ವಚನಗಳ ಸಾರವೇ ಸಂವಿಧಾನದ ಆಶಯ: ನ್ಯಾ.ದಾಸ್‌

| Published : Feb 19 2024, 11:47 PM IST

ಸಾರಾಂಶ

ವಚನಗಳಲ್ಲಿ ಇರುವ ತತ್ವಗಳೇ ಸಂವಿಧಾನದ ಆಶಯಗಳಾಗಿವೆ ಎಂದು ನಿವೃತ್ತ ನ್ಯಾಯಾಧೀಶ ನಾಗಮೋಹನ್‌ದಾಸ್‌ ಅವರು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಎಲ್ಲ ಜಾತಿ, ಧರ್ಮದವರೂ ಬ್ರಾತೃತ್ವದಿಂದ ಬಾಳಬೇಕು ಎಂಬ ಬಸವ ತತ್ವದ ಮೂಲ ಆಶಯಗಳೇ ನಮ್ಮ ಸಂವಿಧಾನದಲ್ಲೂ ಇವೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಹೇಳಿದ್ದಾರೆ.

ಪ್ರಬುದ್ಧ ಸಮಾಜ ನಿರ್ಮಾಣ ವೇದಿಕೆಯು ಭಾನುವಾರ ನಗರದ ಗಾಂಧೀ ಭವನದಲ್ಲಿ ಆಯೋಜಿಸಿದ್ದ ‘ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ-ಅರಿವಿನ ಅನುಭಾವಿಗಳ ಅನುಭವ ಮಂಟಪದಲ್ಲಿ ಮುಕ್ತ ಸಂವಾದ’ ಎಂಬ ಕಾರ್ಯಕ್ರಮದಲ್ಲಿ ಅವರು ವಚನಗಳ ಸಾರವೇ ನಮ್ಮ ಸಂವಿಧಾನದ ಮೂಲ ಆಶಯಗಳಾಗಿವೆ. 12ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳ ಸಾರ ನಮ್ಮ ಸಂವಿಧಾನದಲ್ಲಿ ಅಡಕವಾಗಿದೆ. ಈ ಸಮಾಜದಲ್ಲಿ ಮೇಲು ಕೀಳೆಂಬುದಿಲ್ಲ, ಸರ್ವರೂ ಸಮಾನರು ಎಂದರು.

ಬಸವತತ್ವದ ದರ್ಶನವನ್ನು ಇಡೀ ಜಗತ್ತಿಗೆ ಪ‍ರಿಚಯಿಸುವ ಉದ್ದೇಶದಿಂದ ಸರ್ಕಾರ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದು ಶ್ಲಾಘನೀಯ. ಸರ್ಕಾರ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಚಟುವಟಿಕೆಗಳಲ್ಲಿ ಶರಣರ ವಚನಗಳು ಪ್ರತಿಧ್ವನಿಸಿದರೆ ಮಾತ್ರ ಬಸವಣ್ಣನವರಿಗೆ ಗೌರವ ಸಲ್ಲಿಸಿದಂತೆ ಎಂದರು.

ವಚನ ಸಾಹಿತ್ಯದಲ್ಲಿ ನಾವು ಮಾನವ ಹಕ್ಕುಗಳ ಪ್ರತಿಪಾದನೆಯನ್ನು ಕಾಣಬಹುದು. ಆದರೆ, ಇವತ್ತು ಈ ಹಕ್ಕುಗಳನ್ನು ರಕ್ಷಿಸಬೇಕಾದ ಸರ್ಕಾರದಿಂದಲೇ ಉಲ್ಲಂಘನೆಯಾಗುತ್ತಿದೆ. ದೇಶದಲ್ಲಿ ಏನನ್ನೂ ಮಾತನಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೂಲ ಆಶಯಗಳು ಧ್ವಂಸವಾಗುತ್ತಿವೆ. ಕಳೆದ ಹತ್ತು ವರ್ಷಗಳಲ್ಲಿ ಸಂಸತ್ತಿನ ಶೇ.24ರಷ್ಟು ಸಮಯ ಧರಣಿ, ಪ್ರತಿಭಟನೆಯಲ್ಲಿ ಕಳೆದು ಹೋಗಿದೆ. ಶೇ.47ರಷ್ಟು ಮಸೂದೆಗಳು ಚರ್ಚೆ ಇಲ್ಲದೇ ಮಂಡನೆಯಾಗಿವೆ. ಪ್ರಶ್ನೆ ಮಾಡಿದ 146 ಜನರನ್ನು ಸಂಸತ್ತಿನಿಂದ ಅಮಾನತ್ತು ಮಾಡಲಾಗಿದೆ. ಪ್ರಜಾಪ್ರಭುತ್ವದ ಹೆಸರಲ್ಲಿ ಪ್ರಜಾಪ್ರಭುತ್ವ ವಿರೋಧಿ ನಡೆಗಳೇ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ‘ಕುವೆಂಪು ಒಳಗಿನ ಬಸವಣ್ಣ’ ವಿಷಯ ಕುರಿತು ಸಾಹಿತಿ ಕೆ.ವೈ.ನಾರಾಯಣಸ್ವಾಮಿ, ‘ಮಹಿಳಾ ಘನತೆ ಮತ್ತು ಸಮಾನತೆ ಸಾಧ್ಯವಾಗಿಸುವ ಬಸವತತ್ವ’ ಕುರಿತು ವಿಮರ್ಶಕಿ ಎಂ.ಎಸ್.ಆಶಾದೇವಿ, ‘ಸಮಸಮಾಜದ ನಿರ್ಮಾಣಕ್ಕೆ ಪ್ರಸ್ತುತ ಸಂದರ್ಭದಲ್ಲಿ ಬಸವಣ್ಣನವರ ಅಗತ್ಯ’ ಕುರಿತು ಸಾಹಿತಿ ಬಂಜಗೆರೆ ಜಯಪ್ರಕಾಶ್, ‘ಭಗವದ್ಗೀತೆ–ಖುರಾನ್–ಬೈಬಲ್‌ನಲ್ಲಿ ಬಸವತತ್ವದ ಆಶಯಗಳು’ ಕುರಿತು ಅರ್ಥಶಾಸ್ತ್ರಜ್ಞ ಟಿ.ಆರ್. ಚಂದ್ರಶೇಖರ್, ‘ಮತ್ತೆ ಕಲ್ಯಾಣ’ ವಿಷಯದ ಕುರಿತು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಜಿ.ಬಿ. ಪಾಟೀಲ ಮಾತನಾಡಿದರು.

ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ದಿನೇಶ್ ಅಮೀನ್‌ ಮಟ್ಟು ಭಾಗವಹಿಸಿದ್ದರು.