ಅಂಕೋಲಾ ಬಸ್ ನಿಲ್ದಾಣದ ಬಳಿ ಜೇನು ದಾಳಿ ಹಲವರಿಗೆ ಗಾಯ

| Published : Mar 10 2025, 12:16 AM IST

ಸಾರಾಂಶ

50ಕ್ಕೂ ಹೆಚ್ಚು ಜನರ ಮೇಲೆ ಜೇನು ದಾಳಿ ನಡೆಸಿದೆ.

ಅಂಕೋಲಾ: ಸುಮಾರು 50ಕ್ಕೂ ಹೆಚ್ಚು ಜನರ ಮೇಲೆ ಜೇನು ದಾಳಿ ನಡೆಸಿದ್ದು, ಅದರಲ್ಲಿ ಓರ್ವ ತೀವ್ರ ಅಸ್ವಸ್ಥಗೊಂಡ ಘಟನೆ ತಾಲೂಕಿನ ಬಸ್ ನಿಲ್ದಾಣ ಬಳಿಯ ಪುರಸಭೆ ರಸ್ತೆಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.

ಪುರಸಭೆ ಎದುರಿನ ಮರದಲ್ಲಿರುವ ಭಾರಿ ಗಾತ್ರದ ಜೇನುಗೂಡಿನ ಗುಂಪಿನಿಂದ ಹಾರಿಬಂದ ಜೇನ್ನೊಣಗಳು ಇದ್ದಕ್ಕಿದ್ದಂತೆ ರಸ್ತೆ ಮೇಲೆ ಸಂಚರಿಸುವ ಜನರ ಮೇಲೆ ಮತ್ತು ಸ್ಥಳೀಯ ಅಂಗಡಿಕಾರರು ಸೇರಿದಂತೆ ಕಾರು ಮತ್ತು ರಿಕ್ಷಾ ಚಾಲಕರ ಮೇಲೆಯು ದಾಳಿ ನಡೆಸಿದೆ.

ಕೆಎಲ್ಇ ಮತ್ತು ಬಸ್ ನಿಲ್ದಾಣ ರಸ್ತೆಯಲ್ಲಿ ಸಂಚರಿಸುವ ಜನರು ಗಲಿಬಿಲಿಗೊಂಡು ಜೇನು ದಾಳಿ ತಪ್ಪಿಸಲು ಓಡಿ ಹೋಗಿದ್ದಾರೆ. ಜೇನು ದಾಳಿಗೊಳಗಾದವರು ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೆರಳಿದ್ದರೆ. ಇನ್ನು ಕೆಲವರು ಮನೆಗೆ ಹೋಗಿದ್ದಾರೆ.

ಇನ್ನು ಓರ್ವನಿಗೆ ಜೇನುನೋಣ ಮುತ್ತಿಕ್ಕಿದ್ದು ಆತನ ಎದುರು ಯಾರು ರಕ್ಷಣೆಗೆ ಹೋಗದ ಹಾಗೆ ಆಗಿತ್ತು. ಸ್ಥಳದಲ್ಲಿದ್ದ ವ್ಯಕ್ತಿಯೋರ್ವ ತಾನು ಉಟ್ಟುಕೊಂಡ ಲುಂಗಿಯನ್ನೇ ಆತನಿಗೆ ಮುಚ್ಚಿಕೊಳ್ಳಲು ಕೊಟ್ಟಿದ್ದಾನೆ. ಕೆಲ ಹೊತ್ತಿನ ಬಳಿಕ ಆತ ಜೇನುದಾಳಿಯಿಂದಾಗಿ ನಿತ್ರಾಣಗೊಂಡ. ಆತನನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಅಂಕೋಲಾ ವಲಯ ಅರಣ್ಯಧಿಕಾರಿ ಪ್ರಮೋದ ನಾಯಕ ತಮ್ಮ ಸಿಬ್ಬಂದಿ ಕಳುಹಿಸಿ ಪರಿಶೀಲನೆ ನಡೆಸಿದ್ದಾರೆ.

ಕೆಎಲ್ಇ ರಸ್ತೆ ತಾತ್ಕಾಲಿಕ ಬಂದ್: ಅಂಕೋಲಾ ಪಟ್ಟಣದಲ್ಲಿ ಜೇನು ಹಾವಳಿ ನಡೆಸಿ ಸಾರ್ವಜನಿಕರಿಗೆ ತೊಂದರೆ ಉಂಟಾದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಕೆಎಲ್ಇ ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

ಜೇನುಗಳು ರಸ್ತೆ ಮೇಲೆ ಸಂಚರಿಸುವವರಿಗೆ ಕಚ್ಚಿ ಗಾಯಗೊಳಿಸಿತು. ಜನರಿಗೆ ಗಾಯಗೊಳಿಸಿರುವುದರಿಂದ ಅಕ್ಕಪಕ್ಕದ ಎಲ್ಲ ಅಂಗಡಿಗಳನ್ನು ಬಂದು ಮಾಡಿ ಹಾಗೂ ಈ ರಸ್ತೆಯ ಮೇಲೆ ಸಂಚಾರ ವ್ಯವಸ್ಥೆಯನ್ನು ಕೂಡ ಎರಡು ಬದಿಯಲ್ಲಿ ಬ್ಯಾರಿಕೆ ಅಳವಡಿಸಿ ಬಂದ ಮಾಡಲಾಗಿತ್ತು.

ಸ್ಥಳದಲ್ಲಿ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಆರ್.ಎಚ್.ನಾಯ್ಕ ಗಸ್ತು ಅರಣ್ಯ ಪಾಲಕ ಲಿಂಗಣ್ಣ, ವಿಕ್ಷಕರಾದ ಗೋಣೆ , ಸುಧಾಕರ ಸ್ಥಳದಲ್ಲಿ ಉಪಸ್ಥಿತರಿದ್ದು ಜನರಿಗೆ ಜೇನುಹುಳಗಳಿಂದ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ವಹಿಸಿ ಈ ರಸ್ತೆಗೆ ಯಾರು ಬಾರದಂತೆ ನೋಡಿಕೊಂಡು ಬದಲಿ ರಸ್ತೆಗೆ ಕಳುಹಿಸಿದ್ದಾರೆ.

ರಾತ್ರಿ ಸಮಯದಲ್ಲಿ ತಾಪಂ ಎದುರು ಕಟ್ಟಿರುವ ಗೂಡಿನಲ್ಲಿನ ಜೇನುನೊಣಗಳನ್ನು ಓಡಿಸುವ ಕಾರ್ಯಾಚರಣೆ ನಡೆಸಲಾಗಿದೆ.