ತಿರುಪತಿ ಪ್ರಸಾದದಲ್ಲಿ ದನದ ಕೊಬ್ಬು, ದೇಶದ್ರೋಹಿ ಕೃತ್ಯ

| Published : Sep 22 2024, 01:48 AM IST

ಸಾರಾಂಶ

ತಿರುಪತಿ ತಿಮ್ಮಪ್ಪನ ಪ್ರಸಾದ ತಯಾರಿಕೆಗೆ ಬಳಸುವ ತುಪ್ಪದಲ್ಲಿ ದನದ ಮತ್ತು ಹಂದಿಯ ಕೊಬ್ಬನ್ನು ಸೇರಿಸಲಾಗಿದೆ ಎಂಬ ಮಾಹಿತಿ ಹೊರಬಂದಿರುವುದು ಆಘಾತಕಾರಿ ಅಂಶವಾಗಿದೆ. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವ ಮುಖ್ಯಮಂತ್ರಿ ಹಿಂದುಗಳ ಪವಿತ್ರ ದೇವಸ್ಥಾನದ ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಸೇರಿಸಿದ್ದು ಹಿಂದೂ ಸಮಾಜಕ್ಕೆ ಬಗೆದ ದ್ರೋಹವಾಗಿದೆ. ಸಮಾಜ ಇದನ್ನು ಹಗುರವಾಗಿ ಪರಿಗಣಿಸದೇ ಎಚ್ಚರಿಕೆಯಿಂದ ಇರಬೇಕೆಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ತಿರುಪತಿ ತಿಮ್ಮಪ್ಪನ ಪ್ರಸಾದ ತಯಾರಿಕೆಗೆ ಬಳಸುವ ತುಪ್ಪದಲ್ಲಿ ದನದ ಮತ್ತು ಹಂದಿಯ ಕೊಬ್ಬನ್ನು ಸೇರಿಸಲಾಗಿದೆ ಎಂಬ ಮಾಹಿತಿ ಹೊರಬಂದಿರುವುದು ಆಘಾತಕಾರಿ ಅಂಶವಾಗಿದೆ. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವ ಮುಖ್ಯಮಂತ್ರಿ ಹಿಂದುಗಳ ಪವಿತ್ರ ದೇವಸ್ಥಾನದ ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಸೇರಿಸಿದ್ದು ಹಿಂದೂ ಸಮಾಜಕ್ಕೆ ಬಗೆದ ದ್ರೋಹವಾಗಿದೆ. ಸಮಾಜ ಇದನ್ನು ಹಗುರವಾಗಿ ಪರಿಗಣಿಸದೇ ಎಚ್ಚರಿಕೆಯಿಂದ ಇರಬೇಕೆಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

ತಾಲೂಕಿನ ಜಕನೂರು ಗ್ರಾಮದ ಮಾದಣ್ಣ ಮದಗೊಂಡೇಶ್ವರ ಸಿದ್ದಾಶ್ರಮದ ಬಂಡಾರ ಸಂಸ್ಕೃತಿ, ಜನಪದ ಮತ್ತು ಡೊಳ್ಳಿನ ಕಲಾಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿ, ಹಿಂದುಗಳ ಆಸ್ತಿಕ ವಿಷಯದಲ್ಲಿ ಚೆಲ್ಲಾಟ ಆಡುತ್ತಿರುವವರನ್ನು ಎಂದಿಗೂ ಕ್ಷಮಿಸಬಾರದು. ಹಿಂದುಗಳ ಆರಾಧ್ಯ ದೈವ ತಿಮ್ಮಪ್ಪನ ಪ್ರಸಾದವನ್ನು ಕಲಬೆರಕೆ ಮಾಡಿದ್ದು ಅಕ್ಷಮ್ಯ ಅಪರಾಧ. ಹಿಂದೂಗಳನ್ನು ಅವರ ಭಾವನೆಗಳನ್ನು ಲೆಕ್ಕಿಸದೇ ಇಂತಹ ಕೃತ್ಯಗಳನ್ನು ನಡೆಸುತ್ತಿರುವವರ ವಿರುದ್ಧ ಸಮಾಜ ಜಾಗೃತವಾಗಿ ತಕ್ಕಪಾಠ ಕಲಿಸಬೇಕು ಎಂದರು.

ನಾಗಮಂಗಲದ ಗಣೇಶ ಉತ್ಸವದ ಮೆರವಣಿಗೆಯಲ್ಲಿ ಗಲಭೆಯಾಗಿ ಆಸ್ತಿ-ಪಾಸ್ತಿ ಕಳೆದುಕೊಂಡ ಅಮಾಯಕ ಹಿಂದೂಗಳನ್ನು ರಾಜ್ಯದ ಕಾಂಗ್ರೆಸ್‌ ಸರ್ಕಾರ ಬಂಧಿಸಿದೆ. ಗಲಭೆ ಮಾಡಿದ ತಪ್ಪಿಸ್ಥರನ್ನು ಕೈಬಿಡಲಾಗಿದೆ. 32 ಹಿಂದೂ ಯುವಕರು ಬಂಧನಕ್ಕೊಳಗಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಕಾಂಗ್ರೆಸ್‌ ಸರ್ಕಾರ ಓಲೈಕೆಯ ರಾಜಕಾರಣ ಮಾಡುತ್ತಿದೆ. ದೇಶ, ಧರ್ಮ, ಸಂಸ್ಕೃತಿಯ ಬಗ್ಗೆ ಮಾತನಾಡಿದರೆ ಕೋಮುವಾದದ ಪಟ್ಟ ಕಟ್ಟಲಾಗುತ್ತಿದೆ. ದೇಶದ ಸ್ವತಂತ್ರಕ್ಕಾಗಿ ಲಕ್ಷಗಟ್ಟಲೇ ದೇಶಭಕ್ತರು ಪ್ರಾಣತ್ಯಾಗ ಮಾಡಿದ್ದಾರೆ. ಆದರೂ ನಮಗೆ ಪೂರ್ಣ ಸ್ವತಂತ್ರ ದೊರೆತಿಲ್ಲ. ಪಾಕಿಸ್ತಾನವನ್ನು ನಮ್ಮ ದೇಶದಲ್ಲಿ ಸೇರಿಸಿಕೊಂಡು ಅಖಂಡ ಭಾರತ ರಚಿಸುತ್ತೇವೆ ಎಂದು ಹೇಳಿದರು.

ಸಿದ್ಧಾಶ್ರಮದ ಮದುಗೊಂಡೇಶ್ವರ ಸ್ವಾಮಿಗಳು ನೇತೃತ್ವದಲ್ಲಿ 29ನೇ ಸಿದ್ಧಸಿರಿ ಕಾರ್ಯಕ್ರಮ ನಡೆಯಿತು. ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮಿಗಳು, ಓಲೇಮಠದ ಚೆನ್ನಬಸವ ಸ್ವಾಮಿಗಳು, ಕೊಣ್ಣೂರಿನ ವಿಶ್ವಪ್ರಭುದೇವ ಸ್ವಾಮಿಗಳು, ವಿಜಯಪುರ ಶಾಸಕ ಯತ್ನಾಳ, ಎಂಎಲ್‌ಸಿ ಹಣಮಂತ ನಿರಾಣಿ, ತೌಫಿಕ್‌ ಪಾರ್ಥನಳ್ಳಿ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.---

ಬಾಕ್ಸ್‌

ಈಶ್ವರಪ್ಪರನ್ನು ಸಿಎಂ ಮಾಡುತ್ತೇವೆ: ಯತ್ನಾಳಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ ಎಂದು ವಿಜಯಪುರದ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹೇಳಿದರು.

ತಾಲೂಕಿನ ಜಕನೂರು ಗ್ರಾಮದ ಮಾದಣ್ಣ ಮದಗೊಂಡೇಶ್ವರ ಸಿದ್ದಾಶ್ರಮದ ಬಂಡಾರ ಸಂಸ್ಕೃತಿ, ಜನಪದ ಮತ್ತು ಡೊಳ್ಳಿನ ಕಲಾಮಹೋತ್ಸವದಲ್ಲಿ ವಿಶೇಷ ಆಹ್ವಾನಿತರಾಗಿ ಮಾತನಾಡಿದ ಅವರು, ಈಶ್ವರಪ್ಪ ಅವರಿಗೆ ಅನ್ಯಾಯವಾಗಿದೆ. ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಮಾಡಿದಾಗ ಅವರಿಗೆ ತೊಂದರೆ ನೀಡಲಾಗಿದೆ ಎಂಬ ವಿಷಯ ಎಲ್ಲರಿಗೂ ತಿಳಿದಿದೆ. ರಮೇಶ ಜಾರಕಿಹೊಳಿ ಮತ್ತು ಇನ್ನೂ ಹಲವು ಮುಖಂಡರು ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಸರಿಯಾದ ಸಮಯಕ್ಕೆ ಕಾಯುತ್ತಿದ್ದೇವೆ. ಸಿದ್ಧರಾಮಯ್ಯ ಅವರನ್ನು ಬಿಟ್ಟರೇ ಈಶ್ವರಪ್ಪ ಅವರೇ ಮುಂದಿನ ಮುಖ್ಯಮಂತ್ರಿಗಳಾಗಲಿದ್ದಾರೆ. ನಾವು ಅವರನ್ನು ಬಿಟ್ಟುಕೊಡುವುದಿಲ್ಲ ಎಂದರು.