ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಪ್ರೌಢಾವಸ್ಥೆಯ ದಿನಗಳಲ್ಲಿ ಬಾಲಕಿಯರು ಆಕರ್ಷಣೆ ಅಥವಾ ಪ್ರೀತಿ-ಪ್ರೇಮಕ್ಕೆ ಸಿಲುಕುವ ಮುನ್ನ ಸಮಾಜದಲ್ಲಿ ತಂದೆ, ತಾಯಿ ಸ್ಥಿತಿ ಜತೆಗೆ ಮುಂದಿನ ಜೀವನದ ಪರಿಸ್ಥಿತಿಯ ಬಗ್ಗೆ ಯೋಚಿಸಿ, ಮುನ್ನಡೆಯುವುದು ಅತ್ಯಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ ಮಹಾಂತೇಶ್ ಮುನವಳ್ಳಿಮಠ್ ಹೇಳಿದರು.
ಪಟ್ಟಣದ ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜು ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ ಸಹಯೋಗದಲ್ಲಿ ಆಯೋಜಿಸಿದ್ದ ಬಾಲ್ಯವಿವಾಹ ನಿಷೇಧ ಕಾಯ್ದೆ ಮತ್ತು ಪೋಕ್ಸೋ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಒಂದು ಕ್ಷಣದ ತಪ್ಪು ನಿರ್ಧಾರದಿಂದ ಜೀವನದಲ್ಲಿ ಏರುಪೇರುಗಳು, ಪೋಕ್ಸೋ ಕಾಯ್ದೆಯಡಿ ಕಾನೂನು ಕ್ರಮಗಳು ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಪ್ರೌಢಾವಸ್ಥೆಯ ದಿನಗಳಲ್ಲಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುವ ಜತೆಗೆ ಎಚ್ಚರಿಕೆಯ ನಡೆಯೂ ಭವಿಷ್ಯದಲ್ಲಿ ಉತ್ತಮ ಅವಕಾಶಗಳನ್ನು ಕಲ್ಪಿಸುತ್ತದೆ ಎಂದು ಕರೆಕೊಟ್ಟರು.ಮದುವೆಯ ವಯಸ್ಸನ್ನು ಹೆಣ್ಣಿಗೆ ೧೮ ವರ್ಷ ಹಾಗೂ ಗಂಡಿಗೆ ೨೧ ವರ್ಷವೆಂದು ಕಾನೂನು ರೂಪಿಸಿದೆ. ಯಾಕೆಂದರೆ ಮಾನಸಿಕ ಸಾಮರ್ಥ್ಯ ಹಾಗೂ ದೈಹಿಕ ಬೆಳವಣಿಗೆಯನ್ನು ಗಮನದಲ್ಲಿ ಇಟ್ಟುಕೊಂಡು ಕಾನೂನನ್ನು ಮಾಡಲಾಗಿದೆ. ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನ ಭವಿಷ್ಯದಲ್ಲಿ ಜೀವನ, ಪರಿಣಾಮಗಳು ಹಾಗೂ ಶಿಕ್ಷಣದ ಬಗ್ಗೆ ಯೋಚಿಸುವ ಜತೆಗೆ ತಂದೆ ತಾಯಿಯೊಂದಿಗೆ ಸಮಾಲೋಚಿಸಿ, ಮುನ್ನಡೆಯಿರಿ ಎಂದರು. ನಿಮಗೆ ಬಾಲ್ಯವಿವಾಹದ ಬಗ್ಗೆ ಮಾಹಿತಿ ದೊರೆತಲ್ಲಿ ನಿಮ್ಮ ಪ್ರಾಂಶುಪಾಲರು, ಹತ್ತಿರದ ಪೊಲೀಸ್ ಠಾಣೆ ಅಥವಾ ಉಪನ್ಯಾಸಕರಿಗೆ ತಿಳಿಸಿ ಎಂದು ಸಲಹೆ ನೀಡಿದರು. ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಮಾತನಾಡಿ, ತಂದೆತಾಯಿ ಕಣ್ಣಿಗೆ ಕಾಣುವ ದೇವರೆಂದು ಪೂಜಿಸುವ ಮನಸ್ಥಿತಿ ನಿರ್ಮಿಸಿಕೊಂಡಾಗ ಅವರಿಗೆ ಮಾನಸಿಕ ಹಿಂಸೆ ನೀಡಬಾರದೆಂದು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಜತೆಗೆ ಪ್ರೀತಿ, ಪ್ರೇಮದಂತಹ ತಪ್ಪು ನಡೆಗಳು ಸಾಧ್ಯವಿಲ್ಲ ಮತ್ತು ಇದರಿಂದ ಉಜ್ವಲ ಭವಿಷ್ಯದ ಜತೆಗೆ ಉತ್ತಮ ಜೀವನ ನಿಮ್ಮದಾಗುತ್ತದೆ ಎಂದರು. ಕಾನೂನಿನ ಅರಿವಿನ ಕಾರ್ಯಕ್ರಮಗಳ ಮೂಲಕ ಜಾಗೃತಿಯನ್ನು ಮೂಡಿಸುತ್ತಿದ್ದರೂ ಸಹ ಪೋಕ್ಸೋ ಪ್ರಕರಣಗಳು ದಾಖಲಾಗುತ್ತಿವೆ. ಆದ್ದರಿಂದ ನೀವುಗಳು ಹೆಚ್ಚಿನ ಕಾಳಜಿಯೊಂದಿಗೆ ಕಾನೂನಿನ ಪಾಲನೆ ಮತ್ತು ಕಾನೂನು ಉಲಂಘನೆಯಾದಾಗ ಜಾಗ್ರತೆಯ ನಡೆಯಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವೆಂದರು. ೧೮ ವರ್ಷವಾದ ಯುವತಿಯರು ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ನೋಂದಾಯಿಸಿಕೊಳ್ಳಿ ಎಂದು ತಿಳಿಸಿ ಮಾಹಿತಿ ನೀಡಿದರು.ಹಿರಿಯ ವಕೀಲ ಎಚ್.ಕೆ.ಹರೀಶ್ ಪ್ರಧಾನ ಭಾಷಣ ಮಾಡಿದರು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಶ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರ್ ಮತ್ತು ಸಖಿ, ಒನ್ ಸ್ವಾಫ್ ಸೆಂಟರ್(ಸಿಡಿಪಿಒ ಕಚೇರಿ) ವಕೀಲರಾದ ಬಿಂದೇಶ್ವರಿ ಮಾತನಾಡಿದರು. ಚಂದ್ರಮ್ಮ ಪ್ರಾರ್ಥಿಸಿದರು, ಡಾ. ಗಣೇಶ್ ಸ್ವಾಗತಿಸಿದರು, ಡಾ. ಕೃಷ್ಣಮೂರ್ತಿ ನಿರೂಪಿಸಿದರು. ಪ್ರಾಂಶುಪಾಲ ಡಾ. ಅಶೋಕ್ ಎಚ್.ಕೆ., ಫರೀರಮ್ಮ ಪಿ.ಮುರುಗೊಡ್, ಶ್ವೇತನಾಯಕ್, ಜಯಚಂದ್ರ, ಸಹ ಪ್ರಾಧ್ಯಾಪಕರಾದ ಸುನೀಲ್, ಜಗದೀಶ್, ನಾಗೇಂದ್ರ, ಉಮೇಶ್, ರಾಘವೇಂದ್ರ ಇತರರು ಇದ್ದರು.