ಸಾರಾಂಶ
ಮಹದೇವಪ್ಪ ಎಂ. ಸ್ವಾಮಿ
ಕನ್ನಡಪ್ರಭ ವಾರ್ತೆ ಶಿರಹಟ್ಟಿಶಿರಹಟ್ಟಿ ಪಟ್ಟಣದ ಮಾಗಡಿ ರಸ್ತೆಗೆ ಹೊಂದಿಕೊಂಡಿರುವ ಎಫ್.ಎಂ. ಡಬಾಲಿ ಹೈಸ್ಕೂಲ್ ಮೈದಾನದಲ್ಲಿ ಕಿಡಿಗೇಡಿಗಳು ನಿತ್ಯ ರಾತ್ರಿವೇಳೆ ಸಾರಾಯಿ ಕುಡಿದು ಶಾಲಾ ಮೈದಾನದಲ್ಲಿಯೇ ಬಾಟಲ್ ಮತ್ತು ಪೌಚ್‌ಗಳನ್ನು ಎಲ್ಲೆಂದರಲ್ಲೇ ಬೀಸಾಡುತ್ತಾರೆ. ಓದು, ಬರಹ ಬಿಟ್ಟು ನಿತ್ಯ ಬೆಳಗ್ಗೆ ವಿದ್ಯಾರ್ಥಿಗಳು ಸ್ವಚ್ಛ ಮಾಡುವಂತಾಗಿದೆ.
ಮೈದಾನದಲ್ಲಿ ಬಿದ್ದಿರುವ ಸಾರಾಯಿ ಬಾಟಲ್, ಸಿಗರೇಟ್ ಪ್ಯಾಕ್, ಗುಟಕಾ ಮತ್ತು ತಂಬಾಕುಗಳ ಚೀಟಿಗಳು ಮಕ್ಕಳನ್ನು ಸ್ವಾಗತಿಸುತ್ತಿವೆ. ಇನ್ನೂ ಬೆಳಗಿನ ಜಾವ ವಾಯು ವಿಹಾರಕ್ಕೆ ಬರುವ ಜನತೆಗೂ ದೊಡ್ಡ ತಲೆನೋವಾಗಿದ್ದು, ಬಾಟಲ್ ಒಡೆದು ಎಲ್ಲೆಂದರಲ್ಲಿ ಬೀಸಾಡುತ್ತಿದ್ದು, ವಾಯು ವಿಹಾರಕ್ಕೆ ಬಂದವರು ಗಾಜು ತುಳಿದು ನೋವು ಮಾಡಿಕೊಳ್ಳುವಂತಾಗಿದೆ.ಹೈಸ್ಕೂಲ್ ಮೈದಾನದ ಸುತ್ತಲೂ ಕಾಂಪೌಂಡ್ ಇಲ್ಲದ ಕಾರಣ ಕುಡುಕರಿಗೆ ಸಾರಾಯಿ ಕುಡಿಯಲು ಯೋಗ್ಯ ಸ್ಥಳವಾಗಿದ್ದು, ಯಾರ ಭಯವೂ ಇಲ್ಲದೇ ಕುಡಿದು ತೂರಾಡುವುದು ಸಾಮಾನ್ಯವಾಗಿದೆ. ವಿದ್ಯಾರ್ಥಿಗಳು ನಿತ್ಯ ಶಾಲೆಗೆ ಬರುವಾಗ ಮತ್ತು ಮೈದಾನದಲ್ಲಿ ಆಟವಾಡುವಾಗ ಬೇಸರಪಟ್ಟುಕೊಳ್ಳುವ ವಾತಾವರಣ ನಿರ್ಮಾಣವಾಗಿದೆ.ಸಂಜೆ ಕತ್ತಲು ಆವರಿಸುತ್ತಿದ್ದಂತೆ ದ್ವಿಚಕ್ರ ವಾಹನದೊಂದಿಗೆ ಮೈದಾನಕ್ಕೆ ಸಾರಾಯಿ ಬಾಟಲ್‌ಗಳನ್ನು ತೆಗೆದುಕೊಂಡು ಬಂದು ಗುಂಪು ಗುಂಪಾಗಿ ಕುಳಿತು ಮೋಜುಮಸ್ತಿ ಮಾಡುವುದರ ಜೊತೆಗೆ ನಶೆ ಏರಿದ ನಂತರ ಹೋಗುವಾಗ ಬಾಟಲ್‌ಗಳನ್ನು ಒಡೆದು ಹೋಗುವುದು ಇಲ್ಲಿ ಸರ್ವೇಸಾಮಾನ್ಯವಾಗಿದೆ.
ಅಕ್ರಮ ಸಾರಾಯಿ ಮಾರಾಟಶಿರಹಟ್ಟಿ ಪಟ್ಟಣ ಸೇರಿದಂತೆ ತಾಲೂಕಿನ ಹೊಸಳ್ಳಿ, ಕಡಕೋಳ, ಜಲ್ಲಿಗೇರಿ, ಕುಸ್ಲಾಪೂರ, ಮಾಚೇನಹಳ್ಳಿ, ಮಜ್ಜೂರ ಗ್ರಾಮಗಳು ಸೇರಿದಂತೆ ವಿವಿಧೆಡೆ ರಸ್ತೆ ಅಕ್ಕಪಕ್ಕದಲ್ಲಿ ಇಟ್ಟುಕೊಂಡು ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದು, ಅಬಕಾರಿ ಇಲಾಖೆ ಅಧಿಕಾರಿಗಳು ಕಂಡೂ ಕಾಣದಂತೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.
ಬಹುತೇಕ ಗ್ರಾಮಗಳಲ್ಲಿಯ ಬೀಡಿ ಅಂಗಡಿ, ಕಿರಾಣಿ ಅಂಗಡಿ, ಅನೇಕರ ಮನೆಗಳಲ್ಲಿಯೂ ಅಕ್ರಮ ಸರಾಯಿ ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡಲಾಗುತ್ತಿದೆ. ಅಬಕಾರಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಅಕ್ರಮ ಸಾರಾಯಿ ಮಾರಾಟಕ್ಕೆ ಕುಮ್ಮಕ್ಕು ನೀಡುತ್ತಿರುವುದರಿಂದ ಶಾಲೆ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಕೂಡ ಕುಡಿತದ ಜಟಕ್ಕೆ ಅಂಟಿಕೊಂಡು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಮಹಿಳೆಯರು ಆರೋಪಿಸುತ್ತಿದ್ದಾರೆ. ಎಷ್ಟೋ ಬಡ ಕುಟುಂಬಗಳು ಕುಡಿತದ ಚಟಕ್ಕೆ ಬಿದ್ದು ಬೀದಿಪಾಲಾಗಿವೆ.ಅಬಕಾರಿ ಇಲಾಖೆ ಅಧಿಕಾರಿಗಳ ಕಣ್ಣೆದುರೆ ಅಕ್ರಮ ಸಾರಾಯಿ ಸಾಗಾಟ ಮಾಡುತ್ತಿದ್ದು, ನಮಗೇನು ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದು, ಇದೇ ವ್ಯವಸ್ಥೆ ಮುಂದುವರಿದರೆ ವಿದ್ಯಾರ್ಥಿಗಳ ಬಾಳು ಕೂಡಾ ಹಾಳಾಗುವುದರಲ್ಲಿ ಸಂದೇಹವೇ ಇಲ್ಲ. ಇನ್ನಾದರೂ ಅಬಕಾರಿ ಇಲಾಖೆ ಅಧಿಕಾರಿಗಳು ಕಾನೂನು ಬಾಹಿರ ಚಟುವಟಿಕೆಗೆ ತಡೆಯೊಡ್ಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕ್ರಮಕೈಗೊಳ್ಳಲ
ಿಪಟ್ಟಣದ ಎಫ್.ಎಂ. ಡಬಾಲಿ ಹೈಸ್ಕೂಲ್ ಮೈದಾನದಲ್ಲಿ ಕಿಡಿಗೇಡಿಗಳು ನಿತ್ಯ ರಾತ್ರಿವೇಳೆ ಸಾರಾಯಿ ಕುಡಿದು ಎಲ್ಲೆಂದರಲ್ಲಿ ಬಾಟಲ್, ಪೌಚ್ ಬೀಸಾಡುತ್ತಿದ್ದು, ಹೈಸ್ಕೂಲ್ ಮತ್ತು ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಹಿಂಸೆಯಾಗುತ್ತಿದೆ. ಜೊತೆಗೆ ನಿತ್ಯ ಬೆಳಗಿನ ಸಮಯದಲ್ಲಿ ವಾಯು ವಿಹಾರಕ್ಕೆ ಬರುವವರಿಗೂ ತೀವ್ರ ತೊಂದರೆಯಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು.ಸಂತೋಷ ಕುರಿ ಪಟ್ಟಣ ಪಂಚಾಯತ್ ಮಾಜಿ ಉಪಾಧ್ಯಕ್ಷ