ನಿರಂತರ ಪ್ರಯತ್ನದಿಂದ ಸರ್ವಶ್ರೇಷ್ಠ ನೃತ್ಯಗಾರರಾಗಿ: ಅಂಶುಮಂತ್

| Published : Jan 29 2024, 01:33 AM IST

ಸಾರಾಂಶ

ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ನಡೆದ ಲೆಟ್ಸ್ ಡ್ಯಾನ್ಸ್ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯನ್ನು ಡಾ.ಅಂಶುಮಂತ್‌ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ನೃತ್ಯ ಕಲೆಯು ಇಂದಿನ ಯುವಪೀಳಿಗೆಗೆ ಅತ್ಯಂತ ಆಸಕ್ತಿದಾಯಕವಾಗಿದೆ. ನಿರಂತರ ಪ್ರಯತ್ನದಿಂದ ಹುದುಗಿರುವ ಪ್ರತಿಭೆಯನ್ನು ವೇದಿಕೆಗಳಲ್ಲಿ ಅನಾವರಣಗೊಳಿಸಿ ಸರ್ವಶ್ರೇಷ್ಠ ನೃತ್ಯಗಾರರಾಗಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಅಂಶುಮಂತ್ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ದಿ ಸ್ಟ್ರೇಂಜರ್ಸ್‌ ಡ್ಯಾನ್ಸ್ ಎಂಟರ್‌ ಟ್ರೈನರ್ಸ್‌ನಿಂದ ಏರ್ಪಡಿಸಿದ್ದ ಲೆಟ್ಸ್ ಡ್ಯಾನ್ಸ್ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಅಪ್ರತಿಮ ನೃತ್ಯಗಾರರಾದ ಮೈಕಲ್ ಜಾಕ್ಸನ್ ಮತ್ತು ಪ್ರಭುದೇವರಂತಹ ಅನೇಕ ಜನರ ಸತತ ಪ್ರಯತ್ನದಿಂದ ಇಡೀ ವಿಶ್ವವೇ ಅವರತ್ತ ತಿರುಗುವಂತೆ ಮಾಡಿದ್ದಾರೆ. ವಿವಿಧ ಶೈಲಿಯಲ್ಲಿ ನೃತ್ಯವೆಸಗುವ ಮಹಾನ್ ಕಲಾವಿದರಿಗೆ ಅತ್ಯಧಿಕ ಅಭಿಮಾನಿಗಳ ಬಳಗವಿದ್ದು ಮೈನವೀರೇಳಿಸುವಂತಹ ನೃತ್ಯದ ಕಲೆ ಅವರಲ್ಲಿ ಅಡಗಿದೆ ಎಂದು ತಿಳಿಸಿದರು.

ಆ ನಿಟ್ಟಿನಲ್ಲಿ ಪಾಲಕರು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚು ಉತ್ತೇಜನ ನೀಡಿದರೆ ಮಕ್ಕಳು ಇನ್ನಷ್ಟು ಸಾಧನೆ ಮಾಡಲು ಸಹಕಾರಿಯಾಗಲಿದೆ ಎಂದ ಅವರು, ಹಿಂದಿನ ಕಾಲಘಟ್ಟದಿಂದಲೂ ನೃತ್ಯ ಪರಂಪರೆ ಆಚರಿಸಲಾಗುತ್ತಿದ್ದು ಇಂದಿನ ಯುವಪೀಳಿಗೆಗೆ ವಿಭಿನ್ನ ಶೈಲಿಯಲ್ಲಿ ನೃತ್ಯವೆಸಗಿ ಸಭಿಕರನ್ನು ರಂಜಿಸುತ್ತಿರುವುದು ಖುಷಿಯ ಸಂಗತಿ ಎಂದರು.

ದಿ ಸ್ಟ್ರೇಂಜರ್ ತಂಡವು ಜಿಲ್ಲೆಯಲ್ಲಿ ಸಂಸ್ಥೆಯನ್ನು ಪ್ರಾರಂಭಿಸಿ ಹಲವಾರು ಬಡ ಮಕ್ಕಳಿಗೆ ತರಬೇತಿ ನೀಡಿ ಜೀವನಕ್ಕೆ ದಾರಿಮಾಡಿ ಕೊಟ್ಟಿರುವುದು ಒಳ್ಳೆಯ ವಿಷಯ. ಮುಂಬರುವ ದಿನಗಳಲ್ಲಿ ಇನ್ನಷ್ಟು ಮಕ್ಕಳಿಗೆ ಗುಣಮಟ್ಟದ ತರಬೇತಿ ನೀಡಿ ಮುನ್ನೆಡೆಯಬೇಕು. ಜೊತೆಗೆ ಸ್ಪರ್ಧೆಯಲ್ಲಿ ಸೋಲುಂಡವರು ಧೃತಿಗೆಡದೇ ನಿರಂತರ ಪ್ರಯತ್ನದಲ್ಲಿ ತೊಡಗಬೇಕು ಎಂದರು.

ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಮಾತನಾಡಿ, ಮಧ್ಯಮ ಹಾಗೂ ಬಡ ಮಕ್ಕಳಿಗೆ ಪ್ರತಿಭೆಯನ್ನು ಅನಾವರಣಗೊಳಿಸಲು ಸಾಧ್ಯವಾಗದಿದ್ದ ಸಮಯದಲ್ಲಿ ದಿ ಸ್ಟ್ರೇಂಜರ್‌ ತಂಡವು ಬೆನ್ನುಲುಬಾಗಿ ನಿಂತು ನೃತ್ಯ ಕಲೆಯನ್ನು ಧಾರೆ ಎರೆಯುವ ಮೂಲಕ ಮಕ್ಕಳನ್ನು ಸಮಾಜದ ಮುಂಚೂಣಿಗೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅದರದೇಯಾದ ನೃತ್ಯ ಶೈಲಿಗಳಿವೆ. ಕರಾವಳಿ ಭಾಗದಲ್ಲಿ ಯಕ್ಷಗಾನ, ಬಯಲು ಸೀಮೆಯಲ್ಲಿ ವೀರಗಾಸೆ ಸೇರಿ ಆಯಾವಾರು ವಿಭಿನ್ನ ನೃತ್ಯ ಬಂಗಿಗಳಿವೆ. ಇವುಗಳನ್ನು ವೀಕ್ಷಿಸುವ ಪ್ರೇಕ್ಷಕರು ಹಾಗೂ ನೃತ್ಯದಲ್ಲಿ ತೊಡಗುವವರಿಗೆ ಹೊಸಚೈತನ್ಯ ಮೂಡಲಿದೆ ಎಂದು ಹೇಳಿದರು.

ದಿ ಸ್ಟ್ರೇಂಜಸ್ಸ್‌ ಡ್ಯಾನ್ಸ್ ಎಂಟರ್‌ ಟ್ರೈನರ್ಸ್ ಸಂಸ್ಥೆ ಮುಖ್ಯಸ್ಥ ಪ್ರಸಾದ್ ಅಮೀನ್ ಮಾತನಾಡಿ, ಇಲ್ಲಿನ ಡ್ಯಾನ್ಸ್ ಸಂಸ್ಥೆಯಲ್ಲಿ ತರಬೇತಿ ಪಡೆದುಕೊಂಡಂತಹ ಹಲವಾರು ಮಂದಿ ಸಿನಿಮಾ, ಧಾರವಾಹಿ ಹಾಗೂ ಕ್ಯಾಮರಾಗಳಾಗಿ ಕೆಲಸ ನಿರ್ವಹಿಸುತ್ತಿದ್ದು ಬಹುತೇಕ ಚಲನಚಿತ್ರ ರಂಗದಲ್ಲೇ ಹೆಚ್ಚು ಸಾಧನೆ ಮಾಡಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದರು.

ಪ್ರಸ್ತುತ ನೃತ್ಯ ಸ್ಪರ್ಧೆಯಲ್ಲಿ ಸುಮಾರು 60ಕ್ಕೂ ಅಧಿಕ ತಂಡಗಳು ಪಾಲ್ಗೊಂಡಿದ್ದು ತುಮಕೂರು, ರಾಮನಗರ, ಬೆಂಗಳೂರು, ಶಿವಮೊಗ್ಗ, ಹಾಸನ, ಮಂಡ್ಯ, ಮಂಗಳೂರು ಸೇರಿ ವಿವಿಧ ಜಿಲ್ಲೆಗಳಿಂದ ಕಲಾಸಕ್ತರು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರತಿಭೆ ಅನಾವರಣಗೊಳಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಜಿಪಂ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್, ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ಡಿ.ಎಲ್.ವಿಜಯ್‌ಕುಮಾರ್, ನಗರಾಧ್ಯಕ್ಷ ತನೋಜ್‌ ನಾಯ್ಡು, ಮುಖಂಡ ವೆಂಕಟೇಶ್ ನಾಯ್ಡು, ಕಾಂಗ್ರೆಸ್ ಪದವೀಧರ ಘಟಕದ ಅಧ್ಯಕ್ಷ ಜಿ.ಬಿ.ಪವನ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ಉದ್ಯಮಿ ಸುರೇಂದ್ರಶೆಟ್ಟಿ, ನಂಜೇಶ್ ಬೆಣ್ಣೂರು ಹಾಜರಿದ್ದರು.