ಸಾರಾಂಶ
ಆತ್ಮಭೂಷಣ್
ಕನ್ನಡಪ್ರಭ ವಾರ್ತೆ ಮಂಗಳೂರು2024-25ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಬೋಧನೆ ನಡೆಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಶಿಕ್ಷಣ ಇಲಾಖೆ ಈಗ ಹೊರಡಿಸಿರುವ ಆದೇಶವೊಂದು ಬರಸಿಡಿಲು ಎರಗುವಂತೆ ಮಾಡಿದೆ.ಖಾಲಿ ಇರುವ ಉಪನ್ಯಾಸಕರ ಹುದ್ದೆಗೆ ಅತಿಥಿ ಉಪನ್ಯಾಸಕರಾಗಿ ನೇಮಕವಾಗಬೇಕಾದರೆ ಬಿಎಡ್ ಆಗಿರಲೇ ಬೇಕು ಎಂಬ ಮಾನದಂಡವನ್ನು ಕಡ್ಡಾಯಗೊಳಿಸಿ ತಡವಾಗಿ ಆದೇಶ ಹೊರಡಿಸಲಾಗಿದೆ. ಇದರಿಂದಾಗಿ ಶೈಕ್ಷಣಿಕ ವರ್ಷ ಆರಂಭವಾಗಿ ಈಗಾಗಲೇ ತರಗತಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರು ಕಂಗಾಲಾಗಿದ್ದಾರೆ. ಇರುವ ತಾತ್ಕಾಲಿಕ ಹುದ್ದೆಯನ್ನೂ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಏನಿದು ಹೊಸ ಸೇರ್ಪಡೆ ಆದೇಶ?: ಸರ್ಕಾರಿ ಪಿಯು ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ಪ್ರತಿ ವರ್ಷ ನೇಮಕ ಮಾಡುವುದು ಕ್ರಮ. ಅದರಂತೆ ಈ ಬಾರಿಯೂ ಅತಿಥಿ ಉಪನ್ಯಾಸಕ ನೇಮಕಾತಿಗೆ ಮೇ 30ರಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಜ್ಞಾಪನಾ ಪತ್ರ ಹೊರಡಿಸಿದೆ. ಅದರಲ್ಲಿ ಖಾಲಿ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿಗೆ ಸ್ನಾತಕೋತ್ತರ ಪದವಿ ಅರ್ಹತೆಯಾಗಿದ್ದು, ಶೇ.55ರಷ್ಟು ಅಂಕ ಪಡೆದಿರಬೇಕು ಎಂಬ ಮಾನದಂಡ ತಿಳಿಸಲಾಗಿದೆ. ಆದರೆ ಜೂ.12ರಂದು ಹೊರಡಿಸಿದ ಸೇರ್ಪಡೆ ಆದೇಶದಲ್ಲಿ ಬಿಎಡ್ ಪದವಿ ಹೊಂದಿರಬೇಕು ಎಂಬ ಮಾನದಂಡ ವಿಧಿಸಲಾಗಿದೆ. ಇದು ಹಾಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಕಂಗೆಡುವಂತೆ ಮಾಡಿದೆ. ಹೊಸ ಆದೇಶ ತಂದ ಇಕ್ಕಟ್ಟು: ರಾಜ್ಯದಲ್ಲಿ ಸುಮಾರು 1,200ಕ್ಕೂ ಅಧಿಕ ಸರ್ಕಾರಿ ಪಿಯು ಕಾಲೇಜುಗಳಿವೆ. ಈ ಕಾಲೇಜುಗಳಲ್ಲಿ ಕಳೆದ ಬಾರಿ 4,500 ಮಂದಿ ಅತಿಥಿ ಉಪನ್ಯಾಸಕರ ನೇಮಕ ಮಾಡಲಾಗಿತ್ತು. ಈ ಬಾರಿ 189ರಷ್ಟು ಜಾಸ್ತಿ ಅಂದರೆ, 4,689 ಅತಿಥಿ ಉಪನ್ಯಾಸಕರ ನೇಮಕಾತಿಗೆ ಸರ್ಕಾರ ಅವಕಾಶ ಕಲ್ಪಿಸಿದೆ. ಶಿಕ್ಷಣ ಇಲಾಖೆಯ ಈ ಆದೇಶವನ್ನು ಪಾಲಿಸಿದರೆ ಶೇ.50ರಷ್ಟು ಅತಿಥಿ ಉಪನ್ಯಾಸಕರು ಅರ್ಹತೆ ಇಲ್ಲದೆ ಮನೆಗೆ ತೆರಳಬೇಕಾಗುತ್ತದೆ. ಈ ಬಾರಿ ಅತಿಥಿ ಉಪನ್ಯಾಸಕರನ್ನು ಮೇ 30ರ ಆದೇಶದಂತೆ ನೇಮಕ ಮಾಡಲಾಗಿದೆ. ಈಗ ತರಗತಿಯೂ ಆರಂಭಗೊಂಡು ಪಾಠ ಪ್ರವಚನ ನಡೆಯುತ್ತಿದೆ. ಆದರೆ ಬುಧವಾರ ಶಿಕ್ಷಣ ಇಲಾಖೆ ಹೊರಡಿಸಿದ ಹೊಸ ಆದೇಶ ಗೊಂದಲಕ್ಕೆ ಕಾರಣವಾಗಿದೆ. ಈಗಾಗಲೇ ನೇಮಕಗೊಂಡು ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಏನು ಮಾಡಬೇಕು ಎಂಬ ಜಿಜ್ಞಾಸೆಗೆ ಒಳಗಾಗುವಂತೆ ಮಾಡಿದೆ.ಶೇ.50ರಷ್ಟು ಅನರ್ಹತೆ:
ಪ್ರಸ್ತುತ ರಾಜ್ಯದಲ್ಲಿ ಅತಿಥಿ ಉಪನ್ಯಾಸಕರ ಪೈಕಿ ಬಿಎಡ್ ಪೂರೈಸಿದವರ ಸಂಖ್ಯೆ ಶೇ.50ರಷ್ಟಿದೆ. ಬಾಕಿ ಶೇ.50ರಷ್ಟು ಮಂದಿಗೆ ಬಿಎಡ್ ಆಗಿಲ್ಲ. ಕೇವಲ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬಿಎಡ್ ಪೂರೈಸಿದವರ ಸಂಖ್ಯೆ ಅರ್ಧ ಭಾಗ ಮಾತ್ರ ಇರುವುದರಿಂದ ಉಳಿದ ಅರ್ಧ ಭಾಗವನ್ನು ಹೇಗೆ ಭರ್ತಿಗೊಳಿಸಬೇಕು ಎಂಬ ಚಿಂತೆ ಪಿಯು ಅಧಿಕಾರಿಗಳು ಹಾಗೂ ಕಾಲೇಜು ಪ್ರಾಂಶುಪಾಲರಿಗೆ ತಲೆದೋರಿದೆ. ಬಾಕ್ಸ್----ಹಿಂದೆ ಪದವಿ ಸಾಕು, ಈಗ ಬಿಎಡ್ ಬೇಕು!
ಪಿಯು ಉಪನ್ಯಾಸಕರಾಗಲು 2020ರಲ್ಲಿ ಸ್ನಾತಕೋತ್ತರ ಪದವಿ ಜತೆಗೆ ಬಿಎಡ್ ಕಡ್ಡಾಯಗೊಳಿಸಲಾಗಿತ್ತು. 2015ರಲ್ಲಿ ಪಿಯು ಕಾಲೇಜುಗಳಿಗೆ ಕಾಯಂ ಉಪನ್ಯಾಸಕರ ನೇಮಕಾತಿ ಬಿಟ್ಟರೆ, ಇಲ್ಲಿವರೆಗೆ ಕಾಯಂ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನೇ ಮುಂದುವರಿಸಲಾಗಿದೆ.ಪದವಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿಗೆ ಯುಜಿಸಿ, ನೀಟ್ ಕಡ್ಡಾಯ ಇಲ್ಲ. ಆದರೆ ಗೌರವಧನ ನೀಡಿಕೆಯಲ್ಲಿ ವ್ಯತ್ಯಾಸ ಇದೆ. ಆದರೆ ಪಿಯುಸಿಗೆ ಸಂಬಂಧಿಸಿ ಕಾಯಂ ಮಾತ್ರವಲ್ಲ ಅತಿಥಿ ಉಪನ್ಯಾಸಕರ ನೇಮಕಾತಿಗೂ ಈ ವರ್ಷದಿಂದ ಬಿಎಡ್ ಕಡ್ಡಾಯಗೊಳಿಸಲಾಗಿದೆ. ವೇತನ ಕೂಡ ತೀರ ಕಡಿಮೆ ಇದೆ ಎಂಬುದು ಅತಿಥಿ ಉಪನ್ಯಾಸಕರ ಅಳಲು.ಬಿಎಡ್ ಕಡ್ಡಾಯ ಎಂಬ ಆದೇಶ ಉತ್ತಮವಾದ್ದೇ. ಇದು ಮುಂದೆ ಕಾಯಂ ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರಿಗೆ ನೆರವಾಗಲಿದೆ. ಈಗಾಗಲೇ ಬಿಎಡ್ ರಹಿತವಾಗಿ ಕಾರ್ಯನಿರ್ವಹಿಸುತ್ತಿರುವ ಶೇ.50ರಷ್ಟು ಉಪನ್ಯಾಸಕರ ಉದ್ಯೋಗಕ್ಕೆ ಇದು ತೊಂದರೆಯಾಗಲಿದೆ. ಬಿಎಡ್ ಮಾನದಂಡದಲ್ಲಿ ನೇಮಕಾತಿ ಬಳಿಕ ಖಾಲಿ ಹುದ್ದೆ ಇದ್ದರೆ ಅವುಗಳಿಗೆ ಸ್ನಾತಕೋತ್ತರ ಪದವಿ ಪಡೆದ ಅತಿಥಿ ಉಪನ್ಯಾಸಕರನ್ನು ಪರಿಗಣಿಸುವಂತಾಗಬೇಕು.
-ಪದ್ಮಪ್ರಭ ಇಂದ್ರ, ಅಧ್ಯಕ್ಷರು, ಕರ್ನಾಟಕ ಸರ್ಕಾರಿ ಪಿಯು ಕಾಲೇಜು ಅತಿಥಿ ಉಪನ್ಯಾಸಕರ ಸಂಘವೃಂದ ಮತ್ತು ನೇಮಕಾತಿ ನಿಯಮದ ಪ್ರಕಾರವೇ ಅರ್ಹತೆಯಡಿ ಅತಿಥಿ ಉಪನ್ಯಾಸಕರಾಗಿ ನೇಮಕ ಮಾಡಲಾಗುತ್ತಿದೆ. ಬಿಎಡ್ ಮಾನದಂಡ ಮೊದಲಿನಿಂದಲೂ ಇದೆ, ಇದನ್ನು ಹೊಸದಾಗಿ ಜಾರಿಗೊಳಿಸುತ್ತಿಲ್ಲ. ಆದರೆ ಪ್ರತಿ ಬಾರಿ ಆದೇಶ ಹೊರಡಿಸುವಾಗ ಬಿಎಡ್ ಮಾನದಂಡ ಬಿಟ್ಟುಹೋಗುತ್ತಿತ್ತು. ಈ ಬಾರಿ ಬಿಟ್ಟು ಹೋಗಿರುವುದನ್ನು ಮತ್ತೆ ಸೇರ್ಪಡೆಗೊಳಿಸಿ ಆದೇಶ ಹೊರಡಿಸಲಾಗಿದೆ. ಆದರೆ ರಾಜ್ಯದ ಪಿಯು ಕಾಲೇಜುಗಳಲ್ಲಿ ಶೇ.50ರಷ್ಟು ಬಿಎಡ್ ರಹಿತ ಅತಿಥಿ ಉಪನ್ಯಾಸಕರನ್ನು ನೇಮಕಗೊಳಿಸಿರುವುದು ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು.-ಸಿಂಧೂ ರೂಪೇಶ್, ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಬೆಂಗಳೂರು