ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಕನ್ನಡ ನಾಮಫಲಕ ಜನ ಜಾಗೃತಿ ಆಂದೋಲನವನ್ನು ಉಡುಪಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಕ.ರ.ವೇ. ಕಚೇರಿಯಿಂದ ಕರಾವಳಿ ಬೈಪಾಸ್, ಬನ್ನಂಜೆ ಮಾರ್ಗವಾಗಿ ಸಿಟಿ ಹಾಗೂ ಸರ್ವಿಸ್ ಬಸ್ ನಿಲ್ದಾಣ ಜೋಡುಕಟ್ಟೆ ಮಾರ್ಗದಲ್ಲಿ ಜಾಗೃತಿ ನಡೆಸಿ, ಅಂಗಡಿ ಮುಂಗಟ್ಟುಗಳಿಗೆ ಕನ್ನಡ ನಾಮಫಲಕ ವಿಚಾರವಾಗಿ ಎಚ್ಚರಿಕೆ ನೀಡಿ, ಕರಪತ್ರಗಳನ್ನು ನೀಡಲಾಯಿತು.ನಂತರ ನಗರದಲ್ಲಿ ಕನ್ನಡ ನಾಮಫಲಕಗಳನ್ನು ಕಡ್ಡಾಯಗೊಳಿಸುವಂತೆ ಆಗ್ರಹಿ ನಗರಸಭೆಗೆ ಮುತ್ತಿಗೆ ಹಾಕಲಾಯಿತು. ಈ ಸಂದರ್ಭ ಪೊಲೀಸರು ಕ.ರ.ವೇ. ಕಾರ್ಯಕರ್ತರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು.ಈ ಸಂದರ್ಭ ಮಾತನಾಡಿದ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ಹೆಗಡೆ, ವೇದಿಕೆಯ ಹೋರಾಟದ ಫಲವಾಗಿ ರಾಜ್ಯ ಸರ್ಕಾರವು ಎಚ್ಚೆತ್ತುಕೊಂಡು ರಾಜ್ಯಾದ್ಯಂತ ಸುಗ್ರೀವಾಜ್ಞೆ ಜಾರಿಗೆ ತಂದು ಅಂಗಡಿ ಮುಂಗಟುಗಳಲ್ಲಿ ಶೇ.60 ಭಾಗ ಕನ್ನಡಕ್ಕೆ ಮೀಸಲು ಘೋಷಿಸಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ ಆಂಗ್ಲ ಮಾಧ್ಯಮ ನಾಮಫಲಕಗಳು ರಾರಾಜಿಸುತ್ತಿವೆ. ಆದುದರಿಂದ ಅಧಿಕಾರಿಗಳು ಕೂಡಲೇ ಎಸಿ ರೂಮ್‌ನಿಂದ ಹೊರಗೆ ಬಂದು ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಉಡುಪಿ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಗೀತಾ ಪಾಂಗಾಳ, ಜಿಲ್ಲಾ ಉಪಾಧ್ಯಕ್ಷ ಸಂತೋಷ ಕುಲಾಲ್, ಕಾರ್ಯದರ್ಶಿ ಸಿದ್ದಣ್ಣ ಪೂಜಾರಿ, ಜಿಲ್ಲಾ ಸಾಂಸ್ಕೃತಿ ಕಾರ್ಯ ದರ್ಶಿ ಕೃಷ್ಣ, ಜಿಲ್ಲಾ ಸಹಕಾರ್ಯದರ್ಶಿ ಗಣೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗೋಪಾಲ, ಮುಖಂಡರಾದ ದೇವಕಿ ಬಾರ್ಕೂರು, ಜ್ಯೋತಿ, ಮೋಹಿನಿ, ಚಂದ್ರಕಲಾ, ಜ್ಯೋತಿ ಆರ್.ಉಡುಪಿ ಹೆಲನ್, ಶಶಿಕಲಾ ನವೀನ್, ಪವಿತ್ರ ಶೆಟ್ಟಿ, ಶಾಲಿನಿ ಸುರೇಶ್ ಮೊದಲಾದವರು ಉಪಸ್ಥಿತರಿದ್ದರು.