ಸಾರಾಂಶ
ಯಾದಗಿರಿ ವೀರಶೈವ ಕಲ್ಯಾಣ ಮಂಟಪ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ “ಶ್ರೀ ಸವಿತಾ ಮಹರ್ಷಿ” ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕನ್ನಡಪ್ರಭ ವಾರ್ತೆ ಯಾದಗಿರಿ
ಸವಿತಾ ಮಹರ್ಷಿ ಗುರುಗಳ ಹಾದಿಯಲ್ಲಿ ಸಾಗಿ ಆಚಾರ, ವಿಚಾರ ಮೈಗೂಡಿಸಿಕೊಂಡು, ಸಮಾಜದಲ್ಲಿ ಸವಿತಾ ಸಮುದಾಯ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಮತ್ತಷ್ಟು ಸದೃಢವಾಗಬೇಕು ಎಂದು ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಹೇಳಿದರು.ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ಶ್ರೀ ಸವಿತಾ ಸಮಿತಿ ಹಾಗೂ ವಿವಿಧ ಇಲಾಖೆ ಸಂಯುಕ್ತಾಶ್ರಯದಲ್ಲಿ ವೀರಶೈವ ಕಲ್ಯಾಣ ಮಂಟಪ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಶ್ರೀ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದ ಶ್ರೇಷ್ಠತೆಗೆ ಸವಿತಾ ಮಹರ್ಷಿ ಶ್ರಮಿಸಿದ್ದಾರೆ. ಸಮುದಾಯದವರು ಆರ್ಥಿಕ, ಸಾಮಾಜಿಕ ರಾಜಕೀಯ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಸಮಾಜ ತನ್ನದೇ ಆದ ಪರಂಪರೆ ಹೊಂದಿದೆ. ಸವಿತಾ ಮಹರ್ಷಿ ಕ್ಷೌರಿಕ ಸಮಾಜದ ಮೂಲ ಪುರುಷರು. ಮಹರ್ಷಿಗಳು ದೇವಾನುದೇವತೆಗಳಿಗೆ ಕ್ಷೌರಿಕ ಮಾಡುತ್ತಿದ್ದರು ಎಂಬ ನಂಬಿಕೆ ಇದೆ. ಅಲ್ಲದೆ ದೇವತೆಗಳ ಜೊತೆಗೆ ತಪಸ್ಸು ಮಾಡುತ್ತಿದ್ದರು ಎಂದು ಹೇಳಿದರು.ವಿಶೇಷ ಉಪನ್ಯಾಸ ನೀಡಿದ ಹುಣಸಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಹ ಶಿಕ್ಷಕ ಅಶೋಕ್ ಹಡಪದ ಅವರು, ಶೈಕ್ಷಣಿಕ, ಆರ್ಥಿಕ ರಾಜಕೀಯವಾಗಿ ಹಿಂದುಳಿದವರ ಉದ್ಧಾರಕ್ಕಾಗಿ ಶ್ರಮಿಸಿದ ಮಹಾನ್ ಸಾಧಕ ಇವರು ಕ್ಷತ್ರಿಯ ವಿದ್ಯೆ, ಕ್ಷೌರಿಕ, ಸಂಗೀತ ವಾದ್ಯ ನುಡಿಸುವದರಲ್ಲಿ ಪಾರಂಗತ ಹೊಂದಿದ್ದರು. 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣ ಅವರಿಗೆ ಆಶ್ರಯ ನೀಡಿದ ಸವಿತಾ ಸಮಾಜದ ದೊರೆ ಬಿಜ್ಜಳ ಎಂಬುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷರು ಅಪ್ಪಣ್ಣ ಪಿ ಚಿನ್ನಾಕರ್, ಜಿಲ್ಲಾ ಪ್ರತಿನಿಧಿ ಮಲ್ಲಣ್ಣ ವಡಿಗೇರಿ, ಗೌರವ ಅಧ್ಯಕ್ಷ ಗೋಪಾಲ್ ಕಿಲ್ಲೆದ್, ವಿಶ್ವನಾಥ್ ಬಸನಗುಡಿ, ತಾಲೂಕು ಅಧ್ಯಕ್ಷರು ಶ್ರೀನಿವಾಸ್ ಕಲ್ಮನಿ, ಶಂಕರ್ ಕಲ್ಮನಿ, ಯುವ ಅಧ್ಯಕ್ಷರು ಶರಣು ಹೊಸಮನಿ, ಬಸವರಾಜ್ ಹೊಸಮನಿ, ಅಶೋಕ್ ಗೌವ್ನಳ್ಳಿ, ಮಲ್ಲಿಕಾರ್ಜುನ್ ಮಲಾರ್, ವೀರೇಶ್ ರಾಯಚೂರಕರ, ನಾಗರಾಜ್ ಹೊಸಮನಿ, ಚಂದ್ರು ಬಾಂಬೆ, ರಾಘವೇಂದ್ರ ಹೊಸಮನಿ, ದೇವು ಬಿಳ್ಹಾರ್, ಗೋಪಾಲ್ ಹಕ್ಕಿಮ್, ಈಶ್ವರ್ ಬಬಲಾದಿ, ಮಲ್ಲಿಕಾರ್ಜುನ್ ಹಕ್ಕಿಮ್ ಉಪಸ್ಥಿತರಿದ್ದರು.