9ರಂದು ಬೆಳಗಾವಿ ಚಲೋ, ಸುವರ್ಣ ಸೌಧ ಮುತ್ತಿಗೆ: ರೈತ ಸಂಘ

| Published : Dec 07 2024, 12:31 AM IST

ಸಾರಾಂಶ

ರೈತರು, ಕೃಷಿಗೆ ಮಾರಕವಾದ ಮೂರೂ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಕೈ ಬಿಡಬೇಕು, ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದಿಂದ ವಾಸುದೇವ ಮೇಟಿ ನೇತೃತ್ವದಲ್ಲಿ ಡಿ.9ರಂದು ಬೆಳಗಾವಿ ಚಲೋ, ಸುವರ್ಣ ಸೌಧ ಮುತ್ತಿಗೆ ಹಮ್ಮಿಕೊಳ್ಳಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಮೂರು ಕೃಷಿ ತಿದ್ದುಪಡಿ ಕಾಯ್ದೆಗಳ ಕೈಬಿಡಬೇಕು: ಗುಮ್ಮನೂರು ಬಸವರಾಜ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ರೈತರು, ಕೃಷಿಗೆ ಮಾರಕವಾದ ಮೂರೂ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಕೈ ಬಿಡಬೇಕು, ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದಿಂದ ವಾಸುದೇವ ಮೇಟಿ ನೇತೃತ್ವದಲ್ಲಿ ಡಿ.9ರಂದು ಬೆಳಗಾವಿ ಚಲೋ, ಸುವರ್ಣ ಸೌಧ ಮುತ್ತಿಗೆ ಹಮ್ಮಿಕೊಳ್ಳಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯಲ್ಲಿ ನೀರಾವರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ರೈತರು ಬೆಳೆದ ಬೆಳೆಗಳಿಗೆ ಖರೀದಿ ಕೇಂದ್ರಗಳನ್ನು ತಕ್ಷಣ ಸ್ಥಾಪಿಸಬೇಕು. ಎಲ್ಲ ಜಿಲ್ಲೆಗಳಲ್ಲಿ ಬಗರ್‌ಹುಕುಂ ಸಾಗುವಳಿದಾರರಿಗೆ ತಕ್ಷಣ ಸಭೆ ಕರೆದು, ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವ ಕೆಲಸ ಆಗಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ ಸಂಖ್ಯೆ ಜೋಡಣೆ ಕೈ ಬಿಡಬೇಕು ಎಂದು ಆಗ್ರಹಿಸಿದರು.

ಜಗಳೂರು ತಾಲೂಕಿನಲ್ಲಿ ವಿಂಡ್ ಮಿಲ್ ಅಳವಡಿಸುವ ಹಾವ‍ಳಿ ಹೆಚ್ಚುತ್ತಲೇ ಇದೆ. ಇದಕ್ಕೆ ಮೊದಲು ಕಡಿವಾಣ ಹಾಕಬೇಕು. ಜಗಳೂರು ತಾಲೂಕಿನಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ಅನುಷ್ಠಾನಗೊಳಿಸಬೇಕು. ಜಗಳೂರಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಬೇಕು. ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಮಂಡಳಿ ಹೆಸರು ಬರುತ್ತಿರುವುದನ್ನು ತಕ್ಷಣ ತಡೆದು, ಈ ಬಗ್ಗೆ ಗೆಜೆಟ್‌ ನೋಟಿಫಿಕೇಷನ್ ಹೊರಡಿಸಬೇಕು ಎಂದು ಒತ್ತಾಯಿಸಿದರು.

ರೈತರು ಬೆಳೆದ ಬೆಳೆಗಳಿಗೆ ಬೆಳೆವಿಮೆ ಜಾರಿಗೊಳಿಸಬೇಕು. ಬೆಳೆವಿಮೆ ಪರಿಹಾರವನ್ನೂ ಸಮರ್ಪಕವಾಗಿ ನೀಡಬೇಕು. ಅತಿವೃಷ್ಠಿಯಿಂದ ನಷ್ಟದ ಕಾರಣಕ್ಕೆ ರೈತರ ಖಾತೆಗೆ ಪರಿಹಾರದ ಹಣ ಜಮಾ ಮಾಡಬೇಕು. ದಾವಣಗೆರೆ ಜಿಲ್ಲೆಯಿಂದ ಸುಮಾರು 300 ರೈತರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಹಸ್ರಾರು ರೈತರು ಬೆಳಗಾವಿ ಚಲೋ ಹೋರಾಟದಲ್ಲಿ ಭಾಗಿಯಾಗಿ, ಅಲ್ಲಿನ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ ಎಂದು ಗುಮ್ಮನೂರು ಬಸವರಾಜ ತಿಳಿಸಿದರು.

ಸಂಘದ ಮುಖಂಡರಾದ ಕೋಲ್ಕುಂಟೆ ಉಚ್ಚಂಗಪ್ಪ, ಚಿಕ್ಕಬೂದಿಹಾಳ್ ಭಗತ್ ಸಿಂಹ, ಕುಮಾರ ಭರಮಸಮುದ್ರ, ಚಿಕ್ಕತೊಗಲೇರಿ ಮಲ್ಲಿಕಾರ್ಜುನ, ಕಿರಣಕುಮಾರ ನಿಂಗನಹಳ್ಳಿ ಇತರರು ಇದ್ದರು.

- - - -6ಕೆಡಿವಿಜಿ3.ಜೆಪಿಜಿ:

ದಾವಣಗೆರೆಯಲ್ಲಿ ಶುಕ್ರವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.