ಕಾಡುಗೊಲ್ಲರ ಆಚರಣೆಯ ನೆಲೆಗಳು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ.ಎಸ್. ನಟರಾಜ ಬೂದಾಳು
ಕನ್ನಡಪ್ರಭ ವಾರ್ತೆ ತುಮಕೂರುನಮ್ಮ ಓದಿನ ಮತ್ತು ಅಧ್ಯಯನದ ಆಯ್ಕೆಗಳ ಅರಿವು ನಮಗೆ ಅತ್ಯಗತ್ಯವಾಗಿದೆ. ಕೇವಲ ರಾಮಾಯಣ, ಮಹಾಭಾರತದಂತಹ ಕೆಲವು ಗ್ರಂಥಗಳು ಮಾತ್ರ ನಮ್ಮನ್ನು ಆಳುತ್ತಿದ್ದು, ಅದರಿಂದಾಚೆಗಿನ ನಮ್ಮದೇ ಆದ ವಿಶಿಷ್ಟ ಸಾಂಸ್ಕೃತಿಕ ಪುಸ್ತಕಗಳನ್ನು ನಾವು ಅಧ್ಯಯನ ಮಾಡಬೇಕಿದೆ ಎಂದು ಚಿಂತಕ ಪ್ರೊ.ಎಸ್. ನಟರಾಜ ಬೂದಾಳು ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯದ ಶ್ರೀ ಜುಂಜಪ್ಪ ಅಧ್ಯಯನ ಪೀಠ, ಕನ್ನಡ ವಿಭಾಗ ಹಾಗೂ ವಿಶ್ವವಿದ್ಯಾನಿಲಯ ಕಲಾ ಕಾಲೇಜು ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕರಿಮಲೆಯಿಂದ ಕೊಂಕಿ ಜರಮಲೆಯವರೆಗೆ ಕೃತಿ ಆಧಾರಿತ ಕಾಡುಗೊಲ್ಲರ ಆಚರಣೆಯ ನೆಲೆಗಳು ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅಪರಿಚಿತ ಲೋಕದ ನಿಸರ್ಗದಲ್ಲಿನ ಬದುಕನ್ನು ದಾಖಲಿಸುವ ಕೆಲಸ ಅತ್ಯಂತ ಕಠಿಣವಾದುದು. ಅನ್ನ, ನೀರು, ಗಾಳಿ, ಬೆಳಕು ಮತ್ತು ಭೂಮಿಯ ಮೇಲೆ ಯಾರದೇ ಏಕಸ್ವಾಮ್ಯ ಇರಬಾರದು. ಸೆಮಿಟಿಕ್ ಹಾಗೂ ಹಿಂದೂ ಧರ್ಮಗಳ ಆವರಣಗಳ ಬಗ್ಗೆ ನಮಗೆ ಸ್ಪಷ್ಟ ಅರಿವಿರಬೇಕು ಎಂದು ತಿಳಿಸಿದರು.ಸಣ್ಣ ಸಣ್ಣ ಸಮುದಾಯಗಳ ಆಚರಣೆಗಳಿಗೆ ನಗರೀಕರಿಂದ ಎದುರಾಗುತ್ತಿರುವ ಅಡ್ಡಿ ಹಾಗೂ ದರ್ಪಗಳು ನಿಲ್ಲಬೇಕು. ಕಾಡುಗೊಲ್ಲರು ಶೈವರೂ ಅಲ್ಲ, ವೈಷ್ಣವರೂ ಅಲ್ಲ, ಅವರು ಕೇವಲ ಕಾಡುಗೊಲ್ಲರಷ್ಟೇ. ನಮ್ಮ ಆಚರಣೆಗಳು ನಮಗೆ ಶ್ರೇಷ್ಠವಾಗಿದ್ದು, ನಮ್ಮ ಸ್ವಾಯತ್ತ ಆಚರಣೆಗಳನ್ನು ನಾವೇ ಗೌರವಿಸಿ ಪಾಲಿಸಬೇಕು ಹಾಗೂ ನಮ್ಮ ಸಂಸ್ಕೃತಿಯನ್ನು ದಿಕ್ಕು ತಪ್ಪಿಸುವವರ ಬಗ್ಗೆ ಎಚ್ಚರದಿಂದ ಇರಬೇಕು ಎಂದರು. ಲೇಖಕ ಡಾ.ಜಿ.ವಿ. ಆನಂದ ಮೂರ್ತಿ ಮಾತನಾಡಿ, ಇಂದು ನಾವು ನಮ್ಮ ಮೂಲ ಸಂಸ್ಕೃತಿಗಳನ್ನು ಮರೆಯುತ್ತಿರುವುದು ಮತ್ತು ಸಂಶೋಧನೆಗಳು ಕಡೆಗಣಿಸಲ್ಪಡುತ್ತಿರುವುದು ಶೋಚನೀಯ ಸಂಗತಿ. ತಳ ಸಮುದಾಯದ ಕೃತಿಗಳನ್ನು ಉಪ ಸಂಸ್ಕೃತಿ ಎಂದು ಕರೆಯುವುದು ಸರಿಯಲ್ಲ. ಮೇಲ್ವರ್ಗದ ಸಂಸ್ಕೃತಿ ದರ್ಪ ಮತ್ತು ಕೀಳರಿಮೆಯನ್ನು ಬಿಂಬಿಸುತ್ತದೆ. ಮೇಲ್ವರ್ಗದವರು ತಮ್ಮ ಸಂಸ್ಕೃತಿಯನ್ನು ಭಾಷೆಯ ಮೂಲಕ ದಾಖಲಿಸಿದರೆ, ತಳ ಸಮುದಾಯಗಳು ಅದನ್ನು ತಮ್ಮ ಆಚರಣೆಗಳ ಮೂಲಕ ಜೀವಂತವಾಗಿ ಇಡುತ್ತವೆ. ಯಾವುದೇ ಸಮುದಾಯ ತನ್ನ ಅಸ್ಮಿತೆಯನ್ನು ಕಳೆದುಕೊಂಡಾಗ ಅದು ಅಳಿವು ಎದುರಿಸುತ್ತದೆ. ಸರ್ಕಾರಗಳು ತಕ್ಷಣವೇ ಗೊಲ್ಲರ ಹಟ್ಟಿಗಳಿಗೆ ಶಿಕ್ಷಣ, ಮೂಲಸೌಕರ್ಯ ಒದಗಿಸುವುದರೊಂದಿಗೆ ಹೆಣ್ಣುಮಕ್ಕಳಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ವಿವಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ದಾಕ್ಷಾಯಣಿ ವಹಿಸಿದ್ದರು. ಶ್ರೀ ಜುಂಜಪ್ಪ ಅಧ್ಯಯನ ಪೀಠದ ಸಂಯೋಜಕರಾದ ಡಾ. ಎಸ್. ಶಿವಣ್ಣ ಬೆಳವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಚ್. ಆರ್. ರೇಣುಕ ವಂದಿಸಿದರು. ಚಳ್ಳಕೆರೆಯ ಛಾಯಾಗ್ರಾಹಕರಾದ ನಿಸರ್ಗ ಗೋವಿಂದರಾಜು ಹಾಗೂ ಸಹ ಪ್ರಾಧ್ಯಾಪಕ ಪ್ರೊ. ಬಿ. ಕರಿಯಣ್ಣ ಉಪಸ್ಥಿತರಿದ್ದರು.