ಚಾಮುಂಡಿಬೆಟ್ಟ ಪ್ರಾಧಿಕಾರವೂ ಇಲ್ಲ, ಚಿತ್ರನಗರಿಯ ಸದ್ದು ಇಲ್ಲ!

| Published : Feb 15 2024, 01:15 AM IST

ಚಾಮುಂಡಿಬೆಟ್ಟ ಪ್ರಾಧಿಕಾರವೂ ಇಲ್ಲ, ಚಿತ್ರನಗರಿಯ ಸದ್ದು ಇಲ್ಲ!
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದರಾಮಯ್ಯ ಅವರು ಈ ಹಿಂದೆ 2013-18 ರ ಅವಧಿಯಲ್ಲಿ ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಸ್ವಕ್ಷೇತ್ರ ವರುಣ ವ್ಯಾಪ್ತಿಯ ಇಮ್ಮಾವಿನಲ್ಲಿ ಚಿತ್ರನಗರಿ ಸ್ಥಾಪಿಸುವುದಾಗಿ ಸ್ಥಾಪಿಸುವುದಾಗಿ ಪ್ರಕಟಿಸಿದ್ದರು. ನಂತರ ಬಂದ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ರಾಮನಗರಕ್ಕೆ ಸ್ಥಳಾಂತರಿಸುವ ಪ್ರಸ್ತಾಪವಾಯಿತು.

ಅಂಶಿ ಪ್ರಸನ್ನಕುಮಾರ್

ಕನ್ನಡಪ್ರಭ ವಾರ್ತೆ ಮೈಸೂರು

ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಬಾರಿಯ ಬಜೆಟ್ ನಲ್ಲಿ ಘೋಷಿಸಿದ್ದ ಬಹುತೇಕ ಯೋಜನೆಗಳು ಕಾರ್ಯಗತವಾಗಿಲ್ಲ. ಅವುಗಳ ಪೈಕಿ ಚಾಮುಂಡಿಬೆಟ್ಟ ಪ್ರಾಧಿಕಾರ ರಚನೆಯಾಗಿಲ್ಲ. ಇಮ್ಮಾವು ಬಳಿ ಚಿತ್ರನಗರಿ ನಿರ್ಮಾಣದ ಸದ್ದು ಇಲ್ಲ.

ನಾಡಿನ ಅದಿದೇವತೆ ಶ್ರೀ ಚಾಮುಂಡೇಶ್ವರಿ ದೇವಿ ನೆಲೆಸಿರುವ ಚಾಮುಂಡಿಬೆಟ್ಟದ ಸಮಗ್ರ ಅಭಿವೃದ್ಧಿಗೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು ಎಂಬುದು ಬಹುದಿನಗಳ ಹಾಗೂ ಬಹುಜನರ ಬೇಡಿಕೆಯಾಗಿತ್ತು. ಇದಕ್ಕೆ ಕಳೆದ ಬಜೆಟ್ ನಲ್ಲಿ ಸಿದ್ದರಾಮಯ್ಯ ಅವರು ಅಸ್ತು ಎಂದಿದ್ದರು. ಆದರೆ ಈವರೆಗೆ ಪ್ರಾಧಿಕಾರ ರಚನೆಯಾಗಿಲ್ಲ.

ಸಿದ್ದರಾಮಯ್ಯ ಅವರು ಈ ಹಿಂದೆ 2013-18 ರ ಅವಧಿಯಲ್ಲಿ ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಸ್ವಕ್ಷೇತ್ರ ವರುಣ ವ್ಯಾಪ್ತಿಯ ಇಮ್ಮಾವಿನಲ್ಲಿ ಚಿತ್ರನಗರಿ ಸ್ಥಾಪಿಸುವುದಾಗಿ ಸ್ಥಾಪಿಸುವುದಾಗಿ ಪ್ರಕಟಿಸಿದ್ದರು. ನಂತರ ಬಂದ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ರಾಮನಗರಕ್ಕೆ ಸ್ಥಳಾಂತರಿಸುವ ಪ್ರಸ್ತಾಪವಾಯಿತು. ನಂತರ ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಮೂರು ಮುಕ್ಕಾಲು ವರ್ಷ ಆಡಳಿತ ನಡೆಸಿದರೂ ಈ ಬಗ್ಗೆ ಗಮನಹರಿಸಲಿಲ್ಲ. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾದರು. ಸಾರ್ವಜನಿಕ, ಖಾಸಗಿ, ಸಹಭಾಗಿತ್ವದಲ್ಲಿ ಚಿತ್ರನಗರಿ ನಿರ್ಮಿಸುವುದಾಗಿ ಘೋಷಿಸಿದ್ದರು. ಆದರೆ ಈವರೆಗೆ ಅದರ ಸದ್ದು ಇಲ್ಲ.

ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರವನ್ನು ದೆಹಲಿಯ ಪ್ರಗತಿ ಮೈದಾನ ಮಾದರಿ ಅಭಿವೃದ್ಧಿಪಡಿಸಲಾಗುವುದು ಎಂದು ಪ್ರಕಟಿಸಿದ್ದರು. ಅಲ್ಲಿ ಏಕತಾಮಾಲ್ ನಿರ್ಮಾಣದ ಸಂಬಂಧ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ರಾಜ್ಯದ ಶ್ರೀಮಂತ ಕಲೆ ಮತ್ತು ಸಾಂಸ್ಕೃತಿಕ ಪರಂಪರೆ ಪ್ರದರ್ಶಿಸಲು ಚಾಮುಂಡಿ ವಿಹಾರ ಕ್ರೀಡಾಂಗಣದ ಬಳಿ ಪುರಾತತ್ವ ಇಲಾಖೆಯ ಸುಪರ್ದಿನಲ್ಲಿರುವ ಎರಡೂವರೆ ಎಕರೆ ಜಮೀನಿನಲ್ಲಿ ಆಗ್ಯೂಮೆಂಟೆಡ್ ರಿಯಾಲಿಟಿ- ಎಆರ್ ಮತ್ತು ವರ್ಚುವಲ್ ರಿಯಾಲಿಟಿ- ವಿಆರ್ ತಂತ್ರಋಜ್ಞಾನದ ಅಂತಾರಾಷ್ಟ್ರೀಯ ಗುಣಮಟ್ಟದ ಕರ್ನಾಟಕ ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಕಲಾ ಗ್ಯಾಲರಿ ನಿರ್ಮಿಸುವುದಾಗಿ ಪ್ರಕಟಿಸಲಾಗಿತ್ತು. ಈವರೆಗೆ ಆಗಿರುವ ಪ್ರಗತಿ ಎಂದರೇ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವ ಕಾರ್ಯ ನಡೆಯುತ್ತಿರುವುದು ಅಷ್ಟೇ.

ಕೂರ್ಗಳ್ಳಿಯ ವನ್ಯಜೀವಿಗಳ ಪುನರ್ವಸತಿ ಕೇಂದ್ರದ ಬಲವರ್ಧನೆ ಮಾಡಲಾಗುವುದು ಎಂದಿದ್ದರು. ಇನ್ನೂ ಏನೂ ಆಗಿಲ್ಲ. ಕಿದ್ವಾಯಿ ಮಾದರಿ ಕ್ಯಾನ್ಸರ್ ಘಟಕಕ್ಕೆ 20 ಕೋಟಿ ರು. ಮೀಸಲಿಡಲಾಗುವುದು ಎಂದಿದ್ದರು. ಈ ಘಟಕಕ್ಕೆ ಶಂಕುಸ್ಥಾಪನೆ ನರವೇರಿದೆ.

ಮೈಸೂರು ರೇಷ್ಮೆ ಬಿತ್ತನೆ ಪ್ರದೇಶದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ, ಇದರಿಂದ ಉತ್ತಮ ಗುಣಮಟ್ಟದ ರೋಗರಹಿತ ಮೈಸೂರು ಬಿತ್ತನೆಗೂಡುಗಳನ್ನು ಉತ್ಪಾದಿಸಿ, ರೇಷ್ಮೆ ಬೆಳೆಗಾರರಿಗೆ ವಿತರಿಸಲಾಗುವುದು ಮತ್ತು ಉತ್ತಮ ಗುಣಮಟ್ಟದ ವಿಶ್ರ ತಳಿ ಕಚ್ಚಾ ರೇಷ್ಮೆ ಉತ್ಪಾದಿಸಲು ಅನುಕೂಲವಾಗಲಿದೆ ಎಂದು ಹೇಳಲಾಗಿತ್ತು. ಆದರೆ ಇನ್ನೂ ಕಾರ್ಯಗತವಾಗಿಲ್ಲ,

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸುಟ್ಟ ಗಾಯಗಳ ಚಿಕಿತ್ಸಾ ಘಟಕ ಸ್ಥಾಪನೆಗೆ 155 ಕೋಟಿ ರು. ಅನುದಾನ ಬಂದಿಲ್ಲ. ಮೈಸೂರು ವಿಮಾನ ನಿಲ್ದಾಣ ರನ್ ವೇ ವಿಸ್ತರಣೆಗೆ ಭೂಸ್ವಾಧೀನ ಕಾರ್ಯ ಇನ್ನೂ ಪ್ರಗತಿಯಲ್ಲಿದೆ.