ಸಾರಾಂಶ
ಚನ್ನಪಟ್ಟಣ: ಸಾಕಷ್ಟು ಸಾಧಕರ ಸಾಧನೆ ಬೆಳಕಿಗೆ ಬಾರದೇ ಮರೆಯಾಗುತ್ತಿದ್ದು, ತೆರೆಮರೆಯ ಸಾಧಕರನ್ನು ಗುರುತಿಸಿ, ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಾಹಿತಿ ಡಾ. ವಿಜಯ್ ರಾಂಪುರ ತಿಳಿಸಿದರು. ಪಟ್ಟಣದ ಅನ್ನಪೂರ್ಣೇಶ್ವರಿ ಬಡಾವಣೆಯ ಮಾಲಿನಿ ಇಂಡಿಯನ್ ಆಕ್ಸ್‌ಫರ್ಡ್ ಸ್ಕೂಲ್ ಆವರಣದಲ್ಲಿ, ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ಗೆ ಭಾಜನರಾಗಿರುವ ಕಿರಿಯ ಪ್ರತಿಭೆ ಕು. ಚುಮನ್ ಗೌಡ ಬಿ.ವಿ.ರನ್ನು ಸನ್ಮಾನಿಸಿ ಮಾತನಾಡಿ, ಗುರುತಿಸುವವರಿಲ್ಲದೆ ಸಾಧಕರು ಮೂಲೆಗುಂಪಾಗುತ್ತಾರೆ. ಸಾಧಕರನ್ನು ಸಮಾಜದ ಆಸ್ತಿ ಎಂದು ಪರಿಗಣಿಸಬೇಕು ಎಂದು ತಿಳಿಸಿದರು. ಸಂಸ್ಥೆಯ ಕಾರ್ಯದರ್ಶಿ ಎಂ.ಎ. ಮಾಲಿನಿ ಮಾತನಾಡಿ, ಎಳವೆಯಲ್ಲಿಯೇ ಪ್ರತಿಭೆಗಳನ್ನು ಗುರುತಿಸುವ ಕೆಲಸವನ್ನು ಪೋಷಕರು ಹಾಗೂ ಶಿಕ್ಷಕರು ಮಾಡಬೇಕು. ಮಕ್ಕಳ ಸೃಜನಶೀಲತೆಗೆ ಸ್ಪಂದಿಸುವ ಮನಸ್ಸು ಎಲ್ಲರಿಗೂ ಅಗತ್ಯ. ಇಲ್ಲವಾದಲ್ಲಿ ಪ್ರತಿಭೆ ಹೊರಹೊಮ್ಮುವುದಿಲ್ಲ ಎಂದರು. ವಕೀಲ ಆರ್. ಧರ್ಮೇಂದ್ರ ಕುಮಾರ್, ಕವಿ ಅಬ್ಬೂರು ಶ್ರೀನಿವಾಸ್, ಬಿ.ಕೆ. ವೈದ್ಯೇಗೌಡ, ಮುಖ್ಯ ಶಿಕ್ಷಕಿ ಎಚ್.ಎಸ್. ಗಿರಿಜ, ಶಿಕ್ಷಕಿಯರಾದ ಪುಷ್ಪ, ಪದ್ಮ, ಗಿರಿಜ, ಶಕುಂತಲಾ, ವರ್ಷಿಣಿ, ಶುಭ ಹಾಜರಿದ್ದರು.