ಸಾರಾಂಶ
ಸೋಮರಡ್ಡಿ ಅಳವಂಡಿಕೊಪ್ಪಳ: ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಲಕ್ಷ ಲಕ್ಷ ಭಕ್ತರು ಸೇರಿದ್ದರೂ ಶಬ್ದ ಮಾಲಿನ್ಯ ಇಲ್ಲ, ಕರ್ಕಶ ಧ್ವನಿಗಳ ಅಬ್ಬರ ಇಲ್ಲ. ಇಡೀ ಜಾತ್ರೆಯಲ್ಲಿ ಎಲ್ಲಿಯೂ ಮಾಲಿನ್ಯಪೂರಕ ವಾತಾವರಣ ಇಲ್ಲ.ಹೌದು. ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಈ ವರ್ಷ ಸುಮಾರು 7-8 ಲಕ್ಷ ಭಕ್ತರು ಸೇರಿದ್ದು, ಮರುದಿನವೂ 2-3 ಲಕ್ಷ ಭಕ್ತರು ಗವಿಮಠದ ಆವರಣದಲ್ಲಿ ಇದ್ದರೂ ಶಾಂತ ಶಾಂತ ಎನ್ನುವಂತಿತ್ತು.ಗವಿಸಿದ್ಧೇಶ್ವರ ಶ್ರೀಗಳು ಪರಿಸರ ಜಾಗೃತಿಯನ್ನೇ ತಮ್ಮ ಧ್ಯೇಯವಾಗಿ ಮಾಡಿಕೊಂಡಿರುವುದರಿಂದ ಜಾತ್ರೆಯಲ್ಲಿ ಸ್ವಚ್ಛತೆ ಅಷ್ಟೇ ಅಲ್ಲ, ಶಬ್ದಮಾಲಿನ್ಯ ನಿಯಂತ್ರಣಕ್ಕೂ ಒತ್ತು ನೀಡಿದ್ದಾರೆ. ಇದಕ್ಕಾಗಿ ಶ್ರೀಗಳು ಹಲವಾರು ಷರತ್ತುಗಳನ್ನು ವಿಧಿಸಿ ಶಬ್ದಮಾಲಿನ್ಯಕ್ಕೆ ಬ್ರೇಕ್ ಹಾಕಿದ್ದು, ಲಕ್ಷ ಲಕ್ಷ ಭಕ್ತರ ಮಧ್ಯೆಯೂ ಜನರು ಕರ್ಕಶ ಶಬ್ದ ಇಲ್ಲದೇ ನೆಮ್ಮದಿಯಿಂದ ಸುತ್ತಾಡುತ್ತಾರೆ.ಪಿಪೀಗೂ ಬ್ರೇಕ್:ಜಾತ್ರೆಯಲ್ಲಿ ಪಿಪೀ ಸೇರಿದಂತೆ ಶಬ್ದ ಬರುವ ಯಾವುದೇ ವಸ್ತುಗಳ ಬಳಕೆಗೆ ಬ್ರೇಕ್ ಹಾಕಲಾಗಿದೆ. ಇಲ್ಲಿ ಪಿಪೀ ಊದುವಂತೆ ಇಲ್ಲ ಎನ್ನುವ ಷರತ್ತು ಮಾತ್ರ ಹಾಕಿ ಕೈ ತೊಳೆದುಕೊಂಡಿಲ್ಲ. ಪಿಪೀ ಸೇರಿದಂತೆ ಶಬ್ದ ಬರುವ ಜಾತ್ರೆಯ ಐಟಂಗಳ ಮಾರಾಟಕ್ಕೂ ನಿಷೇಧ ಹೇರಲಾಗಿದೆ.ಜಾತ್ರೆಯಲ್ಲಿ ಅಂಗಡಿ ಹಾಕುವವರಿಗೆ ಈ ಷರತ್ತಿನ ಆಧಾರದಲ್ಲಿಯೇ ಅನುಮತಿ ನೀಡಲಾಗಿದೆ. ಹೀಗಾಗಿ, ಇಡೀ ಜಾತ್ರೆಯಲ್ಲಿ ಎಲ್ಲೂ ಕರ್ಕಶ ಶಬ್ದದ ಸುಳಿವೂ ಸಿಗುವುದಿಲ್ಲ.ಮೈಕ್‌ಗೆ ಇಲ್ಲ ಅವಕಾಶ:ಪೊಲೀಸರು ಸೇರಿದಂತೆ ಬಂದೋಬಸ್ತ್ ವ್ಯವಸ್ಥೆಯಲ್ಲಿರುವವರು ಸೂಚನೆ ನೀಡಲು ಬಳಸುವ ಮೈಕ್‌ಗೂ ಬ್ರೇಕ್ ಹಾಕಲಾಗಿದೆ. ದಾರಿಯುದ್ದಕ್ಕೂ ಪೊಲೀಸ ವ್ಯಾನ್‌ನಲ್ಲಿ ಸೂಚನೆ ನೀಡುವಂತಿಲ್ಲ. ವಿವಿಧ ಕಂಪನಿಗಳು ತಮ್ಮ ವಸ್ತುಗಳ ಕುರಿತು ಜಾಗೃತಿ ಮೂಡಿಸಲು ಮೈಕ್‌ನಲ್ಲಿ ಕೂಗುತ್ತಿರುವುದಕ್ಕೂ ಬ್ರೇಕ್ ಹಾಕಲಾಗಿದೆ. ನಾಟಕ, ಸಿನಿಮಾ ಸೇರಿದಂತೆ ಮೊದಲಾದವುಗಳ ಕುರಿತು ಪ್ರಚಾರಕ್ಕೂ ಕಡಿವಾಣ ಹಾಕಲಾಗಿದೆ.ನಾಲ್ಕೇ ಗಂಟೆ ನಿದ್ರೆ: ಗವಿಸಿದ್ಧೇಶ್ವರ ಶ್ರೀಗಳು ಮಹಾರಥೋತ್ಸವದ ದಿನದಂದು ರಾತ್ರಿ ಮಲಗಿದ್ದೇ ತಡರಾತ್ರಿ 1 ಗಂಟೆಯ ನಂತರ, ಪುನಃ ಎದ್ದಿದ್ದು 4.30-5 ಗಂಟೆಯ ವೇಳೆಗೆ. ಅಂದರೆ ಕೇವಲ ನಾಲ್ಕು ಗಂಟೆ ಮಾತ್ರ ನಿದ್ರೆ ಮಾಡಿದ್ದಾರೆ. ಇದು ಕೇವಲ ಒಂದು ದಿನದ ಕತೆಯಲ್ಲ, ಕಳೆದೊಂದು ವಾರದಿಂದ ಗವಿಸಿದ್ದೇಶ್ವರ ಶ್ರೀ ಮಲಗಿದ್ದೇ ಕಮ್ಮಿ. ಜಾತ್ರೆ ಆರಂಭವಾಗುವ ಎರಡು ದಿನ ಮುಂಚೆ ರಾತ್ರಿ ಪೂರ್ತಿ ಇಡೀ ಮಠವನ್ನು ತೊಳೆಯುವ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ತಮ್ಮ ಗುಹೆ ಸೇರಿದಂತೆ ಮಠವನ್ನು ಸೇವಕರೊಂದಿಗೆ ಒಡಗೂಡಿ ತಾವೇ ತೊಳೆದು ಸ್ವಚ್ಛಗೊಳಿಸಿದ್ದಾರೆ.ತಡರಾತ್ರಿ ಬಂದವರಿಗೂ ಪ್ರಸಾದ:ಗವಿಸಿದ್ಧೇಶ್ವರ ಶ್ರೀ ಭಕ್ತ ಹಿತಚಿಂತನಾ ಕಾರ್ಯಕ್ರಮ ಮುಗಿದ ಮೇಲೆ ಮಧ್ಯೆ ರಾತ್ರಿ ವೇಳೆ ಮಹಾದಾಸೋಹಕ್ಕೆ ಆಗಮಿಸಿ ಪರಿಶೀಲಿಸಿದರು. ತಡರಾತ್ರಿ ಬಂದವರಿಗೂ ಪ್ರಸಾದ ವ್ಯವಸ್ಥೆ ಮುಂದುವರಿಸುವಂತೆ ಸೂಚನೆ ನೀಡಿದರು. ಯಾರು ಸಹ ರಾತ್ರಿ ಪ್ರಸಾದ ಸಿಗಲಿಲ್ಲ ಎಂದು ಹೋಗಬಾರದು. ಅದು ಎಷ್ಟೇ ಹೊತ್ತಾದರೂ ಪ್ರಸಾದ ನೀಡುವಂತೆ ಸೂಚಿಸಿದರು.ಸಾಮಾನ್ಯವಾಗಿ ಮಹಾರಥೋತ್ಸವ ಸಾಗುವ ವೇಳೆಯಲ್ಲಿ ಪ್ರತಿವರ್ಷ ಮಹಾದಾಸೋಹವನ್ನು ಬಂದ್ ಮಾಡಲಾಗುತ್ತಿತ್ತು. ಆದರೆ, ಈ ವರ್ಷ ಜನರ ಒತ್ತಡ ಹೆಚ್ಚಿದ್ದದ್ದರಿಂದ ರಥೋತ್ಸವ ವೇಳೆಯಲ್ಲೂ ಪ್ರಸಾದ ವಿತರಣೆ ಸಾಂಗವಾಗಿ ನಡೆಯಿತು.
ಮಹಾದಾಸೋಹದಲ್ಲಿ ತಡರಾತ್ರಿ ಸುಮಾರು 1 ಗಂಟೆಗೂ ಭಕ್ತರು ಪ್ರಸಾದ ಸ್ವೀಕರಿಸುತ್ತಿದ್ದರು. ಆದರೆ, ರಾತ್ರಿಪೂರ್ತಿ ಅಡುಗೆ ಮಾಡುವ ಕಾರ್ಯ ಮಾತ್ರ ನಡೆದೇ ಇತ್ತು. ಬೆಳಗ್ಗೆ ಪುನಃ 6 ಗಂಟೆಗೆ ಮಹಾದಾಸೋಹ ಪ್ರಾರಂಭವಾಗಿರುವುದು ವಿಶೇಷ.5 ಲಕ್ಷ ಮಿರ್ಚಿ ಬಜ್ಜಿ:ಜಾತ್ರಾ ಮಹೋತ್ಸವದ ಎರಡನೇ ದಿನ ಲಕ್ಷ ಲಕ್ಷ ಭಕ್ತರಿಗೂ ಮಿರ್ಚಿ ಬಜ್ಜಿ ನೀಡಲಾಯಿತು. ಬೆಳಗ್ಗೆ 4 ಗಂಟೆಗೆ ಪ್ರಾರಂಭವಾದ ಮಿರ್ಚಿ ಹಾಕುವ ಕಾರ್ಯ ತಡರಾತ್ರಿಯವರೆಗೂ ನಡೆಯಿತು. ಸುಮಾರು 5 ಲಕ್ಷ ಮಿರ್ಚಿ ಬಜ್ಜಿ ಮಾಡಿ, ಹಾಕಿದ್ದು ದಾಖಲೆಯೇ ಸರಿ.