ಅಪ್ರಾಪ್ತರ ಬಗ್ಗೆ ಸೂಕ್ಷ್ಮತೆಯಿರಲಿ: ನ್ಯಾ.ಯಾದವ್‌

| Published : Mar 11 2025, 02:03 AM IST

ಸಾರಾಂಶ

ಕಾನೂನು ಸಂಘರ್ಷಕ್ಕೆ ಒಳಗಾಗುವ ಅಪ್ರಾಪ್ತರ ಹಕ್ಕುಗಳ ರಕ್ಷಣೆ ವಿಚಾರದಲ್ಲಿ ಪೊಲೀಸ್‌, ರಕ್ಷಣಾ ಅಧಿಕಾರಿಗಳು ಸೂಕ್ಷ್ಮವಾಗಿ ಸ್ಪಂದಿಸಬೇಕು ಎಂದು ಹೈಕೋರ್ಟ್‌ ನ್ಯಾಯಾಧೀಶ, ಬಾಲ ನ್ಯಾಯ ಸಮಿತಿಯ ಅಧ್ಯಕ್ಷ ಎಸ್. ಸುನೀಲ್ ದತ್ತ ಯಾದವ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಾನೂನು ಸಂಘರ್ಷಕ್ಕೆ ಒಳಗಾಗುವ ಅಪ್ರಾಪ್ತರ ಹಕ್ಕುಗಳ ರಕ್ಷಣೆ ವಿಚಾರದಲ್ಲಿ ಪೊಲೀಸ್‌, ರಕ್ಷಣಾ ಅಧಿಕಾರಿಗಳು ಸೂಕ್ಷ್ಮವಾಗಿ ಸ್ಪಂದಿಸಬೇಕು ಎಂದು ಹೈಕೋರ್ಟ್‌ ನ್ಯಾಯಾಧೀಶ, ಬಾಲ ನ್ಯಾಯ ಸಮಿತಿಯ ಅಧ್ಯಕ್ಷ ಎಸ್. ಸುನೀಲ್ ದತ್ತ ಯಾದವ್ ಹೇಳಿದರು.

ಅವರು ಇಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಮಕ್ಕಳ ರಕ್ಷಣಾ ನಿರ್ದೇಶನಾಲಯ ರಾಜ್ಯ ನೌಕಕರ ಭವನದಲ್ಲಿ ಅಯೋಜಿಸಿದ್ದ ‘ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ, ಬಾಲ ನ್ಯಾಯ ಮಂಡಳಿ ಹಾಗೂ ಮಕ್ಕಳ ವಿಶೇಷ ಪೊಲೀಸ್ ಘಟಕದ ಅಧಿಕಾರಿಗಳ ಪಾತ್ರ ಕುರಿತು ಅರಿವು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದುರ್ಬಲ ಮಕ್ಕಳಿಗೆ ವಿಶೇಷ ಕಾಳಜಿ ಮತ್ತು ರಕ್ಷಣೆಯ ಅಗತ್ಯವಿದ್ದು, ಅವರಿಗೆ ಸುರಕ್ಷಿತ ವಾತಾವರಣ ಮತ್ತು ಸರಿಯಾದ ಬೆಂಬಲ ಒದಗಿಸಬೇಕು. ಕಾನೂನು ಸಂಘರ್ಷಕೊಳಗಾದ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಬಾಲ ನ್ಯಾಯ ಕಾಯ್ದೆ ಜಾರಿಗೊಳಿಸಲಾಗಿದ್ದು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಸನ್ನಿವೇಶವನ್ನು ಸೂಕ್ಷ್ಮವಾಗಿ ನಿಭಾಯಿಸಬೇಕು ಎಂದರು.

ಬೆಂಗಳೂರು ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕಿ ಆರ್‌.ಲತಾ ಮಾತನಾಡಿ, ಅಧಿಕಾರಿಗಳು ರಕ್ಷಣೆಯಲ್ಲಿರುವ ಮಕ್ಕಳ ಮನಸ್ಸುಗಳನ್ನು ಅರ್ಥಮಾಡಿಕೊಂಡು ಮುಖ್ಯ ವಾಹಿನಿಗೆ ತರುವ ಜವಾಬ್ದಾರಿ ನಿಭಾಯಿಸಬೇಕು. ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆಯಲ್ಲಿರುವ ಪ್ರತಿಯೊಂದು ಮಾಹಿತಿಯನ್ನು ಅಧಿಕಾರಿಗಳು ತಿಳಿದುಕೊಂಡಿರಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಕೆ.ನಾಗಣ್ಣ, ಚಂಡೀಗಡ್, ಗುಜರಾತ್, ತ್ರಿಪುರಾ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು, ಪೊಲೀಸ್‌ ಸಿಬ್ಬಂದಿ ಇದ್ದರು.