ಸಾರಾಂಶ
ಕುಷ್ಟಗಿ: ನಮ್ಮ ಬದುಕಿಗೆ ಮಾರ್ಗದರ್ಶಕರಾಗಿರುವ ಹಿರಿಯರ ಬದುಕು ಸುಂದರಗೊಳಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌವಲಗಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಕುಷ್ಟಗಿ ಪೊಲೀಸ್ ಠಾಣೆಯ ಸಹಯೋಗದಲ್ಲಿ ನಡೆದ ಹಿರಿಯ ನಾಗರಿಕರ ದಿನಾಚರಣೆಯ ಕಾರ್ಯಕ್ರಮ ಹಾಗೂ ಕಾನೂನು ಅರಿವು ನೆರವು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ನಾವು ವಿದೇಶಿ ಸಂಸ್ಕೃತಿಗೆ ಮಾರು ಹೋಗುತ್ತಿದ್ದು, ನಮ್ಮ ಮನೆಯಲ್ಲಿನ ಹಿರಿಯರಿಗೆ ಗೌರವ ಕೊಡುವ ಸಂಸ್ಕೃತಿ ಕಡಿಮೆಯಾಗುತ್ತಿದ್ದು ವಿಪರ್ಯಾಸದ ಸಂಗತಿ ಎಂದರು.
ಇಂದಿನ ಆಧುನಿಕ ದಿನಗಳಲ್ಲಿ ಜಂಟಿ ಕುಟುಂಬಗಳು ಕಣ್ಮರೆಯಾಗುತ್ತಿದ್ದು, ಕುಟುಂಬದಲ್ಲಿನ ಹಿರಿಯರಿಗೆ ಸರಿಯಾದ ಆರೈಕೆ ಸಿಗುತ್ತಿಲ್ಲ ಅವರ ರಕ್ಷಣೆ ಮಾಡುವ ಕೆಲಸಗಳು ನಡೆಯುತ್ತಿಲ್ಲ ಈ ಎಲ್ಲ ಮನಗಂಡ ಸರ್ಕಾರ ಹಿರಿಯ ನಾಗರಿಕರ ಹಿತರಕ್ಷಣೆ ಕಾಯಿದೆ ಜಾರಿಗೆ ತಂದಿದ್ದು ನೊಂದ ಹಿರಿಯ ನಾಗರಿಕರು ಸೌಲಭ್ಯ ಪಡೆದುಕೊಂಡು ಉತ್ತಮ ಜೀವನ ನಡೆಸಬೇಕು ಎಂದರು.ಪ್ಯಾನಲ್ ವಕೀಲ ಪಿ.ಆರ್. ಹುನಗುಂದ ಹಿರಿಯ ನಾಗರಿಕರ ರಕ್ಷಣಾ ಕಾಯಿದೆಯ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಅವರು, ಹಿರಿಯ ನಾಗರಿಕರ ಸಂರಕ್ಷಣೆ ಮಾಡುವ ಸಲುವಾಗಿ 2008 ರಲ್ಲಿ ಹಿರಿಯ ನಾಗರಿಕರ ರಕ್ಷಣಾ ಕಾಯಿದೆ ಜಾರಿಗೆ ಬಂದಿದ್ದು ಇದರಲ್ಲಿ ಒಟ್ಟು 32 ಕಲಂ ಇದ್ದು 60ಕ್ಕಿಂತ ಹೆಚ್ಚು ವಯಸ್ಸು ಇದ್ದವರು ಹಿರಿಯ ನಾಗರಿಕ ಸಂರಕ್ಷಣೆ ಕಾಯಿದೆಯಡಿಯಲ್ಲಿ ಬರುತ್ತಾರೆ ಇದರ ಮುಖ್ಯ ಉದ್ದೇಶ ಹಿರಿಯರ ಆಸ್ತಿ ಅನುಭವಿಸುವವರು ಹಿರಿಯ ನಾಗರಿಕರನ್ನು ರಕ್ಷಣೆ ಮಾಡಲು ಮುಂದಾಗಬೇಕು ಹಾಗೂ ರಕ್ಷಣೆ ಮಾಡದಿದ್ದಲ್ಲಿ ಜಿಲ್ಲಾ ಕೇಂದ್ರದಲ್ಲಿ ಇರುವ ಹಿರಿಯ ನಾಗರಿಕರ ವೇದಿಕೆಯಲ್ಲಿ ಕಲಂ 5 ಅಡಿಯಲ್ಲಿ ಅರ್ಜಿ ಸಲ್ಲಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದ ಹಿರಿಯ ನಾಗರಿಕ ಸಂರಕ್ಷಣೆ ಕಾಯಿದೆ ಕುರಿತು ಸಮಗ್ರ ಮಾಹಿತಿ ನೀಡಿದರು.
ಸಿಪಿಐ ಯಶವಂತ ಬಿಸನಳ್ಳಿ ಮಾತನಾಡಿ, ಇಂದಿನ ಸಮಾಜದಲ್ಲಿ ಹಿರಿಯ ನಾಗರಿಕರನ್ನು ಕೀಳಾಗಿ ಕಾಣುತ್ತಿದ್ದು, ಗೌರವ ಕೊಡದಂತಹ ಸಂಗತಿ ಕಾಣುತ್ತಿದ್ದು ಇಂತಹ ಘಟನೆ ಖಂಡಿಸುವ ಕೆಲಸ ಮಾಡಬೇಕು ಎಂದರು.ಮಂಜೂರಾತಿ ಪತ್ರ ವಿತರಣೆ: ಕಂದಾಯ ಇಲಾಖೆಯಿಂದ ಹಿರಿಯ ನಾಗರಿಕರಿಗೆ ಸಂದ್ಯಾ ಸುರಕ್ಷಾ ಯೋಜನೆ ಹಾಗೂ ವೃದ್ದಾಪ್ಯ ವೇತನದ ಪ್ರಮಾಣ ಪತ್ರಗಳನ್ನು ಫಲಾನುಭವಿಗಳಾದ ರತ್ನಮ್ಮ, ಹನುಮಮ್ಮ, ಚನ್ನಮ್ಮ ಅವರಿಗೆ ಮಂಜೂರಾತಿಯ ಪ್ರಮಾಣ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ದೊಡ್ಡನಗೌಡ ಎಸ್.ಪಾಟೀಲ, ಗ್ರೇಡ್ 2 ತಹಸೀಲ್ದಾರ ರಜನಿಕಾಂತ, ಕಂದಾಯ ನಿರೀಕ್ಷಕ ಅಬ್ದುಲ್ ರಜಾಕ ಮದಲಗಟ್ಟಿ, ಸಂಗನಗೌಡ ಪಾಟೀಲ, ಪರಸಪ್ಪ ಗುಜಮಾಗಡಿ ಸೇರಿದಂತೆ ಅನೇಕರು ಇದ್ದರು.