ಸಾರಾಂಶ
ಕೆ.ಎಂ. ಮಂಜುನಾಥ್
ಬಳ್ಳಾರಿ: ಇಲ್ಲಿನ ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ (ವೀ.ವಿ. ಸಂಘ) ಕಾರ್ಯಕಾರಿ ಸಮಿತಿ ಚುನಾವಣೆಗೆ ಅಖಾಡ ಸಿದ್ಧಗೊಳ್ಳುತ್ತಿದ್ದು, ಆಕಾಂಕ್ಷಿತರಲ್ಲಿ ತೆರೆಮರೆಯ ಚಟುವಟಿಕೆ ಶುರುವಾಗಿದೆ.ಬರುವ ಮಾರ್ಚ್ 17ಕ್ಕೆ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಈಗಾಗಲೇ ಸ್ಪರ್ಧಿಗಿಳಿಯಲು ನಿರ್ಧರಿಸಿರುವವರು, ವೀವಿ ಸಂಘದ ಸದಸ್ಯರ ಮನೆಗಳಿಗೆ ತೆರಳಿ ಗೆಲುವಿಗೆ ಬಲ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಮೊಬೈಲ್ ಕರೆಯ ಮೂಲಕ ಮತ ನೀಡಿ ಹಾರೈಸುವಂತೆ ಮೊದಲ ಸುತ್ತಿನ ಕೋರಿಕೆಯನ್ನು ಇಡುತ್ತಿದ್ದಾರೆ.
ಕಾಸಗೆ 30 ಸದಸ್ಯರು: ವೀವಿ ಸಂಘದಲ್ಲಿ 2433 ಅಜೀವ ಸದಸ್ಯರಿದ್ದಾರೆ. 30 ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಯಲಿದ್ದು, ಈ ಪೈಕಿ ಗ್ರಾಮೀಣ 14 ಹಾಗೂ ನಗರ ಪ್ರದೇಶದ 16 ಜನರ ಆಯ್ಕೆ ನಡೆಯುತ್ತದೆ. 2021ರಲ್ಲಿ ನಡೆದ ಚುನಾವಣೆಯಲ್ಲಿ ಹಿರಿಯರ ತಂಡ, ಯುವಕ ವೃಂದ ಹಾಗೂ ಸಮನ್ವಯ ತಂಡಗಳು ಸ್ಪರ್ಧೆಗಿಳಿದಿದ್ದವು.ಹಿರಿಯರ ಗುಂಪಿನಲ್ಲಿ 14 ಜನ ಹಾಗೂ ಯುವಕ ವೃಂದದ 14 ಜನರು ಗೆಲುವು ಸಾಧಿಸಿದ್ದರು. ಸಮನ್ವಯ ತಂಡದಿಂದ ಒಬ್ಬರು ಮಾತ್ರ ಗೆದ್ದಿದ್ದರು. ಇನ್ನು ಪಕ್ಷೇತರವಾಗಿ ಸ್ಪರ್ಧಿಸಿ ಒಬ್ಬರು ಗೆಲುವು ಸಾಧಿಸಿದ್ದರು. ಕೊನೆಯಲ್ಲಿ ಹಿರಿಯರ ತಂಡ ಹಾಗೂ ಯುವಕ ವೃಂದ ಜತೆಗೂಡಿ ಅಧಿಕಾರದ ಗದ್ದುಗೆ ಹಿಡಿಯಿತು.
ತಂಡ ರಚನೆಗೆ ಚಾಲನೆ: ವೀವಿ ಸಂಘ ಚುನಾವಣೆ ಹಿನ್ನೆಲೆಯಲ್ಲಿ ತಂಡಗಳ ರಚನೆಗೆ ಚಾಲನೆ ದೊರೆತಿದ್ದು, ಈ ಸಂಬಂಧ ಸಭೆಗಳನ್ನು ನಡೆಸಿ, ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ಹಿಂದಿನ ಗುಂಪಿನಲ್ಲಿ ಗುರುತಿಸಿಕೊಂಡಿದ್ದವರು ಮತ್ತೊಂದು ಗುಂಪಿಗೆ, ಮತ್ತೆ ಕೆಲವರು ಸ್ವತಂತ್ರವಾಗಿ ಸ್ಪರ್ಧಿಸುವುದು ಹೀಗೆ ನಾನಾ ಕಸರತ್ತುಗಳು ಶುರುಗೊಂಡಿವೆ.ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವ ಆಸಕ್ತರ ಸಂಖ್ಯೆ ಹೆಚ್ಚಳವಾಗಿದೆ. ಕಳೆದ ಚುನಾಣೆಯಲ್ಲಿ ಸೋತು, ಗೆದ್ದವರ ಜತೆಗೆ ಹೊಸದಾಗಿ ಚುನಾವಣೆ ಕಣಕ್ಕಿಳಿಯುವವರ ಸಂಖ್ಯೆಯೂ ಹೇರಳವಾಗಿದೆ. ಹೀಗಾಗಿ ಹಿರಿಯರ ತಂಡ, ಸಮನ್ವಯ ತಂಡ ಹಾಗೂ ಯುವಕ ವೃಂದದ ಜತೆಗೆ ಮತ್ತೊಂದು ಗುಂಪು ರಚನೆಯಾಗುವ ಸಾಧ್ಯತೆಯಿದೆ. ಗುಂಪುಗಳಲ್ಲಿ ಗುರುತಿಸಿಕೊಳ್ಳಲಿಚ್ಛಿಸದವರು ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಸ್ವತಂತ್ರವಾಗಿ ಅಖಾಡಕ್ಕಿಳಿಯಲು ನಿರ್ಧರಿಸಿದವರು ಈಗಾಗಲೇ ಮತದಾರರ ಮನೆ ಸುತ್ತುತ್ತಿದ್ದಾರೆ. ಶತಕದ ಐತಿಹ್ಯ: ಜಿಲ್ಲೆಯ ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘಕ್ಕೆ 100 ವರ್ಷಗಳ ಐತಿಹ್ಯವಿದೆ. 1916ರಲ್ಲಿ ಸ್ಥಾಪನೆಗೊಂಡ ಸಂಘ, ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದೆಯಲ್ಲದೆ, ಸಮಾಜದ ಎಲ್ಲ ವರ್ಗಗಳಿಗೆ ಶೈಕ್ಷಣಿಕ ಅವಶ್ಯಕತೆಯನ್ನು ಪೂರೈಸಿ ಭವಿಷ್ಯ ರೂಪಿಸಿದೆ. ಮಾತೃಭಾಷೆಯಲ್ಲಿ ಶಿಕ್ಷಣ, ಮಹಿಳಾ ಶಿಕ್ಷಣ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿದ್ಯಾನುಕೂಲ ಮಾಡಿದ ಸಂಘ, ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಪದವಿ ಹಂತದ ಶಿಕ್ಷಣ ನೀಡುತ್ತಿದೆ. ತಾಂತ್ರಿಕ ಶಿಕ್ಷಣಕ್ಕೆ ಒತ್ತು ನೀಡಿದೆ. ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದ ವ್ಯವಸ್ಥೆ ಕಲ್ಪಿಸಿ, ಆರ್ಥಿಕ ದುರ್ಬಲ ವರ್ಗದ ಜನರ ಶೈಕ್ಷಣಿಕ ಪ್ರಗತಿಗೆ ನೆರವಾಗುತ್ತಿದೆ. ಹೊಸ ಸದಸ್ಯತ್ವ ನೀಡಲಿಲ್ಲ
ವೀವಿ ಸಂಘದ ಸದಸ್ಯತ್ವ ನೀಡಬೇಕು ಎಂಬ ವೀರಶೈವ ಲಿಂಗಾಯತ ಸಮಾಜದ ಅನೇಕರ ನಿರಂತರ ಬೇಡಿಕೆ ಕಳೆದ ಅವಧಿಯಲ್ಲೂ ಈಡೇರಲಿಲ್ಲ. ಹೊಸ ಸದಸ್ಯತ್ವ ನೀಡುವಿಕೆ ಕುರಿತು ಅನೇಕರು ಹೋರಾಟ, ಒತ್ತಾಯ, ಮನವಿ ಪತ್ರಗಳನ್ನು ಸಲ್ಲಿಸುತ್ತಾ ಬಂದರೂ ಬರೀ ಭರವಸೆಗಳಲ್ಲಿಯೇ ಮುಂದೂಡಲಾಯಿತು. ಇದು ಅನೇಕರ ಅಸಮಾಧಾನಕ್ಕೂ ಕಾರಣವಾಗಿದೆ. ವೀವಿ ಸಂಘಕ್ಕೆ ಬಳ್ಳಾರಿ, ವಿಜಯನಗರ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಅಜೀವ ಸದಸ್ಯರಿದ್ದಾರೆ.