17ರಂದು ಬೀರಲಿಂಗೇಶ್ವರ ನೂತನ ದೇವಾಲಯದ ಸಮಾರಂಭ

| Published : Feb 15 2024, 01:15 AM IST

ಸಾರಾಂಶ

ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವಸ್ಥಾನದ ನೂತನ ಆಲಯ ಪ್ರವೇಶ, ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವತಾ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭ

ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದ ಕುರುಬರ ಬೀದಿಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವಸ್ಥಾನದ ನೂತನ ಆಲಯ ಪ್ರವೇಶ, ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವತಾ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭವು ಫೆ. 17ರಿಂದ 19ರ ವರೆಗೆ ನಡೆಯಲಿದೆ ಎಂದು ಬೀರಲಿಂಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್‌ನ ಅಧ್ಯಕ್ಷ ಸಿ.ಕೆ.ಎಚ್.ಮಹೇಶ್ವರಪ್ಪ ತಿಳಿಸಿದ್ದಾರೆ.

ಫೆ.17ರಂದು ಗೋಧೂಳಿ ಲಗ್ನದಲ್ಲಿ ದೀಪಾರಾಧನೆ, ವಿಶ್ವಕ್ಸೇನ ಪೂಜೆ, ಗಣಪತಿ ಆರಾಧನೆ, ಸಭಾಪ್ರಾರ್ಥನೆ, ಭಗವತ್ ಶ್ರೀ ವಾಸುದೇವ ಪುಣ್ಯಾಹ ವಾಚನ, ಮಹಾಸಂಕಲ್ಪ, ಸ್ವಸ್ತಿ ವಾಚನ, ರಕ್ಷಾಬಂಧನ, ಋತ್ವಿಗ್ವರಣ, ಮೃತ್ತಿಕಾಸಂಗ್ರಹಣ, ಅಂಕುರಾರ್ಪಣ, ಗಂಗಾಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.

ಫೆ.18ರಂದು ಪ್ರಾತಕಾಲ ಗಂಗಾಪೂಜೆ ನಂತರ 108ಕುಂಭಗಳೊಂದಿಗೆ ಯಾಗಶಾಲ ಪ್ರವೇಶ, ಗೋಪೂಜೆ, ಕಳಸ ಸ್ಥಾಪನೆ, ಮಂಡಲರಾಧನೆ, ಪಂಚಗವ್ಯಸ್ಥಾಪನೆ, ಮಧ್ಯಾಹ್ನ ಪ್ರತಿಷ್ಠಾಪನಾ ಮೂರ್ತಿಗೆ ವಿವಿಧ ಅಧಿವಾಸಗಳು, ಅಗ್ನಿ ಪ್ರತಿಷ್ಟೆ, ಗಣ ಹೋಮ, ರಾಕ್ಷೋಜ್ಞ ಹೋಮ, ವಾಸ್ತುಶಾಂತಿ, ಅಷ್ಠದಿಕ್ಪಾಲಕಹೋಮ, ಲಘು ಪುರ್ಣಾಹುತಿ, ಬಲಿ ಪ್ರದಾನ, ಮಹಾಮಂಗಳಾರತಿ ನಡೆದು ಮಧ್ಯಾಹ್ನ ಒಂದು ಗಂಟೆಯಿಂದ ಶ್ರೀ ಬೀರಲಿಂಗೇಶ್ವರ ಹಾಗೂ ವಿವಿದೆಡೆಗಳಿಂದ ಆಗಮಿಸಲಿರುವ ದೇವತಾಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿಕೊಂಡು ಪಟ್ಟಣದ ಶ್ರೀ ಕೆರೆಏರಿ ಚೌಡೇಶ್ವರಿ ದೇವಸ್ಥಾನದಿಂದ ಹೊರಟು ಪಟ್ಟಣದ ಪ್ರಮುಖ ರಾಜ ಬೀದಿಗಳಲ್ಲಿ ಭವ್ಯವಾದ ಮೆರವಣಿಗೆ ನಡೆಸಿ ನೂತನ ದೇವಾಲಯಕ್ಕೆ ಕರೆತರಲಾಗುವುದು.

ಅದೇ ದಿನ ಸಂಜೆ 7ಗಂಟೆಯಿಂದ ಧಾರ್ಮಿಕ ಸಮಾರಂಭ ನಡೆಯಲಿದ್ದು, ಸಾನ್ನಿಧ್ಯವನ್ನು ಹೊಸದುರ್ಗ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಚನ್ನಗಿರಿ ಹಾಲಸ್ವಾಮೀಜಿ, ವಿರಕ್ತ ಮಠದ ಬಸವ ಜಯಚಂದ್ರ ಸ್ವಾಮೀಜಿ, ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ, ಚಂದ್ರಗಿರಿಮಠದ ಶ್ರೀ ಮುರುಳೀಧರ ಸ್ವಾಮೀಜಿ, ವಿ.ಬನ್ನಿಹಟ್ಟಿಯ ಚಂದ್ರಯ್ಯ ಒಡೆಯರ್ ಇವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ತಹಸೀಲ್ದಾರ್ ಎರ್ರಿಸ್ವಾಮಿ, ಡಿವೈಎಸ್ಪಿ ಪ್ರಶಾಂತ್ ಜಿ.ಮುನ್ನೋಳಿ, ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ.ಕಟ್ಟಿಮನಿ, ಸದಸ್ಯ ಪಟ್ಲಿನಾಗರಾಜ್, ಜಯಲಕ್ಷ್ಮಿ, ಪಾರಿ ಪರಮೇಶ್, ಚಿಕ್ಕಪ್ಪ ಇವರು ಭಾಗವಹಿಸಲಿದ್ದಾರೆ.

ಫೆ.19ರಂದು ಪ್ರಾತಕಾಲ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ದೇವತಾಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ವಿಮಾನ ಗೋಪುರ ಕಳಸ ಪ್ರತಿಷ್ಠಾಪನೆ, ಜೀವತತ್ವನ್ಯಾಸ ಹೋಮ, ಕಳಕರ್ಷಣ ಹೋಮ, ನಯನೋನ್ಮೀಲನ ಹೋಮ, ಜಯಾದಿಹೋಮ, ಶಾಂತಿಹೋಮ, ಪ್ರಾಯಶ್ಚಿತ್ತಹೋಮ, ಮಹಾಪೂರ್ಣಾಹುತಿ, ಕುಂಭ ಉದ್ಘಾಟನೆ ನಡೆದು ಮಹಾಕುಂಭಾಭಿಷೇಕ, ಪಂಚಾಮೃತ, ಅಷ್ಟಾವಧಾನ, ಮಹಾಮಂಗಳಾರತಿ, ಧೇನುಪೂಜಾ, ಕದಳಿ ಛೇದನ, ದರ್ಪಣ ದರ್ಶನ ನಡೆಯಲಿದೆ.

ಅದೇ ದಿನ ಬೆಳಗ್ಗೆ 11.30ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕಾಗಿನೆಲೆ ಕ್ಷೇತ್ರದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಹೊಸದುರ್ಗದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ತಿಂಥಣಿ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಕೃಷ್ಣರಾಜನಗರದ ಶ್ರೀ ಶಿವಾನಂದ ಸ್ವಾಮೀಜಿ, ಶಿರೂರು ಬ್ರಹ್ಮ ವಿದ್ಯಾಶ್ರಮದ ಶ್ರೀ ಚಿನ್ಮಯನಂದ ಸ್ವಾಮೀಜಿ, ಧರ್ಮಸ್ಥಳದ ಧರ್ಮದರ್ಶಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರು ವಹಿಸಲಿದ್ದು, ಸಮಾರಂಭದ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕ ಬಸವರಾಜ ವಿ.ಶಿವಗಂಗಾ ವಹಿಸುವರು.

ಮುಖ್ಯ ಅತಿಥಿಗಳಾಗಿ ಸಂಸದ ಜಿ.ಎಂ.ಸಿದ್ದೇಶ್ವರ್, ಜಿಲ್ಲಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ವಡ್ನಾಳ್ ರಾಜಣ್ಣ, ಮಹಿಮಾ ಜೆ.ಪಟೇಲ್, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಬೈರತಿ ಬಸವರಾಜ್, ಎಚ್.ಎಂ.ರೇವಣ್ಣ, ಬಂಡೆಪ್ಪ ಕಾಶೆಂಪುರ್, ಎಚ್.ವಿಶ್ವನಾಥ್, ಜಿ.ಬಿ.ವಿನಯ್ ಕುಮಾರ್, ಆರ್.ಎಂ.ರವಿ ಸೇರಿ ಇನ್ನು ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.