ಜಾತ್ರೆಯಿಂದ ಎಲ್ಲರೂ ಒಂದೆ ಕಡೆ ಸೇರುತ್ತಿದ್ದು ಇಲ್ಲಿ ಒಬ್ಬರಿಗೊಬ್ಬರು ಪರಸ್ಪರ ಭಾವನೆ ಹಂಚಿಕೊಂಡು ಸಾಮರಸ್ಯದ ಜೀವನ ನಡೆಸಲು ಸಹಕಾರಿಯಾಗಿದೆ
ಕುಷ್ಟಗಿ: ಸಂಬಂಧ ಬೆಸೆಯುವಲ್ಲಿ ಬೆಳದಿಂಗಳ ಬುತ್ತಿ ಜಾತ್ರೆ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಶಿಕ್ಷಕ ಉಮಾಪತಿ ಮಾಳಗಿ ಹೇಳಿದರು.
ತಾಲೂಕಿನ ದೋಟಿಹಾಳ ಗ್ರಾಮದ ಬನಶಂಕರಿದೇವಿ ಜಾತ್ರಾಮಹೋತ್ಸವದ ಅಂಗವಾಗಿ ದಯಾನಂದಪುರಿ ಕ್ರೀಡಾ, ಸಾಂಸ್ಕೃತಿಕ, ಜಾನಪದ ಕಲಾ ಸಂಘ ಹಾಗೂ ಗಾಯಿತ್ರಿ ಮಹಿಳಾ ಸಂಘದ ಸಹಯೋಗದಲ್ಲಿ ಶನಿವಾರ ರಾತ್ರಿ ನಡೆದ ಬೆಳದಿಂಗಳ ಬುತ್ತಿ ಜಾತ್ರೆಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.ಇಂದಿನ ಆಧುನಿಕ ದಿನಗಳಲ್ಲಿ ಕೂಡಿ ಬಾಳುವದು, ಕೂಡಿ ಊಟ ಮಾಡುವ ಸಂಪ್ರದಾಯ ಕಡಿಮೆಯಾಗುತ್ತಿದ್ದು, ಜಾತ್ರೆಯ ನೆಪದಲ್ಲಾದರೂ ಗ್ರಾಮಸ್ಥರೆಲ್ಲರೂ ಬೆಳದಿಂಗಳ ಬುತ್ತಿ ಜಾತ್ರೆಯಲ್ಲಿ ಕುಳಿತುಕೊಂಡು ಊಟ ಮಾಡುವದರಿಂದ ಮನಸ್ಸುಗಳ ನಡುವೆ ಸಾಮರಸ್ಯ ಸೃಷ್ಟಿಯಾಗುವ ಜತೆಗೆ ಒಡೆದ ಹೋದ ಮನಸ್ಸು ಒಂದಾಗಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ರಾಜ್ಯಯುವ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ಕಂಟ್ಲಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಬನಶಂಕರಿ ದೇವಿ ಜಾತ್ರೆ ಅಂಗವಾಗಿ ಬೆಳದಿಂಗಳ ಬುತ್ತಿ ಜಾತ್ರೆಯನ್ನು ಮಾಡಲಾಗುತ್ತಿದ್ದು, ಈ ಜಾತ್ರೆಯಿಂದ ಎಲ್ಲರೂ ಒಂದೆ ಕಡೆ ಸೇರುತ್ತಿದ್ದು ಇಲ್ಲಿ ಒಬ್ಬರಿಗೊಬ್ಬರು ಪರಸ್ಪರ ಭಾವನೆ ಹಂಚಿಕೊಂಡು ಸಾಮರಸ್ಯದ ಜೀವನ ನಡೆಸಲು ಸಹಕಾರಿಯಾಗಿದೆ ಎಂದರು.ಹತ್ತಾರು ಮಹಿಳೆಯರು ಮನೆಯಲ್ಲಿ ತಯಾರಿ ಮಾಡಿಕೊಂಡಿರುವ ಬೆಳದಿಂಗಳ ಬುತ್ತಿ ಗ್ರಾಮದ ಮಾರುತಿ ಕಾಲನಿಯಲ್ಲಿರುವ ಸಂಕಷ್ಟ ಹರ ಗಣಪತಿ ದೇವಸ್ಥಾನದವರೆಗೆ ತಲೆ ಮೇಲೆ ಹೊತ್ತುಕೊಂಡು ಬಂದು ಎಲ್ಲರೂ ಪರಸ್ಪರವಾಗಿ ಭಾವನೆ ಹಂಚಿಕೊಳ್ಳುತ್ತಾ ಊಟ ಸವಿದರು. ಬೆಳದಿಂಗಳ ಬುತ್ತಿಯಲ್ಲಿ ಉದರು ಸಜ್ಜಕ, ಸೆಂಗಾ ಹೋಳಿಗೆ, ಕರ್ಚಿಕಾಯಿ, ಚಟ್ನಿ ಪುಡಿ, ಹಸಿ ಚಟ್ನಿ, ಚಪಾತಿ, ರೊಟ್ಟಿ, ಬದನೆಕಾಯಿ ಪಲ್ಯೆ, ಪುಂಡಿ ಪಲ್ಯೆ, ಕಾಳುಪಲ್ಯೆ, ಅನ್ನ, ಸಾಂಬಾರ ಸವಿದರು.
ಈ ಸಂದರ್ಭದಲ್ಲಿ ಈಶ್ವರಸ್ವಾಮಿ ದೇವಾಂಗಮಠ, ರಾಮನಗೌಡ ಬಿಜ್ಜಲ, ನಾರಾಯಣಪ್ಪ ಕೊಳ್ಳಿ, ಹನಮಂತರಾವ ದೇಸಾಯಿ, ಗಂಗಪ್ಪ ಹುಬ್ಬಳ್ಳಿ, ನಾಗರಾಜ ಕಾಳಗಿ, ಮಲ್ಲಪ್ಪ ಉಳ್ಳಿ, ಪಂಪಣ್ಣ ಬಿಜ್ಜಲ, ರುಕ್ಮೀಣಿ ನಾಗಶೆಟ್ಟಿ, ಶಶಿಕಲಾ ಅರಳಿಕಟ್ಟಿ, ಅನುಷಾ ಇಂದರಗಿ, ದೀಪಾ ಕೊಪ್ಪರದ, ಲಕ್ಷ್ಮವ್ವ ಉಳ್ಳಿ, ಶೃತಿ ಹುಬ್ಬಳ್ಳಿ, ಹರಿನಾಥ ಚಿಟ್ಟಾ, ನಾಗರಾಜ ಕಾಳಗಿ, ಅಮರೇಶ ತಾರಿವಾಳ, ಸಂಕಪ್ಪ ಸಕ್ರಿ, ಬಸನಗೌಡ ಕಡೇಕೊಪ್ಪ ಸೇರಿದಂತೆ ಗ್ರಾಮದ ಮಹಿಳೆಯರು, ಯುವಕರು ಇದ್ದರು.ಆಧುನಿಕತೆಯ ಪರಿಣಾಮವಾಗಿ ಗ್ರಾಮೀಣ ಸಂಪ್ರದಾಯಗಳು ನಶಿಸುತ್ತಿದ್ದು, ದೋಟಿಹಾಳ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಬೆಳದಿಂಗಳ ಬುತ್ತಿಜಾತ್ರೆ ಮಾಡುವ ಮೂಲಕ ಸಂಪ್ರದಾಯ ಉಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂದು ಹನಮಂತರಾವ ದೇಸಾಯಿ ಹೇಳಿದ್ದಾರೆ.