ಲಿಂಗಾಯತ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹಕ್ಕಿಗಾಗಿ ಡಿ. 10ರಂದು ಬೆಳಗಾವಿ ಚಲೋ ಹಾಗೂ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ನವಲಗುಂದ:
ಲಿಂಗಾಯತ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹಕ್ಕಿಗಾಗಿ ಡಿ. 10ರಂದು ಬೆಳಗಾವಿ ಚಲೋ ಹಾಗೂ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ಈ ಭಾಗದ ಎಲ್ಲ ಲಿಂಗಾಯತ ಪಂಚಮಸಾಲಿ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಪಂಚಮಸಾಲಿ ಸಮಾಜದ ಬಸವ ಜಯಮೃತ್ಯುಂಜಯ ಶ್ರೀಗಳು ಕರೆ ನೀಡಿದ್ದಾರೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದ ಲಿಂಗಾಯತ ಪಂಚಮಸಾಲಿ ಸಮುದಾಯದವರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ ಘಟನೆ ಖಂಡಿಸಿ ಸುವರ್ಣ ವಿಧಾನಸೌಧ ಎದುರು ಕರಾಳ ದಿನ ಕೂಡ ಆಚರಿಸಲಾಗುವುದು. ಹೋರಾಟವು ಯಾವುದೇ ರಾಜಕೀಯ ಪಕ್ಷ, ವ್ಯಕ್ತಿಯ ವಿರುದ್ಧ ಅಲ್ಲ. ಸಮಾಜದ ಭವಿಷ್ಯದ ಪೀಳಿಗೆಯ ಶೈಕ್ಷಣಿಕ ಉದ್ಯೋಗ ಹಾಗೂ ಸಾಮಾಜಿಕ ನ್ಯಾಯದ ಹಕ್ಕುಗಳಿಗಾಗಿ ಹೋರಾಟ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಸರ್ಕಾರ ಇದ್ದಾಗ ಲಿಂಗಾಯತ ಪಂಚಮಸಾಲಿಗಳು ಬೃಹತ್ ಹೋರಾಟ ನಡೆಸಿದ್ದರಿಂದ 2ಡಿ ಮೀಸಲಾತಿ ನೀಡಲಾಗಿತ್ತು. ಆದರೆ, ಕಾರಣಾಂತರಗಳಿಂದ ಅದು ಈಡೇರಲಿಲ್ಲ. ಪ್ರಸ್ತುತ 2ಎ ಬೇಡಿಕೆ ಕಲ್ಪಿಸಬೇಕು, ಲಿಂಗಾಯತ ಉಪ ಸಮುದಾಯಗಳಿಗೆ ಕೇಂದ್ರ ಸರ್ಕಾರದಲ್ಲಿ ಒಬಿಸಿ ಮೀಸಲಾತಿಗಾಗಿ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ತಿಳಿಸಿದರು.ತಾಲೂಕು ಅಧ್ಯಕ್ಷ ಶಂಕರಗೌಡ ಬಾಳನಗೌಡ್ರ, ನಗರ ಅಧ್ಯಕ್ಷ ಡಾ. ಸುರೇಶ ಕಮ್ಮಾರ, ಪ್ರಧಾನ ಕಾರ್ಯದರ್ಶಿ ಗೌರೀಶ ಕಮತರ, ಸದುಗೌಡ ಪಾಟೀಲ, ಚಂಬಣ್ಣ ಹಾಳದೋಟರ, ಸಿದ್ದಪ್ಪ ಜನ್ನರ, ಮಹೇಶ ಕುರ್ತಕೋಟಿ, ದ್ಯಾಮನಗೌಡ ಪಾಟೀಲ, ರವಿ ತೋಟದ ಸೇರಿ ಹಲವರಿದ್ದರು.2-ಎ ಮೀಸಲಾತಿಗೆ ಆಗ್ರಹಿಸಿ ಕಳೆದ ಆರು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಸಾಮಾಜಿಕ ನ್ಯಾಯ ಸಿಗುವ ವರೆಗೆ ಹೋರಾಟ ನಿರಂತರವಾಗಿರುತ್ತದೆ.
ಡಾ. ಸುರೇಶ ಕಮ್ಮಾರ ಅಧ್ಯಕ್ಷರು, ಅಖಿಲ ಭಾರತ ದೀಕ್ಷ ಪಂಚಮಸಾಲಿ ಸಮಾಜ ನವಲಗುಂದ ನಗರ ಘಟಕ