ಶಿವರಾತ್ರಿ ಉತ್ಸವಕ್ಕೆ ಬೆಡಸಗಾಂವರಾಮಲಿಂಗೇಶ್ವರ ದೇವಾಲಯ ಸಜ್ಜು

| Published : Mar 07 2024, 01:48 AM IST

ಶಿವರಾತ್ರಿ ಉತ್ಸವಕ್ಕೆ ಬೆಡಸಗಾಂವರಾಮಲಿಂಗೇಶ್ವರ ದೇವಾಲಯ ಸಜ್ಜು
Share this Article
  • FB
  • TW
  • Linkdin
  • Email

ಸಾರಾಂಶ

ರಮಣೀಯ ವಾತಾವರಣದ ನಡುವೆ ಕುಳಿತಿರುವ ಸಾವಿರಾರು ವರ್ಷ ಇತಿಹಾಸವುಳ್ಳ ಬೆಡಸಗಾಂವ ಶ್ರೀ ರಾಮಲಿಂಗೇಶ್ವರ ದೇವಾಲಯವೀಗ ಮಹಾ ಶಿವರಾತ್ರಿ ಉತ್ಸವಕ್ಕೆ ಸಿದ್ಧಗೊಂಡಿದೆ.

ಸಂತೋಷ ದೈವಜ್ಞ

ಮುಂಡಗೋಡ:

ತಾಲೂಕಿನ ರಮಣೀಯ ವಾತಾವರಣದ ನಡುವೆ ಕುಳಿತಿರುವ ಸಾವಿರಾರು ವರ್ಷ ಇತಿಹಾಸವುಳ್ಳ ಬೆಡಸಗಾಂವ ಶ್ರೀ ರಾಮಲಿಂಗೇಶ್ವರ ದೇವಾಲಯವೀಗ ಮಹಾ ಶಿವರಾತ್ರಿ ಉತ್ಸವಕ್ಕೆ ಸಿದ್ಧಗೊಂಡಿದೆ.

ಈ ದೇವಾಲಯವು ಪುರಾತನ ಕಾಲದ್ದಾಗಿದ್ದು, ೧೨೦೦ ವರ್ಷಗಳ ಇತಿಹಾಸ ಹೊಂದಿದೆ. ಬನವಾಸಿ ಅರಸ ಕಾಲದ ಬಿಜ್ಜಳನ ಉಪರಾಜಧಾನಿಯಾಗಿ ಮೆರೆದ ಆಗಿನ ಕಾಲದ ಬೆಡಸಗಾಮೆ ಇಂದು ಬೆಡಸಗಾಂವ ಆಗಿ ಪರಿವರ್ತನೆಯಾಗಿದೆ ಎಂದು ಇಲ್ಲಿರುವ ಸಾವಿರಾರು ವರ್ಷಗಳ ಇತಿಹಾಸವುಳ್ಳ ಹಳೆಯ ಶಿಲಾ ಶಾಸನಗಳು ಹೇಳುತ್ತವೆ. ದೇವಾಲಯ ಹಾಗೂ ದೇವಾಲಯದೊಳಗಿರುವ ಶಿವಲಿಂಗ ಕರಿ ಶಿಲೆಯಿಂದ ನಿರ್ಮಿತವಾಗಿದೆ. ಸುತ್ತ ನಿತ್ಯ ಹರಿದ್ವರ್ಣದಿಂದ ಕೂಡಿರುವ ವಾತಾವರಣದ ನಡುವೆ ರಾಮಲಿಂಗೇಶ್ವರ ದೇವಾಲಯದ ಲಿಂಗವು ಸುಮಾರು ೫.೫ ಅಡಿ ಎತ್ತರವಿದ್ದು, ದೇವಾಲಯ ಬಲಭಾಗದ ಬೆಟ್ಟದಿಂದ ನಿರಂತರವಾಗಿ ನೀರು ಹರಿದು ಬರುತ್ತದೆ.ರಾಮ ಲಕ್ಷ್ಣಣರ ಇತಿಹಾಸ:ಹಿಂದೆ ರಾಮ-ಲಕ್ಷ್ಮಣರು ೧೪ ವರ್ಷ ವನವಾಸ ಕೈಗೊಂಡ ವೇಳೆ ಈ ಮಾರ್ಗವಾಗಿ ಬನವಾಸಿಗೆ ಹೋಗುತ್ತಿರುವ ವೇಳೆ ವಿಶ್ರಾಂತಿಗಾಗಿ ಇಲ್ಲಿ ತಂಗಿ ಬಾಯಾರಿಕೆ ತಣಿಸಿಕೊಳ್ಳಲು ರಾಮ ತನ್ನ ಬಿಲ್ಲಿನಿಂದ ಬಂಡೆಗೆ ಬಾಣ ಬಿಟ್ಟಾಗ ನೀರು ಚಿಮ್ಮಿದೆ ಎಂಬ ಪ್ರತೀತಿ ಇದೆ. ಬಂಡೆಯಿಂದ ಹರಿದು ಬರುವ ನೀರು ೨೦ ಕಿಮೀ ದೂರದ ಶಿರಸಿ ತಾಲೂಕು ಇಸಳೂರ ಕೆರೆಯಿಂದ ಹರಿದುಬರುತ್ತದೆ ಎನ್ನಲಾಗುತ್ತದೆ. ಅಲ್ಲದೇ ರಾಮ ಲಕ್ಷ್ಮಣ ಹಾಗೂ ಸೀತೆ ಈ ಸ್ಥಳಕ್ಕೆ ಬಂದು ಶಿವಲಿಂಗವನ್ನು ಪೂಜಿಸಿ ಹೋಗಿದ್ದರಿಂದ ಈ ದೇವಾಲಯಕ್ಕೆ ರಾಮಲಿಂಗೇಶ್ವರ ಎಂಬ ಹೆಸರು ಬಂದಿದೆ.ದೇವಾಲಯ ಸುತ್ತ ನೂರಾರು ನಾಗರ ಶಿಲಾ ಶಾಸನಗಳಿವೆ. ಗ್ರಾಮದಲ್ಲಿ ಇನ್ನೂ ಹಲವು ಪುರಾತನ ಕಾಲದ ಶಿಥಿಲಾವಸ್ಥೆ ಹೊಂದಿರುವ ಹತ್ತಾರು ದೇವಾಲಯಗಳು ಕಾಣಸಿಗುತ್ತವೆ. ಗ್ರಾಮದ ಸುತ್ತಮುತ್ತಲಿನ ಯಾವುದೇ ಭಾಗದಲ್ಲಿ ಭೂಮಿ ಅಗೆದರೂ ಶಿಥಿಲಗೊಂಡ ನಾಗರ ಶಿಲೆಗಳು ದೊರೆಯುತ್ತವೆ. ದೇವಾಲಯದ ಅಂಚಿನಲ್ಲಿಯೇ ಹಲವು ಋಷಿಮುನಿಗಳು ತಂಗಿ ತಪಸ್ಸು ಮಾಡಿದ ಕುರುಹುಗಳು ಲಭಿಸುತ್ತವೆ.ಶಿವರಾತ್ರಿ ಉತ್ಸವ:ಮಾ.8, 9ರಂದು ಪ್ರತಿ ವರ್ಷದಂತೆ ಜಾಗೃಣೆ, ಭಜನೆ ಕಾರ್ಯಕ್ರಮ ಸೇರಿದಂತೆ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ೧೯೪೨ರಿಂದ ಇಲ್ಲಿ ಪ್ರಾರಂಭವಾಗಿರುವ ಶಿವರಾತ್ರಿ ಉತ್ಸವಕ್ಕೆ ಆಗಮಿಸುವ ಭಕ್ತರು ಇಷ್ಟಸಿದ್ದಿಗಳಿಗೆ ಹರಕೆ ತುಲಾಭಾರ ಅರ್ಪಿಸುತ್ತಾರೆ. ಬೆಳಗ್ಗೆ ಪ್ರಾರಂಭವಾಗುವ ಇಲ್ಲಿಯ ಜಾತ್ರೆ ಅಹೋರಾತ್ರಿ ನಡೆಯುತ್ತದೆ.

ಮೂಲಭೂಲ ಸೌಲಭ್ಯದ ಕೊರತೆ:ಈ ಸ್ಥಳ ಜಿಲ್ಲೆಯ ಐತಿಹಾಸಿಕ ಸ್ಥಳದಲ್ಲೊಂದಾಗಿದ್ದರೂ ಸರ್ಕಾರದಿಂದ ಇಲ್ಲಿ ಅಗತ್ಯ ಸೌಲಭ್ಯ ಒದಗಿಸಿಲ್ಲ. ನಿತ್ಯ ನೂರಾರು ಜನ ಭಕ್ತರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಆದರೆ ಇಲ್ಲಿಗೆ ಬರಲು ಮುಖ್ಯವಾಗಿ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲ. ಈ ಐತಿಹಾಸಿಕ ಪ್ರಸಿದ್ಧ ದೇವಾಲಯ ಅಭಿವೃದ್ದಿಗೊಳಿಸಿ ಮೂಲಭೂತ ಸೌಕರ್ಯ ಒದಗಿಸಿದರೆ ಅತ್ಯುತ್ತಮ ಪ್ರವಾಸಿ ತಾಣವಾಗಿ ಹೊರಹೊಮ್ಮಲಿದೆ.