ಹೆಚ್ಚಿನ ಇಳುವರಿ ಪಡೆಯಲು ಜೇನುಹುಳು ಸಾಕಾಣಿಕೆ ಮಾಡಿ: ಡಾ.ಜಿ.ಎಚ್.ಯೋಗೇಶ್

| Published : Mar 15 2024, 01:21 AM IST

ಹೆಚ್ಚಿನ ಇಳುವರಿ ಪಡೆಯಲು ಜೇನುಹುಳು ಸಾಕಾಣಿಕೆ ಮಾಡಿ: ಡಾ.ಜಿ.ಎಚ್.ಯೋಗೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಜೇನು ಸಾಕಾಣಿಕೆಯಿಂದ ಮನೆಗೆ ಬೇಕಾಗುವ ಶುದ್ಧ ಜೇನುತುಪ್ಪ ಉತ್ಪಾದನೆ ಜೊತೆಗೆ ಹಲವು ಬೆಳೆಗಳಲ್ಲಿ ನೈಸರ್ಗಿಕ ಪರಾಗಸ್ಪರ್ಶದ ಮೂಲಕ ಹೂಗಳ ಕಚ್ಚುವಿಕೆ ಸಂಖ್ಯೆ ಹೆಚ್ಚಾಗಿ, ಒಟ್ಟಾರೆ ಬೆಳೆಗಳ ಇಳುವರಿ ಹೆಚ್ಚಿಸಬಹುದು. ಜೇನು ಸಾಕಾಣಿಕೆ ಮಾಡುವ ಜಮೀನುಗಳಲ್ಲಿ ಕೀಟನಾಶಕಗಳ ಸಿಂಪರಣೆ ಮಾಡಬಾರದು. ಇದರಿಂದ ಜೇನುಹುಳುಗಳು ಸಾಯುತ್ತವೆ.

ಕನ್ನಡಪ್ರಭ ವಾರ್ತೆ ಮೈಸೂರು

ತೋಟಗಾರಿಕೆ ಬೆಳೆಗಳಲ್ಲಿ ಹೆಚ್ಚಿನ ಇಳುವರಿ ಪಡೆಯಲು ಜೇನುಹುಳು ಸಾಕಾಣಿಕೆಗೆ ರೈತರು ಮುಂದಾಗಬೇಕು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕ ಡಾ.ಜಿ.ಎಚ್.ಯೋಗೇಶ್ ತಿಳಿಸಿದರು.

ಮೈಸೂರು ತಾಲೂಕು ನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಜೇನು ಸಾಕಾಣಿಕೆ- ಕೃಷಿಯಲ್ಲಿ ಪ್ರಾಮುಖ್ಯತೆ, ಜೇನು ಉತ್ಪಾದನೆ, ಸಂಸ್ಕರಣೆ ಮತ್ತು ಮಾರಾಟ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜೇನು ಸಾಕಾಣಿಕೆಯಿಂದ ಮನೆಗೆ ಬೇಕಾಗುವ ಶುದ್ಧ ಜೇನುತುಪ್ಪ ಉತ್ಪಾದನೆ ಜೊತೆಗೆ ಹಲವು ಬೆಳೆಗಳಲ್ಲಿ ನೈಸರ್ಗಿಕ ಪರಾಗಸ್ಪರ್ಶದ ಮೂಲಕ ಹೂಗಳ ಕಚ್ಚುವಿಕೆ ಸಂಖ್ಯೆ ಹೆಚ್ಚಾಗಿ, ಒಟ್ಟಾರೆ ಬೆಳೆಗಳ ಇಳುವರಿ ಹೆಚ್ಚಿಸಬಹುದು. ಜೇನು ಸಾಕಾಣಿಕೆ ಮಾಡುವ ಜಮೀನುಗಳಲ್ಲಿ ಕೀಟನಾಶಕಗಳ ಸಿಂಪರಣೆ ಮಾಡಬಾರದು. ಇದರಿಂದ ಜೇನುಹುಳುಗಳು ಸಾಯುತ್ತವೆ ಎಂದರು.

ಜೇನು ತಜ್ಞ ರವಿ ಮಾತನಾಡಿ, ಜೇನು ನೊಣಗಳ ಗುರುತಿಸುವಿಕೆ, ಜೇನುತುಪ್ಪ ಉತ್ಪತ್ತಿಗೆ ಬೇಕಾಗುವ ಸಮಯ, ಜೇನು ಪೆಟ್ಟಿಗೆಯಲ್ಲಿ ರಾಣಿಜೇನು, ಕೆಲಸಗಾರ ಜೇನುಗಳ ಪಾತ್ರ, ಜೇನು ನೊಣಗಳಿಂದ ಮೇಣದ ಉತ್ಪತ್ತಿ, ವಿವಿಧ ಬೆಳೆಗಳಲ್ಲಿ ಇಡಬಹುದಾದ ಜೇನು ಪೆಟ್ಟಿಗೆಗಳ ಸಂಖ್ಯೆ, ಜೇನುತುಪ್ಪ ತೆಗೆಯುವ ಯಂತ್ರದ ಕುರಿತು ತಾಂತ್ರಿಕ ಮಾಹಿತಿ ಹಂಚಿಕೊಂಡರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ. ರುದ್ರೇಶ್ ಮಾತನಾಡಿ, ತೋಟಗಾರಿಕೆ ಇಲಾಖೆಯಿಂದ ಜೇನು ಸಾಕಾಣಿಕೆ ಪೆಟ್ಟಿಗೆಗೆ ಸಾಮಾನ್ಯ ರೈತರಿಗೆ 3375 ರೂ. ಮತ್ತು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ರೈತರಿಗೆ 4050 ರು. ಸಹಾಯಧನ ನೀಡುತ್ತಿರುವುದಾಗಿ ತಿಳಿಸಿದರು.

ನಂಜನಗೂಡು ತಾಲೂಕು ಹೆಡಿಯಾಲ ಗ್ರಾಮದ ಜೇನು ಕೃಷಿಕ ಜಯಶಂಕರ ಅವರು, ಜೇನುಗೂಡಿನಲ್ಲಿ ಜೇನು ನೊಣಗಳ ಗುರುತಿಸುವಿಕೆ, ಎಚ್ಚರಿಕೆ ಕ್ರಮಗಳು, ಜೇನುತುಪ್ಪ ತೆಗೆಯುವ ವಿಧಾನ, ಜೇನುನೊಣಗಳ ಸಂಖ್ಯೆ ಹೆಚ್ಚಾದಾಗ ಇನ್ನೊಂದು ಪೆಟ್ಟಿಗೆಗೆ ವರ್ಗಾಯಿಸುವ ವಿಧಾನ ಹಾಗೂ ನಿರ್ವಹಣಾ ವಿಧಾನಗಳ ಕುರಿತು ಜೇನುಪೆಟ್ಟಿಗೆಯೊಂದಿಗೆ ಪ್ರಾತ್ಯಕ್ಷಿಕೆ ಮಾಡಿ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.

ಮುದ್ದಹಳ್ಳಿ ಗ್ರಾಮದ ಪ್ರಗತಿಪರ ರೈತ ಚಿಕ್ಕಸ್ವಾಮಿ ಮಾತನಾಡಿ, ತಮ್ಮ ಜಮೀನಿನಲ್ಲಿ 14 ಸಂಖ್ಯೆಯ ಜೇನುಪೆಟ್ಟಿಗೆ ಸಾಗಾಣಿಕೆ ಮಾಡುತ್ತಿದ್ದು, ತೆಂಗಿನಲ್ಲಿ ಹೆಚ್ಚಿನ ಸಂಖ್ಯೆಯ ತೆಂಗಿನ ಕಾಯಿ ಉತ್ಪತ್ತಿಯಾಗುವುದರ ಜೊತೆಗೆ ಜೇನುತುಪ್ಪವನ್ನು ಸಹ ತೆಗೆದು ಮಾರಾಟ ಮಾಡುವ ಮೂಲಕ ಹೆಚ್ಚಿನ ಆದಾಯ ಪಡೆಯುತ್ತಿರುವ ಬಗ್ಗೆ ಅನುಭವ ಹಂಚಿಕೊಂಡರು.

ಸಹಾಯಕ ಕೃಷಿ ನಿರ್ದೇಶಕರಾದ ಎಸ್.ಬಿ. ಮಮತಾ, ಎಚ್.ಬಿ. ಮಧುಲತಾ ಇದ್ದರು.