ಆದಿ ಮಾನವ ಯಾವುದೇ ರೀತಿಯ ಬರವಣಿಗೆಯನ್ನಾಗಿ ಲಿಪಿಯನ್ನಾಗಲಿ, ಕಂಡುಕೊಂಡಿರಲಿಲ್ಲ.
ಹೊಸಪೇಟೆ: ಆದಿ ಮಾನವ ವಿಕಾಸ ಹಾಗೂ ಆತನು ಬೆಳೆದು ಬಂದ ಹಾದಿ ಮತ್ತು ದೀರ್ಘಕಾಲದ ಆತನ ಜೀವನ ಶೈಲಿಯನ್ನು ಅಧ್ಯಯನ ದೃಷ್ಟಿಯಿಂದ ಪ್ರಾಗೈತಿಹಾಸಿಕ ಕಾಲ, ಆದಿ ಇತಿಹಾಸ ಕಾಲ ಮತ್ತು ಇತಿಹಾಸ ಕಾಲ ಎಂದು ಅನುಕ್ರಮವಾಗಿ ವಿಭಾಗಿಸಿಕೊಳ್ಳಲಾಗಿದೆ ಎಂದು ಕನ್ನಡ ವಿಶ್ವವಿದ್ಯಾಲಯ ಹಂಪಿಯ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ನಾಗರಾಜ ಎಂ. ಹೇಳಿದರು.
ಹಂಪಿ ವಿವಿಯ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ನಡೆದ ಸಮಾಜಮುಖಿ ತಿಂಗಳ ಮಾತು 12 ರ ಕಾರ್ಯಕ್ರಮದಲ್ಲಿ ಪ್ರಾಗೈತಿಹಾಸಿಕ ಆಕರಗಳು : ಬೇಡ ಬುಡಕಟ್ಟಿನ ಚಹರೆಗಳು ಎಂಬ ವಿಷಯವನ್ನು ಕುರಿತು ಅವರು ಮಾತನಾಡಿದರು.ಆದಿ ಮಾನವ ಯಾವುದೇ ರೀತಿಯ ಬರವಣಿಗೆಯನ್ನಾಗಿ ಲಿಪಿಯನ್ನಾಗಲಿ, ಕಂಡುಕೊಂಡಿರಲಿಲ್ಲ. ಆದ್ದರಿಂದ ಆದಿಮ ಸಮಾಜದ ಜೀವನ ಕ್ರಮವನ್ನು ಕುರಿತಾದ ಸಾಹಿತ್ಯ ದಂತ ಕಥನಗಳು ನಮಗೆ ಲಭ್ಯವಾಗುವುದಿಲ್ಲ. ಆದರೂ ಅವನು ಕಾಲಾನುಕ್ರಮದಲ್ಲಿ ಬಿಟ್ಟು ಹೋದ ಕುರುಹುಗಳಿಂದ ಅವನ ಜೀವನದ ವೃತ್ತಾಂತಗಳನ್ನು ತಿಳಿಯುವ ಪ್ರಯತ್ನ ಇಂದಿಗೂ ನಡೆಯುತ್ತದೆ ಎಂದರು.
ಬೇಡ ಸಮುದಾಯವು ಅತ್ಯಂತ ಪ್ರಾಚೀನ ಹಿನ್ನೆಲೆಯನ್ನು ಹೊಂದಿದೆ. ಬೇಟೆಯ ವೃತ್ತಿ ಎಷ್ಟು ಹಳೆಯದೋ ಬೇಡನು ಅಷ್ಟೇ ಹಳಬ. ಬೇಡರ ಇತಿಹಾಸ ಭಾರತಕ್ಕಾಗಲಿ ಕರ್ನಾಟಕಕ್ಕಾಗಲಿ ಸೀಮಿತವಲ್ಲ. ಕಾಡು ಮತ್ತು ಬೇಟೆ ಸಂಬಂಧದೊಂದಿಗೆ ಬೆಳೆದ ಬೇಡನದು ಮೂಲ ಸಂಸ್ಕೃತಿಯಾಗಿದೆ ಎಂದರು.ಹಂಪಿ ವಿವಿಯ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಎಸ್.ವೈ. ಸೋಮಶೇಖರ್ ಮಾತನಾಡಿ, ಪುರಾತತ್ವ ಅಧ್ಯಯನಕಾರರು ನೋಡುವ ಬಗೆಯನ್ನು ಅಥವಾ ಪುರಾತತ್ವ ಆಕರವನ್ನು ಒಬ್ಬ ಸಮಾಜಶಾಸ್ತ್ರಜ್ಞ, ಅಥವಾ ಸಮಾಜಶಾಸ್ತ್ರದ ವಿದ್ಯಾರ್ಥಿ ಹೇಗೆ ನೋಡುತ್ತಾರೆ ಎಂಬುದನ್ನು ಗಮನಿಸಬಹುದು. ಇಡೀ ಮಾನವನ ಉಗಮ ವಿಕಾಸದ ಹಂತಗಳನ್ನು ಗಮನಿಸಿದಾಗ ಮೊದಲನೆಯದಾಗಿ ಬರುವುದು ಪ್ರಾಣಿ ಬೇಟೆಯಾಡುವುದು. ಅದುವೆ ಮನುಷ್ಯನ ಬೇಟೆ ಸಂಸ್ಕೃತಿ ಎಂದು ಅವರು ಹೇಳಿದರು.
ವಿಭಾಗದ ಮುಖ್ಯಸ್ಥ ಡಾ. ಈ. ಎರ‍್ರಿಸ್ವಾಮಿ ಮಾತನಾಡಿ ,ಸಂಶೋಧಕರು ಬಳಸುವ ಭಾಷೆ ಬಹಳ ಮುಖ್ಯವಾಗುತ್ತದೆ. ಸಂಶೋಧನಾತ್ಮಕ ಪ್ರಬಂಧವನ್ನು ಮಂಡಿಸುವಾಗ ಕೆಲವು ಶೈಲಿ ಹಾಗೂ ವಿಧಾನಗಳಿವೆ, ವಿಶ್ಲೇಷಣೆ ಇದೆ. ಎಲ್ಲವನ್ನು ಮಾಡಿದರೆ ಉತ್ತಮ ಪ್ರಬಂಧವಾಗುತ್ತದೆ ಎಂದು ಅವರು ಹೇಳಿದರು. ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ವಾಸುದೇವ ಬಡಿಗೇರ, ಸಂಚಾಲಕ ತಿಪ್ಪೇಶ. ಬಿ ಮತ್ತು ಸಂಶೋಧನಾರ್ಥಿಗಳು ಉಪಸ್ಥಿತರಿದ್ದರು.