ಸಾರಾಂಶ
ತಲೆಯ ಮೇಲೆ ರೊಟ್ಟಿ ಬುತ್ತಿ , ಕೈಯಲ್ಲಿ ಸಿಹಿ ತಿಂಡಿಗಳ ಚೀಲ ಹಿಡಿದ ಭಕ್ತರು ಕಂಡುಬಂದರು. ಜಾತ್ರೆ ಹಿನ್ನೆಲೆಯಲ್ಲಿ ಸಭಾಂಗಣ ಭಕ್ತರಿಂದ ಕಿಕ್ಕಿರಿದು ತುಂಬಿತ್ತು. ವಿವಿಧ ಗ್ರಾಮಗಳಿಂದ ಆಗಮಿಸಿ ಸಮುದಾಯ ಭೋಜನ ಸವಿದು ಭಾವೈಕ್ಯತೆಯ ಸಂದೇಶ ಸಾರಿದರು.
ಕುಷ್ಟಗಿ:
ತಾಲೂಕಿನ ನವಲಹಳ್ಳಿ ಗ್ರಾಮದ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಗುರುವಾರ ಸಂಜೆ ಬೆಳದಿಂಗಳ ಬುತ್ತಿ ಜಾತ್ರೆ ನಡೆಯಿತು.ತಲೆಯ ಮೇಲೆ ರೊಟ್ಟಿ ಬುತ್ತಿ , ಕೈಯಲ್ಲಿ ಸಿಹಿ ತಿಂಡಿಗಳ ಚೀಲ ಹಿಡಿದ ಭಕ್ತರು ಕಂಡುಬಂದರು. ಜಾತ್ರೆ ಹಿನ್ನೆಲೆಯಲ್ಲಿ ಸಭಾಂಗಣ ಭಕ್ತರಿಂದ ಕಿಕ್ಕಿರಿದು ತುಂಬಿತ್ತು. ವಿವಿಧ ಗ್ರಾಮಗಳಿಂದ ಆಗಮಿಸಿ ಸಮುದಾಯ ಭೋಜನ ಸವಿದು ಭಾವೈಕ್ಯತೆಯ ಸಂದೇಶ ಸಾರಿದರು.
ಪ್ರತಿವರ್ಷದಂತೆ ಈ ಜಾತ್ರೆಗೆ ಗ್ರಾಮಸ್ಥರು ತಮ್ಮ ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥ ತಂದರು. ಪ್ರತಿ ಓಣಿಯ ಮಹಿಳೆಯರು ಒಟ್ಟಾಗಿ ಸೇರಿ, ಗುಂಪು ಗುಂಪಾಗಿ ತಲೆ ಮೇಲೆ ರೊಟ್ಟಿ ಬುತ್ತಿ, ಅನ್ನ ಸಾಂಬಾರ, ಪಲ್ಯೆ, ಕಾಳು ಪಲ್ಯೆ, ಸಿಹಿ ತಿನಿಸು, ಚಿತ್ರಾನ್ನ ಹೀಗೆ ಬಗೆಬಗೆಯ ಬುತ್ತಿ ಕಟ್ಟಿಕೊಂಡು ಬಂದರು. ಆನಂತರ ದೇವಸ್ಥಾನ ಆವರಣದಲ್ಲಿ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಭಾಗಿಯಾದರು. ಸ್ಥಳೀಯರೂ ಸೇರಿದಂತೆ ಹಂಚಿನಾಳ, ಹುಲಿಯಾಪುರ, ನಂದಾಪುರ, ಹಿರೇಮನ್ನಾಪುರ, ತಾವರಗೇರಾ, ಗುಡದೂರು, ಜುಮಲಾಪುರ, ನೀರಲೂಟಿ ಗ್ರಾಮಗಳ ಶರಣ ಭಕ್ತರು ಬೆಳದಿಂಗಳ ಬುತ್ತಿ ಜಾತ್ರೆಯಲ್ಲಿ ಭೋಜನ ಸವಿದರು.ಪ್ರದೀಪ್ ಗುರೂಜಿ ಪ್ರವಚನ:
ಪ್ರವಚನಕಾರ ಪ್ರದೀಪ ಗುರೂಜಿ ಮಾತನಾಡಿ, ಮನುಷ್ಯ ಪರೋಪಕಾರಿ ಕಾರ್ಯಗಳನ್ನು ಮಾಡಿದರೆ ಮಾತ್ರ ನಮ್ಮ ಜೀವನದಲ್ಲಿ ಸುಖ-ನೆಮ್ಮದಿ ಸಿಗಲು ಸಾಧ್ಯ ಎಂದರು.ಅನ್ನ ದಾಸೋಹಿ ಕಲಬುರಗಿ ಶರಣಬಸವೇಶ್ವರ ಅನ್ನದಾನಕ್ಕೆ ಪ್ರಸಿದ್ಧಿಯಾದವರು. ನಾವು ಎಷ್ಟೆ ಸಂಪತ್ತು ಗಳಿಸಿದರೂ, ಎಷ್ಟೆ ದುಡ್ಡು ಇದ್ದರೂ ಇನ್ನೊಬ್ಬರಿಗೆ ದಾನ ನೀಡುವ ಗುಣ ಇಲ್ಲದ ಜೀವನ ವ್ಯರ್ಥ. ನಮ್ಮ ಕೈಯಿಂದ ಎಷ್ಟು ಆಗುತ್ತದೆಯೋ ಅಷ್ಟೆ ಪುಣ್ಯದ ಕಾರ್ಯ ಮಾಡಬೇಕು ಎಂದರು.
ಪ್ರವಚನಕಾರ ಜಯಪ್ಪ, ಮುರಗಯ್ಯಸ್ವಾಮಿ, ಬಸವರಾಜ ಮಾಸ್ತರ, ಶಿವು ತಾವರಗೇರಾ, ಶರಣಯ್ಯ ಹಿರೇಮಠ ಮತ್ತು ಗ್ರಾಮದ ಪ್ರಮುಖರು, ವಿವಿಧ ಗ್ರಾಮಗಳ ಭಕ್ತರು ಇದ್ದರು.