ದರಿಂದ ಹೆಚ್ಚಿನ ದರಕ್ಕೆ ಹೊರಗಡೆ ತರುವಂತೆ ಆಗಿದೆ ಎಂದು ದೂರುಗಳು ಬಂದಿದ್ದವು. ಕೇಂದ್ರಕ್ಕೆ ಬಂದಿದ್ದ ತಹಸೀಲ್ದಾರ್‌ಗೆ ಬೆಣಚಿ ಗ್ರಾಮದ ಸಂದೀಪ ಪಾಟೀಲ ಸೇರಿದಂತೆ ಹಲವು ರೈತರು ತಕ್ಷಣದಿಂದಲೇ ಬೀಜ ವಿತರಣೆಗೆ ಸೂಚಿಸಬೇಕೆಂದು ಮನವಿ ಮಾಡಿದರು.

ಕೃಷಿ ಅಧಿಕಾರಿ ಗುರುಪ್ರಸಾದ ಹಿರೇಮಠ ಮಾತನಾಡಿ, 400 ಕ್ವಿಂಟಲ್‌ ಮೆಕ್ಕೆಜೋಳ ಮತ್ತು 200 ಕ್ಷಿಂಟಲ್‌ ಬತ್ತದ ಪ್ರಮಾಣಿತ ಬೀಜದ ಬೇಡಿಕೆ ಇದೆ ಎಂದು ತಿಳಿಸಿದರು.

ರೈತರಿಂದ ಯಾವುದೇ ದೂರುಗಳು ಬರದಂತೆ ವ್ಯವಸ್ಥಿತವಾಗಿ ಬಿತ್ತನೆ ಬೀಜ ವಿತರಿಸಬೇಕೆಂದು ತಾಪಂ ಇಒ ಪ್ರಶಾಂತ ತುರಕಾಣಿ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ವಶಿಂ ಜಾಗೀರದಾರ, ಅಕ್ಷತಾ ಮಿರಾಶಿ ಸೇರಿದಂತೆ ಇನ್ನಿತರರು ಇದ್ದರು.