ಸಾರಾಂಶ
ಮಲ್ಪೆ ಬೀಚಿನಲ್ಲಿ ಜಿಲ್ಲಾಡಳಿತ ವತಿಯಿಂದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಪ್ರವಾಸೋದ್ಯಮ ಹಾಗೂ ಸುಸ್ಥಿರ ಪರಿವರ್ತನೆ ಸಂದೇಶದೊಂದಿಗೆ ಬೀಚ್ ಕ್ರೀಡಾಕೂಟ ಆಯೋಜಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ದೇಗುಲಗಳ ನಗರಿ ಎಂದೇ ಪ್ರಸಿದ್ಧವಾಗಿರುವ ಉಡುಪಿ ಜಿಲ್ಲೆಯು ದೇಗುಲ ಪ್ರವಾಸೋದ್ಯಮದಲ್ಲಿ ಅದಾಗಲೇ ಮುಂಚೂಣಿಯಲ್ಲಿದೆ. ಇಲ್ಲಿನ ದೇವಸ್ಥಾನಗಳಲ್ಲಿ ಜರುಗುವ ಹಬ್ಬ ಹರಿದಿನಗಳು ರಾಜ್ಯದಲ್ಲೇ ಹೆಸರುವಾಸಿಯಾಗಿದ್ದು, ಲಕ್ಷಾಂತರ ಭಕ್ತರನ್ನು ತನ್ನತ್ತ ಆಕರ್ಷಿಸುತ್ತಿದೆ. ಇದರ ಜೊತೆಗೆ ಜಿಲ್ಲೆಗೆ ದೈವದತ್ತವಾಗಿ ದೊರೆತಿರುವ ಬೀಚುಗಳನ್ನು ವಿಶ್ವ ಮಟ್ಟದಲ್ಲಿ ಪ್ರದರ್ಶಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.ಅವರು ಶನಿವಾರ ಮಲ್ಪೆ ಬೀಚಿನಲ್ಲಿ ಜಿಲ್ಲಾಡಳಿತ ವತಿಯಿಂದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಪ್ರವಾಸೋದ್ಯಮ ಹಾಗೂ ಸುಸ್ಥಿರ ಪರಿವರ್ತನೆ ಸಂದೇಶದೊಂದಿಗೆ ಹಮ್ಮಿಕೊಳ್ಳಲಾದ ಬೀಚ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.ಉಡುಪಿ ಜಿಲ್ಲೆಯು ದೇವದತ್ತವಾದ ಬೀಚುಗಳಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದೆ. ಈ ನಿಟ್ಟಿನಲ್ಲಿ ಬೀಚ್ ಕ್ರೀಡಾಕೂಟಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಿಆರ್‌ಝೆಡ್ ವ್ಯಾಪ್ತಿಯಲ್ಲಿದ್ದರೂ ಬೀಚುಗಳಲ್ಲಿ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳುವ ಅವಕಾಶವಿದೆ. ಮುಂದಿನ ದಿನಗಳಲ್ಲಿ ಜಲಕ್ರೀಡೆ ಮತ್ತು ವಾಯು ಕ್ರೀಡೆಗಳನ್ನು ಹಮ್ಮಿಕೊಳ್ಳುವ ಉದ್ದೇಶವಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬೀಚ್ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಚಾರ ದೊರಕಿಸುವಲ್ಲಿ ಸಹಕರಿಸಬೇಕು. ಸ್ವಚ್ಛತಾ ಸಪ್ತಾಹದ ಅಂಗವಾಗಿ ಈಗಾಗಲೇ ಎಂಟು ಬೀಚುಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗಿದೆ ಎಂದರು.ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಮಾತನಾಡಿ, ಬೀಚುಗಳ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಆದ್ಯತೆ, ಬೀಚ್ ಪ್ರವಾಸೋದ್ಯಮಕ್ಕೆ ಪ್ರಚಾರಕ್ಕೆ ನಗರಸಭೆಯಿಂದ ಬೆಂಬಲ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬೀಚುಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಜನರು ಆಸಕ್ತಿಯಿಂದ ಭಾಗವಹಿಸಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಯಾದವ್, ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಹರಿಪ್ರಸಾದ್ ರೈ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕೊಡವೂರು, ಉದ್ಯಮಿ ಪ್ರತಿಭಾ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು.