ದುಶ್ಚಟ ಬಿಡಿಸಲು ಶ್ರೀ ಭಿಕ್ಷಾಟನೆ

| Published : May 08 2025, 12:39 AM IST

ಸಾರಾಂಶ

ಜಮಖಂಡಿ ಓಲೇಮಠದ ಆನಂದ ದೇವರು ಶ್ರೀಗಳು ಗ್ರಾಮದಲ್ಲಿ ಜೋಳಿಗೆ ಹಿಡಿದು ಪಾದಯಾತ್ರೆ ನಡೆಸಿ ಗ್ರಾಮಸ್ಥರಿಂದ ದುಶ್ಚಟಗಳ ಭಿಕ್ಷೆ ಬೇಡಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಕಡಕೋಳ ಗ್ರಾಮದ ಬಸವೇಶ್ವರ ಜಾತ್ರಾ ಮಹೋತ್ಸವದ ಭಾಗವಾಗಿ ಜಮಖಂಡಿ ಓಲೇಮಠದ ಆನಂದ ದೇವರು ಶ್ರೀಗಳು ಗ್ರಾಮದಲ್ಲಿ ಬುಧವಾರ ಜೋಳಿಗೆ ಹಿಡಿದು ಪಾದಯಾತ್ರೆ ನಡೆಸಿ ಗ್ರಾಮಸ್ಥರಿಂದ ದುಶ್ಚಟಗಳ ಭಿಕ್ಷೆ ಬೇಡಿದರು. ದುಶ್ಚಟಕ್ಕೆ ಅಂಟಿಕೊಂಡಿರುವ ಗ್ರಾಮಸ್ಥರನ್ನು ಅದರಿಂದ ಮುಕ್ತಗೊಳಿಸುವ ಸಂಕಲ್ಪದೊಂದಿಗೆ ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಹಾಗೂ ರುದ್ರಾಕ್ಷಿ ಧಾರಣ ಕಾರ್ಯಕ್ರಮದ ಮೂಲಕ ಶ್ರೀಗಳು ಗ್ರಾಮದಲ್ಲಿ ಬೆಳಗ್ಗೆ ಜೋಳಿಗೆ ಹಿಡಿದು ಪಾದಯಾತ್ರೆ ಕೈಗೊಂಡಿದ್ದರು.

ಬಾಳಿ ಬದುಕಿ ತಮ್ಮ ತಂದೆ-ತಾಯಿಗೆ ಆಸರೆ ಆಗಬೇಕಾದ ಯುವಕರು ದುಶ್ಚಟಗಳ ದಾಸರಾಗಿ ಜೀವನ ಹಾಳು ಮಾಡಿಕೊಳ್ಳುವುದನ್ನು ತಪ್ಪಿಸುವ ಉದ್ದೇಶದಿಂದ ಯುವಕರಲ್ಲಿ ಜಾಗೃತಿ ಮೂಡಿಸಲು ಪಾದಯಾತ್ರೆ ನಡೆಸಿದರು.

ಮಜಾ ಮಾಡುವ ನೆಪದಲ್ಲಿ ಮೋಜು-ಮಸ್ತಿ ಮಾಡಿ ಕೊನೆಗೆ ದುಶ್ಚಟಗಳ ದಾಸರಾಗಿ ಆರೋಗ್ಯ ಹದಗೆಡಿಸಿಕೊಂಡು ಸಜಾ ಅನುಭವಿಸುವ ಸಂದರ್ಭ ತಂದುಕೊಳ್ಳಬಾರದು. ಆರೋಗ್ಯವೇ ಭಾಗ್ಯ. ಆರೋಗ್ಯವಿಲ್ಲದಿದ್ದರೆ ಸಾಧನೆ ಸಾಧ್ಯವಿಲ್ಲ ಎಂದು ಯುವಕರಲ್ಲಿ ಜಾಗೃತಿ ಮೂಡಿಸಿದರು. ಕೇವಲ ಬೀಡಿ, ಸಿಗರೇಟ್ ಸೇದುವುದು, ಗುಟ್ಕಾ, ತಂಬಾಕು ತಿನ್ನುವುದು ಹಾಗೂ ಮದ್ಯ ಸೇವಿಸುವುದು ಮಾತ್ರ ದುಶ್ಚಟವಲ್ಲ. ಬದಲಾಗಿ ಸುಳ್ಳು ಹೇಳುವುದು, ಮೋಸ, ವಂಚನೆ ಮಾಡುವುದು, ಇನ್ನೊಬ್ಬರಿಗೆ ನೋವು ಕೊಡುವುದು ಮತ್ತು ತೊಂದರೆ ಮಾಡುವುದು ಕೂಡ ದುಶ್ಚಟವೇ ಆಗಿದೆ ಎಂದು ತಿಳಿಹೇಳಿದರು.

ಸುಮಾರು 40 ಜನ ಗ್ರಾಮಸ್ಥರು ತಮ್ಮ ದುಶ್ಚಟಗಳಿಗೆ ಬಳಸುವ ವಸ್ತುಗಳನ್ನು ಶ್ರೀಗಳ ಜೋಳಿಗೆಗೆ ಹಾಕಿ ದುಶ್ಚಟಗಳನ್ನು ತ್ಯಜಿಸುವುದಾಗಿ ಶ್ರೀಗಳಿಗೆ ವಚನ ಕೊಟ್ಟರು. ದುಶ್ಚಟ ತ್ಯಜಿಸುವ ವಚನ ಕೊಟ್ಟ ಯುವಕರ ತಲೆ ಮೇಲೆ ತೀರ್ಥ ಹಾಕಿ ಆಶೀರ್ವಾದ ಮಾಡಿದರು.

ಪ್ರತಿ ಕುಟುಂಬಗಳು ಆರ್ಥಿಕವಾಗಿ ಸಬಲರಾಗಲು ಯುವಕರು ದುಡಿಯುವ ವಯಸ್ಸಿನಲ್ಲಿ ದುಶ್ಚಟಕ್ಕೆ ಬಲಿಯಾಗಬಾರದು. ಸದೃಢ ಸಮಾಜ ನಿರ್ಮಾಣಕ್ಕೆ ಆರೋಗ್ಯವಂತ ಯುವಕರ ಅಗತ್ಯವಿದೆ. ಆದ್ದರಿಂದ ಯುವಕರು ದುಶ್ಚಟಗಳಿಂದ ದೂರವಿರಬೇಕು ಎಂದು ತಿಳಿವಳಿಕೆ ನೀಡಿದರು. ಈ ವೇಳೆ ರಾಚಯ್ಯ ಮಠಪತಿ, ಶ್ರೀಶೈಲ ಗೊಂಗನವರ, ಶ್ರೀಶೈಲ ದೇಸಾಯಿ, ಕಾಡಪ್ಪ ದೇಸಾಯಿ, ಅಪ್ಪಾಸಾಹೇಬ ದೇವರವರ, ಅಕ್ಕನ ಬಳಗದ ತಾಯಂದಿರು, ಭಜನಾ ತಂಡದ ಸದಸ್ಯರು ಶ್ರೀಗಳೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.