ಸಾರಾಂಶ
ಜನ್ಮ ದಿನಾಚರಣೆ ನಿಮಿತ್ತ ಪೌರಕಾರ್ಮಿಕರಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ ಹಾವೇರಿನಾನು ಅಧಿಕಾರದಲ್ಲಿದ್ದಾಗ ರಾಜ್ಯದ ೪೪ ಸಾವಿರ ಪೌರಕಾರ್ಮಿಕರನ್ನು ಕಾಯಂಗೊಳಿಸುವ ಆದೇಶ ಮಾಡಿ ಮೊದಲ ಹಂತದಲ್ಲಿ ೧೧,೩೦೦ ಜನರಿಗೆ ಆದೇಶ ನೀಡಿದ್ದೆ. ನಾವು ಮಾಡಿದ್ದ ಆದೇಶ ಪೂರ್ಣಪ್ರಮಾಣದಲ್ಲಿ ಜಾರಿ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.
ಇಲ್ಲಿನ ಗಾಂಧಿ ವೃತ್ತದಲ್ಲಿ ಬಸವರಾಜ ಬೊಮ್ಮಾಯಿ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ೬೪ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ನಿಮಿತ್ತ ೬೪ ಪೌರಕಾರ್ಮಿಕರನ್ನು ಸನ್ಮಾನಿಸಿ ಅವರು ಮಾತನಾಡಿದರು.ರಾಜ್ಯದ ಎಲ್ಲ ಪೌರಕಾರ್ಮಿಕರ ನೇಮಕಾತಿಯ ಮುಂದಿನ ಪ್ರಕ್ರಿಯೆ ನಡೆಯುತ್ತಿತ್ತು. ಅಷ್ಟರೊಳಗೆ ಚುನಾವಣೆ ಬಂತು. ಆ ಪ್ರಕ್ರಿಯೆ ಎಲ್ಲಿಗೆ ಬಂದಿದೆ ಎಂಬ ಮಾಹಿತಿ ಇಲ್ಲ, ಆದರೆ, ನಾವು ಜಾರಿಗೊಳಿಸಿದ್ದ ಆದೇಶ ಅನುಷ್ಠಾನವಾದರೆ ರಾಜ್ಯದ ಪೌರಕಾರ್ಮಿಕರಿಗೆ ಅನುಕೂಲ ಆಗಲಿದೆ ಎಂದರು.
ಪೌರ ಕಾರ್ಮಿಕರನ್ನು ಕಾಯಂ ಮಾಡುವ ಪ್ರಕ್ರಿಯೆ ನಡೆಸುತ್ತಿದ್ದಾಗ ಅಧಿಕಾರಿಗಳು ಅದನ್ನು ಮಾಡಲು ಬರುವುದಿಲ್ಲ, ಕಾರ್ಮಿಕರಿಗೆ ವಯಸ್ಸಾಗಿದೆ ಎಂದಿದ್ದರು. ಒಳ್ಳೆಯ ಕೆಲಸ ಮಾಡುವಾಗ, ಬಡವರ ಕೆಲಸ ಮಾಡುವಾಗ ಮಾನವೀತೆಯ ನೆಲಗಟ್ಟಿನಲ್ಲಿ ಮಾಡಿ ಎಂದು ಸೂಚಿಸಿದ್ದೆ. ನೀವು ಅತ್ಯಂತ ಪವಿತ್ರವಾದ ಕೆಲಸ ಮಾಡುತ್ತಿದ್ದೀರಿ. ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರು ಜೀವನದಲ್ಲಿ ಯಶಸ್ವಿಯಾದರೆ ನೀವೂ ಯಶಸ್ವಿಯಾದಂತೆ ಎಂದರು.ಹಾವೇರಿ ಜಿಲ್ಲೆ ಪುಣ್ಯಭೂಮಿ. ಮೇರು ಸಾಹಿತಿಗಳು, ಕವಿಗಳು, ಮಠಾಧೀಶರು, ಪುಣ್ಯಪುರುಷರು ನಡೆದಾಡಿದ ಇತಿಹಾಸ ಹೊಂದಿದೆ. ಇದಕ್ಕೆ ಒಳ್ಳೆಯ ಭವಿಷ್ಯ ಬರೆಯುವ ಅವಶ್ಯಕತೆ ಇದೆ. ಹಾವೇರಿ ಜಿಲ್ಲೆಯ ಹೋರಾಟದಲ್ಲೂ ಸಿ.ಎಂ. ಉದಾಸಿ ಅವರ ನೇತೃತ್ವದಲ್ಲಿ ನಾವು ಪಾಲ್ಗೊಂಡಿದ್ದೆವು. ಜಿಲ್ಲಾ ಕೇಂದ್ರ ಆದ ಮೇಲೆ ಯಾವ ಮಟ್ಟಕ್ಕೆ ಪ್ರಗತಿ ಆಗಬೇಕಿತ್ತೋ ಆ ಮಟ್ಟಕ್ಕೆ ಆಗಿಲ್ಲ, ಜನರ ನಿರೀಕ್ಷೆ ಪೂರ್ಣ ಆಗಿಲ್ಲ, ಇನ್ನಷ್ಟು ಅಭಿವೃದ್ಧಿ ಆಗಬೇಕಿದೆ ಎಂದರು.
ಹರಸೂರು ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಹಾವೇರಿಯಲ್ಲಿ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ನಡೆಯಲು ಬಸವರಾಜ ಬೊಮ್ಮಾಯಿ ಅವರು ಕಾರರ್ಣಿಕರ್ತರು. ಹಾವೇರಿಯಲ್ಲಿ ಇನ್ನಷ್ಟು ಒಳ್ಳೆಯ ಕೆಲಸ ಆಗಬೇಕಿದೆ. ಹೀಗಾಗಿ ಬಸವರಾಜ ಬೊಮ್ಮಾಯಿ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿ ಎಂದು ಆಶಿಸಿದರು.ಕಾರ್ಯಕ್ರಮದಲ್ಲಿ ಭರತ ಬೊಮ್ಮಾಯಿ, ಬಸವರಾಜ ಅರಬಗೊಂಡ, ಮಂಜುನಾಥ ಮಡಿವಾಳರ, ಬಸವರಾಜ ಹೊಸಮನಿ, ಸುರೇಶ ಮುರಡಣ್ಣನವರ, ಶಿವಬಸಪ್ಪ ಚೌಶೆಟ್ಟಿ, ಜಗದೀಶ ಬಸೇಗಣ್ಣಿ, ಪ್ರಭು ಹಿಟ್ನಳ್ಳಿ, ಜಗದೀಶ ಕನವಳ್ಳಿ, ನಾಗೇಂದ್ರ ಕಡಕೋಳ, ಶಿವಯೋಗಿ ಹುಲಿಕಂತಿಮಠ, ಮುಕೇಶ ಮುಂದಿನಮನಿ, ಸೌಭಾಗ್ಯಾ ಹಿರೇಮಠ, ರಾಜು ಆನವಟ್ಟಿ, ಗಿರೀಶ ಗುಮಕಾರ, ಉಡಚಪ್ಪ ಮಾಳಗಿ, ಶಿವಬಸವ ಹಲಗಲಿ, ಬಸವರಾಜ ಗುಂಡೇನಹಳ್ಳಿ, ಗುರು ಸಾತೇನಹಳ್ಳಿ ಇತರರು ಇದ್ದರು. ಸುರೇಶ ಹೊಸಮನಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಂಜುಂಡೇಶ ಕಳ್ಳೇರ ನಿರ್ವಹಿಸಿದರು. ಚೇತನ ಹೂಗಾರ ವಂದಿಸಿದರು.