ಸಾರಾಂಶ
ಕಾರವಾರ: ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಎದುರುಗಡೆಯಿಂದ ಪ್ರಚಾರ, ಪ್ರಧಾನಿ ನರೇಂದ್ರ ಮೋದಿ ಅವರನ್ನೂ ವ್ಯಂಗ್ಯವಾಡಿದ್ದು, ಜತೆಗೆ ಹಿಂದುಗಡೆಯಿಂದ ಎದುರಾಳಿ ಬಗ್ಗೆ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಿಸಿದ್ದು, ಕಾಂಗ್ರೆಸ್ ಶಾಸಕರ ನಡುವಣ ತೆರೆಮರೆಯ ಗುದ್ದಾಟ ಅಂಜಲಿ ಅವರಿಗೆ ಮುಳುವಾಯಿತು.
ಡಾ. ಅಂಜಲಿ ನಿಂಬಾಳ್ಕರ್ ಅವರು, ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯವಸ್ಥಿತವಾಗಿ ಅವಹೇಳನ ಮಾಡಿಸಿದರು. ಮುಸ್ಲಿಂ ಧಾರ್ಮಿಕ ಸಮಾರಂಭದಲ್ಲಿ ಟೋಪಿ ಹಾಕಿಕೊಂಡಿದ್ದನ್ನೂ ಗೇಲಿ ಮಾಡಲಾಯಿತು. ಕೋಮು ಸೌಹಾರ್ದತೆಯನ್ನೂ ಟೀಕಿಸಿದ್ದಕ್ಕೆ ಜನತೆ ಬೇಸರಗೊಂಡರು. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಡಕೆ. ಅಡಕೆ ಕೊಯ್ಯಲು ದೋಟಿ ಕೊಕ್ಕೆ ಹಾಗೂ ಇತರ ಉಪಕರಣಗಳಿಗೆ ಕಾಗೇರಿ ಸಬ್ಸಿಡಿ ಕೊಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಆ ದೋಟಿ ಕೊಕ್ಕೆಯನ್ನು ಹಾಕಿ ಕಾಗೇರಿ ಅವರನ್ನು ಅವಹೇಳನ ಮಾಡಲಾಯಿತು. ಇದು ಅಡಕೆ ಬೆಳೆಗಾರರನ್ನು ಕೆರಳಿಸಿತು.ತಿರುಗುಬಾಣ: ಕಾಗೇರಿ ಮೀನು ಮಾರ್ಕೆಟ್‌ಗೆ ಹೋಗಿ ಮೀನನ್ನು ಕೈಯಲ್ಲಿ ಹಿಡಿದಿದ್ದನ್ನೂ ವ್ಯಂಗ್ಯವಾಡಲಾಯಿತು. ಮೀನುಗಾರರು, ಮೀನುಗಾರ ಮಹಿಳೆಯರು ಕಾಗೇರಿ ಅವರತ್ತ ಮುಖ ಮಾಡಲು ಇದೂ ಒಂದು ಕಾರಣವಾಯಿತು. ಕಾಗೇರಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮಾಡುವ ಪ್ರತಿ ಪೋಸ್ಟ್‌ಗೂ ಕಾಮೆಂಟ್‌ಗಳು ಬರುತ್ತಿದ್ದುದು ಕಾಗೇರಿ ಅವರ ಪರವಾಗಿಯೇ ಆಗಿತ್ತು. ಕಾಮೆಂಟ್‌ನಲ್ಲಿ ಅಂಜಲಿ ಹಾಗೂ ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿತ್ತು. ಸಾಮಾಜಿಕ ಜಾಲತಾಣ ಬಳಸಿಕೊಂಡು ಅಂಜಲಿ ನೀಡಿದ ಪ್ರತಿಯೊಂದು ಏಟೂ ಅಂಜಲಿ ಅವರಿಗೇ ತಿರುಗುಬಾಣವಾಯಿತು. ಪಕ್ಷಾತೀತ ಎಂದು ಬಿಂಬಿಸಿದ್ದ ಕೆಲವು ಗ್ರೂಪ್‌ಗಳು ಕಾಂಗ್ರೆಸ್ ಗ್ರೂಪ್‌ನಂತೆ ಬದಲಾಗಿದ್ದನ್ನು ಸಾಮಾಜಿಕ ಜಾಲತಾಣಗಳಲ್ಲೇ ಜನತೆ ತರಾಟೆಗೆ ತೆಗೆದುಕೊಂಡಿದ್ದರು.
ಅಭಿಪ್ರಾಯ ಹೇರಿಕೆ ಸಹಿಸಲ್ಲ: ಸಾಮಾಜಿಕ ಜಾಲತಾಣವೇ ಇರಲಿ, ಯಾವುದೇ ಮಾಧ್ಯಮವೇ ಇರಲಿ, ಜನತೆಯ ಮೇಲೆ ತಮ್ಮ ಅಭಿಪ್ರಾಯವನ್ನು ಹೇರುವುದನ್ನು ಯಾರೂ ಸಹಿಸುವುದಿಲ್ಲ. ಜನತೆಗೆ ಯುವುದು ಸತ್ಯ, ಯಾವುದು ಮಿಥ್ಯ ಎನ್ನುವುದನ್ನು ವಿವೇಚನೆ ಮಾಡಿ ನಿರ್ಧಾರಕ್ಕೆ ಬರುವ ಸಾಮರ್ಥ್ಯ ಇದೆ ಎನ್ನುವುದು ಈ ವಿದ್ಯಮಾನಗಳಿಂದ ಸ್ಪಷ್ಟವಾಯಿತು.ಶಿರಸಿಗೆ ಮೋದಿ:
ಅಂಜಲಿ ನಿಂಬಾಳ್ಕರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ವ್ಯಂಗ್ಯವಾಡಿದರು. ಮೋದಿ ನಮಸ್ಕಾರ ಎಂದು ಗೇಲಿ ಮಾಡಿದರು. ಕೊರೋನಾ ಸಂದರ್ಭದಲ್ಲಿ ತಟ್ಟೆ ಬಡಿದಿದ್ದನ್ನೂ ಟೀಕಿಸಿದರು. ಮೋದಿ ಯಾರು, ಹೇಗೆ ಎನ್ನುವ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಈಗಾಗಲೇ ರೂಪುಗೊಂಡಿದೆ. ಆದರೆ ಮೋದಿ ಶಿರಸಿಗೆ ಬಂದು ಪ್ರಚಾರ ಮಾಡಿದ್ದು ಅಂಜಲಿ ಅವರನ್ನು ಗಾಬರಿ ಬೀಳಿಸಿತ್ತು. ಅದಕ್ಕೆ ಮೋದಿ ವಿರುದ್ಧವೂ ಹರಿಹಾಯ್ದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಗ್ಗಾಮುಗ್ಗಾ ಟೀಕಿಸಿ, ಹೀಯಾಳಿಸಿದ್ದು ಅಂಜಲಿ ಅವರಿಗೆ ದುಬಾರಿಯಾಯಿತು.ಶೀತಲ ಸಮರ
ಕಾಂಗ್ರೆಸ್‌ನಲ್ಲಿ ಎರಡು ಬಣಗಳಾಗಿತ್ತು. ಆರ್.ವಿ. ದೇಶಪಾಂಡೆ ಹಾಗೂ ಉಸ್ತುವಾರಿ ಸಚಿವ ಮಂಕಾಳು ವೈದ್ಯ ನಡುವಣ ಶೀತಲ ಸಮರದಿಂದ ಅಂಜಲಿ ಬಸವಳಿಯಬೇಕಾಯಿತು. ಉತ್ತರ ಕನ್ನಡ ಜಿಲ್ಲೆಯ ರಾಜಕೀಯದ ಪರಿಚಯವೇ ಇಲ್ಲದ ಅಂಜಲಿ ಪ್ರಚಾರಕ್ಕೆ ಶಾಸಕರು ಹಾಗೂ ಮುಖಂಡರನ್ನೇ ಅವಲಂಬಿಸಬೇಕಾಯಿತು. ಆದರೆ ಈ ಬಣಗಳ ನಡುವಣ ಕಿತ್ತಾಟವನ್ನು ಅರ್ಥ ಮಾಡಿಕೊಂಡು ಬಗೆಹರಿಸುವಷ್ಟರಲ್ಲಿ ಮತದಾನವೇ ಮುಗಿದುಹೋಯ್ತು.