ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ 22 ವರ್ಷಗಳ ಹಿಂದೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಬುಧವಾರ ಕೈಗೆತ್ತಿಕೊಳ್ಳುತ್ತಿದ್ದು, ತೀವ್ರ ಕುತೂಹಲ ಮೂಡಿದೆ.

ಬೆಳಗಾವಿ : ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ 22 ವರ್ಷಗಳ ಹಿಂದೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಬುಧವಾರ ಕೈಗೆತ್ತಿಕೊಳ್ಳುತ್ತಿದ್ದು, ತೀವ್ರ ಕುತೂಹಲ ಮೂಡಿದೆ. ಬೆಳಗಾವಿ ಸೇರಿದಂತೆ ಕರ್ನಾಟಕದಲ್ಲಿರುವ 865 ನಗರ, ಪಟ್ಟಣ ಹಾಗೂ ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಮಹಾರಾಷ್ಟ್ರ ಸರ್ಕಾರದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಬೇಕೋ ಅಥವಾ ತಿರಸ್ಕರಿಸಬೇಕೋ ಎಂಬ ಮಹತ್ವದ ನಿರ್ಣಯ ಸುಪ್ರೀಂಕೋರ್ಟ್‌ನಿಂದ ಹೊರಬೀಳುವ ಸಾಧ್ಯತೆ ಇದೆ.

ಈ ಪ್ರಕರಣದಲ್ಲಿ ಕರ್ನಾಟಕ ಸರ್ಕಾರದ ಪರವಾಗಿ ಹಿರಿಯ ನ್ಯಾಯವಾದಿ ನಿಶಾಂತ ಪಾಟೀಲ ವಕಾಲತ್ತು ವಹಿಸಲಿದ್ದಾರೆ. ಗಡಿ ರೇಖೆ ಗುರುತಿಸುವ ಅಧಿಕಾರ ಸಂಸತ್ತಿಗೇ ಸೇರಿದ್ದು, ಇದು ನ್ಯಾಯಾಂಗ ವ್ಯಾಪ್ತಿಗೆ ಬರುವುದಿಲ್ಲ ಎಂಬ ಪ್ರಬಲ ವಾದ ಮಂಡಿಸಲು ನಿಶಾಂತ ಪಾಟೀಲ ನೇತೃತ್ವದ ರಾಜ್ಯದ ಕಾನೂನು ತಜ್ಞರ ತಂಡ ಸನ್ನದ್ಧವಾಗಿದೆ. ಅಲ್ಲದೆ, ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಮೂಲದಲ್ಲೇ ತಿರಸ್ಕರಿಸುವಂತೆ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮನವಿ ಮಾಡುವ ಸಾಧ್ಯತೆ ಇದೆ.

ಒಂದು ವೇಳೆ, ಕರ್ನಾಟಕದ ಮನವಿಯನ್ನು ಸುಪ್ರೀಂಕೋರ್ಟ್‌ ಪುರಸ್ಕರಿಸಿದರೆ ಅರ್ಜಿ ಸಲ್ಲಿಸಿದ ಮಹಾರಾಷ್ಟ್ರ ಸರ್ಕಾರಕ್ಕೆ ಮುಖಭಂಗವಾಗುತ್ತದೆ. ಸುಪ್ರೀಂಕೋರ್ಟ್‌ ಏನಾದರೂ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಮನ್ನಿಸಿದರೆ ವಾದ- ವಿವಾದಗಳಿಗೆ ಎರಡೂ ರಾಜ್ಯಗಳು ಅಣಿಯಾಗಬೇಕಾಗುತ್ತದೆ ಎನ್ನುತ್ತಾರೆ ಕಾನೂನು ತಜ್ಞರು.

ಗಡಿ ವಿವಾದ ಕುರಿತು ನಂದಗಡದಲ್ಲಿ ಸೋಮವಾರವಷ್ಟೇ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಗಡಿ ರೇಖೆ ಗುರುತಿಸುವ ಪರಮಾಧಿಕಾರ ಸಂಸತ್ತಿಗೇ ಸೇರಿದ್ದು. ಇದು ಸುಪ್ರೀಂಕೋರ್ಟ್ ವ್ಯಾಪ್ತಿಗೆ ಬರುವ ವಿಷಯವೇ ಅಲ್ಲ. ಮಹಾರಾಷ್ಟ್ರ ಸರ್ಕಾರಕ್ಕೆ ಗಡಿ ವಿವಾದ ಸಂಬಂಧ ಕೇಸ್ ಹಾಕುವ ಹಕ್ಕೇ ಇಲ್ಲ. ಈ ವಿವಾದ ನ್ಯಾಯಾಂಗ ವ್ಯಾಪ್ತಿಗೆ ಬಾರದು ಎಂಬುದು ನಮ್ಮ ದೃಢವಾದ ಕಾನೂನು ವಾದ. ಕರ್ನಾಟಕದ ಕಾನೂನು ತಜ್ಞರ ತಂಡ ಬಲಾಢ್ಯವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಹೈ ಅಲರ್ಟ್‌:

ಸುಪ್ರೀಂಕೋರ್ಟ್ ವಿಚಾರಣೆ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಹಾಗೂ ಗಡಿ ಭಾಗಗಳಲ್ಲಿ ಪೊಲೀಸರು ಅಲರ್ಟ್ ಘೋಷಿಸಿದ್ದು, ಮರಾಠಿ ಭಾಷಿಕರು ಹೆಚ್ಚಿರುವ ಪ್ರದೇಶಗಳಲ್ಲಿ, ಬೆಳಗಾವಿ ನಗರ ಹಾಗೂ ಜಿಲ್ಲೆಯಾದ್ಯಂತ ತೀವ್ರ ಕಟ್ಟೆಚ್ಚರ ಘೋಷಿಸಿದ್ದಾರೆ. ಇದರ ನಡುವೆ ಗಡಿ ಭಾಗಗಳಲ್ಲೂ ಹೆಚ್ಚುವರಿ ಪೊಲೀಸ್ ನಿಯೋಜನೆಗೆ ನಗರ ಮತ್ತು ಜಿಲ್ಲಾ ಪೊಲೀಸರು ಮುಂದಾಗಿದ್ದಾರೆ.

ಮಹಾರಾಷ್ಟ್ರ 22 ವರ್ಷಗಳ ಹಿಂದೆ ಸಲ್ಲಿಸಿರುವ ಅರ್ಜಿರಾಜ್ಯಗಳ ಮರುವಿಂಗಡಣಾ ಕಾಯಿದೆ-1956ರ ಅನ್ವಯ ಭಾಷಾವಾರು ರಾಜ್ಯಗಳ ಪುನರ್ ರಚನೆ ನಡೆದಾಗ, ಕನ್ನಡ ಬಹುಭಾಷಿಕರು ವಾಸಿಸುವ ಬೆಳಗಾವಿಯನ್ನು ಕರ್ನಾಟಕಕ್ಕೆ ಸೇರಿಸಲಾಯಿತು. ಈ ನಿರ್ಣಯವನ್ನು ಕರ್ನಾಟಕ ಸದಾ ಸಮರ್ಥಿಸಿಕೊಂಡು ಬಂದಿದ್ದು, ಇದು ಅಂತಿಮ ಹಾಗೂ ಸಂವಿಧಾನ ಬದ್ಧ ತೀರ್ಮಾನವೆಂದು ವಾದಿಸುತ್ತಿದೆ. ಇದಕ್ಕೆ ವಿರುದ್ಧವಾಗಿ, ಬೆಳಗಾವಿ ಸೇರಿದಂತೆ ಗಡಿಭಾಗದಲ್ಲಿರುವ ಮರಾಠಿ ಬಹುಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಮಹಾರಾಷ್ಟ್ರ ಸರ್ಕಾರ ಪ್ರತಿಪಾದಿಸುತ್ತಿದೆ.

2004ರಲ್ಲಿ ಮಹಾರಾಷ್ಟ್ರ ಸರ್ಕಾರ ಬೆಳಗಾವಿ ಸೇರಿದಂತೆ 865 ನಗರ, ಪಟ್ಟಣ ಮತ್ತು ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ಮೂಲಕ ಗಡಿ ಪುನರ್ ನಿರ್ಧಾರಕ್ಕೆ ಮಹಾರಾಷ್ಟ್ರ ಮುಂದಾಗಿದೆ. ಈ ಅರ್ಜಿಗೆ ಕರ್ನಾಟಕ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ರಾಜ್ಯಗಳ ಗಡಿ ನಿರ್ಧರಿಸುವ ಪರಮಾಧಿಕಾರ ಸಂಸತ್ತಿಗೆ ಮಾತ್ರ ಸೇರಿದ್ದು, ಇದು ಸುಪ್ರೀಂಕೋರ್ಟ್ ವ್ಯಾಪ್ತಿಗೆ ಬರುವ ವಿಷಯವಲ್ಲ ಎಂದು ವಾದಿಸುತ್ತಿದೆ. 

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಕುರಿತ ಅರ್ಜಿ ಬುಧವಾರ ವಿಚಾರಣೆಗೆ ಬರುವ ಸಂದರ್ಭದಲ್ಲೇ ರಾಜ್ಯ ಸರ್ಕಾರ ವಕೀಲ ನಿಶಾಂತ ಪಾಟೀಲ ಅವರನ್ನು ಸುಪ್ರೀಂಕೋರ್ಟ್‌ನಲ್ಲಿ ಅಡ್ವೋಕೇಟ್‌ ಆನ್‌ ರೆಕಾರ್ಡ್ ಎಂದು ನೇಮಕ ಮಾಡಿರುವುದು ಸ್ವಾಗತಾರ್ಹ. ಅವರು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸುವ ವಿಶ್ವಾಸವಿದೆ. ಈ ಮೂಲಕ ರಾಜ್ಯ ಸರ್ಕಾರ ನಮ್ಮ ಬೇಡಿಕೆ ಈಡೇರಿಸುವ ಮೂಲಕ ಬದ್ಧತೆ ಮೆರೆದಿದೆ.- ಅಶೋಕ ಚಂದರಗಿ, ಸದಸ್ಯರು, ಕರ್ನಾಟಕ ಗಡಿ ಪ್ರದೇಶಭಿವೃದ್ಧಿ ಪ್ರಾಧಿಕಾರ.

ಕರ್ನಾಟಕ -ಮಹಾರಾಷ್ಟ್ರ ಗಡಿ ವಿವಾದ ಕುರಿತ ಅರ್ಜಿ ಬುಧವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದ್ದು, ಮೊದಲು ಪ್ರಾಥಮಿಕ ಹಂತದ ವಿಚಾರಣೆಯ ನಿರ್ಣಯ ಆಗಬೇಕಿದೆ. ಆದರೆ, ಗಡಿ ವಿವಾದ ಪ್ರಕರಣ ನ್ಯಾಯಾಲಯದ ವ್ಯಾಪ್ತಿಗೆ ಬಾರದು. ಇದನ್ನು ಸಂಸತ್ತಿನಲ್ಲಿಯೇ ಇತ್ಯರ್ಥಗೊಳಿಸಿಕೊಳ್ಳಬೇಕು.

- ರವೀಂದ್ರ ತೋಟಿಗೇರ, ಗಡಿ ತಜ್ಞರು, ಬೆಳಗಾವಿ.

ಏನಿದು ಕೇಸ್‌?

- ಬೆಳಗಾವಿ ಸೇರಿ ಕರ್ನಾಟಕದ 865 ನಗರ, ಪಟ್ಟಣ, ಗ್ರಾಮಗಳು ತನಗೆ ಸೇರಬೇಕು ಎಂದು ಮಹಾರಾಷ್ಟ್ರ ಕ್ಯಾತೆ

- ಈ ಸಂಬಂಧ 2004ರಲ್ಲಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದ ನೆರೆ ರಾಜ್ಯ. ಅದಕ್ಕೆ ಕರ್ನಾಟಕದ ತೀವ್ರ ರೀತಿ ಆಕ್ಷೇಪ

- ಮಹಾರಾಷ್ಟ್ರ ಸರ್ಕಾರದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದರೆ ನೆರೆ ರಾಜ್ಯಕ್ಕೆ ತೀವ್ರವಾದ ಮುಖಭಂಗ

- ಒಂದು ವೇಳೆ ವಿಚಾರಣೆಗೆ ಅಂಗೀಕರಿಸಿದರೆ, ಕೋರ್ಟ್‌ನಲ್ಲಿ ಎರಡೂ ರಾಜ್ಯಗಳ ವಾದ- ಪ್ರತಿವಾದಕ್ಕೆ ಚಾಲನೆ

ಬೆಳಗಾವಿಯಲ್ಲಿ ಅತಿ ಬಿಗಿ ಭದ್ರತೆ

ಸುಪ್ರೀಂಕೋರ್ಟ್ ವಿಚಾರಣೆ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಹಾಗೂ ಗಡಿ ಭಾಗಗಳಲ್ಲಿ ಪೊಲೀಸರು ಅಲರ್ಟ್ ಘೋಷಿಸಿದ್ದು, ಮರಾಠಿ ಭಾಷಿಕರು ಹೆಚ್ಚಿರುವ ಪ್ರದೇಶಗಳಲ್ಲಿ, ಬೆಳಗಾವಿ ನಗರ ಹಾಗೂ ಜಿಲ್ಲೆಯಾದ್ಯಂತ ತೀವ್ರ ಕಟ್ಟೆಚ್ಚರ ಘೋಷಿಸಿದ್ದಾರೆ. ಇದರ ನಡುವೆ ಗಡಿ ಭಾಗಗಳಲ್ಲೂ ಹೆಚ್ಚುವರಿ ಪೊಲೀಸ್ ನಿಯೋಜನೆಗೆ ನಗರ ಮತ್ತು ಜಿಲ್ಲಾ ಪೊಲೀಸರು ಮುಂದಾಗಿದ್ದಾರೆ.