ಸಾರಾಂಶ
ಭಟ್ಕಳ: ಪಟ್ಟಣದ ಆಸರಕೇರಿಯ ಭುವನೇಶ್ವರಿ ಕನ್ನಡ ಸಂಘದಿಂದ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.ಮುರುಡೇಶ್ವರದ ಶಿಲ್ಪಕಲಾ ಗುತ್ತಿಗೆದಾರ ಹಾಗೂ ಉದ್ಯಮಿ ಗಣೇಶ ನಾಯ್ಕ ಅವರು ಕನ್ನಡ ಧ್ವಜಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಕನ್ನಡ ಸುಂದರವಾದ ಭಾಷೆಯಾಗಿದೆ. ಭಾಷೆಯ ಬಗ್ಗೆ ಹೆಮ್ಮೆ ಪಡಬೇಕು. ಮಕ್ಕಳಿಗೆ ಚಿಕ್ಕಂದಿನಿಂದಲೇ ನಾಡು ನುಡಿಯ ಬಗ್ಗೆ ಅರಿವು ಮೂಡಿಸಬೇಕು. ಪ್ರತಿಯೊಬ್ಬರೂ ಕನ್ನಡ ಉಳಿವಿಗೆ ಕಟಿಬದ್ಧರಾಗಬೇಕೆಂದರು.ಮಂಜುನಾಥ ಮುರುಡೇಶ್ವರ ಮಾತನಾಡಿ, ನಿತ್ಯ ಬಳಸುವ ಭಾಷೆಯಲ್ಲಿ ಕನ್ನಡದೊಂದಿಗೆ ಇಂಗ್ಲಿಷ್ ಬಳಸುತ್ತೇವೆ. ಕನ್ನಡದವರಾದ ನಾವು ಸ್ವಾಭಿಮಾನವನ್ನು ಬೆಳೆಸಿಕೊಡು ಕನ್ನಡವನ್ನು ಉಳಿಸಿ ಬೆಳೆಸಬೇಕಾಗಿದೆ. ಕನ್ನಡ ಭುವನೇಶ್ವರಿ ಸಂಘದವರು ಸ್ವಂತ ಖರ್ಚು- ವೆಚ್ಚಗಳಲ್ಲಿ ಭರಿಸಿಕೊಂಡು ಸತತ ೨೭ ವರ್ಷ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಗುರುಮಠದ ಗೌರವಾಧ್ಯಕ್ಷ ಕೃಷ್ಣ ನಾಯ್ಕ, ಭಟ್ಕಳ ಅರ್ಬನ್ ಬ್ಯಾಂಕ್ ನಿರ್ದೇಶಕ ಶ್ರೀಧರ ನಾಯ್ಕ, ನಿವೃತ್ತ ಸೈನಿಕ ಶ್ರೀಕಾಂತ ನಾಯ್ಕ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕನ್ನಡ ಭುವನೇಶ್ವರಿ ಸಂಘದ ಅಧ್ಯಕ್ಷ ಅಣ್ಣಪ್ಪ ನಾಯ್ಕಮಾತನಾಡಿ, ನಮ್ಮ ಸಂಘವು ಕನ್ನಡಕ್ಕೆ ಚ್ಯುತಿ ಬಂದಾಗ ಹಲವು ಬಾರಿ ಹೋರಾಟ ಮಾಡಿದ್ದೇವೆ ಎಂದರು.ಗುರುಮಠದ ಸದಸ್ಯರಾದ ಪ್ರಕಾಶ ನಾಯ್ಕ, ಸೋನಾರಕೇರಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ ನಾಯ್ಕ, ಪತ್ರಕರ್ತ ಮನಮೋಹನ ನಾಯ್ಕ, ರಮೇಶ ನಾಯ್ಕ, ರಾಜೇಶ ಮಹಾಲೆ, ಗುರು ಶೇಟ್, ವಸಂತ ನಾಯ್ಕ ಮುಂತಾದವರಿದ್ದರು. ಪಾಂಡುರಂಗ ನಾಯ್ಕ ನಿರ್ವಹಿಸಿದರು. ರಾಘವೇಂದ್ರ ನಾಯ್ಕ ವಂದಿಸಿದರು.ಜಾಲಿ ಪಪಂ ಅಧ್ಯಕ್ಷೆ ರಾಜೀನಾಮೆಗೆ ಆಗ್ರಹ
ಭಟ್ಕಳ: ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ನ. 1ರಂದು ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಾಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಅಪ್ಸಾ ಖಾಜೀಯಾ ಹುಜೈಫಾ ಅವರು ಭುವನೇಶ್ವರಿ ದೇವಿಗೆ ಪುಷ್ಪನಮನ ಸಲ್ಲಿಸಲು ನಿರಾಕರಿಸಿರುವುದನ್ನು ಆಸರಕೇರಿಯ ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ಅಣ್ಣಪ್ಪ ನಾಯ್ಕ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕನ್ನಡಾಂಬೆಗೆ ಪುಷ್ಪನಮನ ಸಲ್ಲಿಸದೇ ಇರುವುದು ಇದು ಭುವನೇಶ್ವರಿ ದೇವಿಗೆ ಹಾಗೂ ೬.೫ ಕೋಟಿ ಕನ್ನಡಿಗರಿಗೆ ಮಾಡಿದ ಅಪಮಾನವಾಗಿದೆ.ಕೇವಲ ತಮ್ಮ ಧರ್ಮವನ್ನು ಪ್ರೀತಿಸುವವರು ಯಾಕೆ ಜನಪ್ರತಿನಿಧಿಯಾಗಬೇಕು ಎಂದು ಪ್ರಶ್ನಿಸಿರುವ ಅವರು, ಅಷ್ಟೊಂದು ಧರ್ಮಾಭಿಮಾನ ಇದ್ದವರು ಮನೆಯಲ್ಲೇ ಕುಳಿತುಕೊಳ್ಳುವುದು ಒಳ್ಳೆಯದು. ಕನ್ನಡಾಂಬೆಗೆ ಅಪಮಾನ ಮಾಡಿದ ಜಾಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರು ತಮ್ಮ ಅಧ್ಯಕ್ಷ ಪದವಿಗೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.